ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರಿಯ ತೋಟದಲ್ಲಿ ಹಗಲಲ್ಲೇ ಕಂಡ ಚಿರತೆ

ಸೋಮಲಾಪುರದಲ್ಲಿ ಚಿರತೆ ದಾಳಿಗೆ ನಾಯಿ ಬಲಿ
Last Updated 19 ಡಿಸೆಂಬರ್ 2018, 13:57 IST
ಅಕ್ಷರ ಗಾತ್ರ

ಕಂಪ್ಲಿ: ತಾಲ್ಲೂಕಿನ ಮೆಟ್ರಿ ಗ್ರಾಮದ ತೋಟವೊಂದರಲ್ಲಿ ಬುಧವಾರ ಮಧ್ಯಾಹ್ನ 12.30ಕ್ಕೆ ಹಾಡುಹಗಲೇ ಚಿರತೆ ಕಾಣಿಸಿಕೊಂಡಿದ್ದರೆ, ಸೋಮಲಾಪುರ ಗ್ರಾಮದಲ್ಲಿ ಬುಧವಾರ ಬೆಳಿಗಿನ ಜಾವ ಮನೆ ಮುಂದೆ ಮಲಗಿದ್ದ ನಾಯಿಯನ್ನು ಹೊತ್ತೊಯ್ದಿದೆ.

‘ಮೆಟ್ರಿ ಗ್ರಾಮದ ರಡ್ಡೇರು ವೀರನಗೌಡ ಅವರ ತೋಟದ ಪಂಪ್‌ಸೆಟ್‌ ಕೊಠಡಿ ಪಕ್ಕದ ಮಾವಿನಮರದ ಮೇಲೆ ಚಿರತೆ ಕುಳಿತಿರುವುದನ್ನು ಕಣ್ಣಾರೆ ಕಂಡೆವು’ ಎಂದು ಗ್ರಾಮದ ಕಬ್ಬೇರು ನಾಗೇಂದ್ರ, ಎಚ್‌. ಹುಲೆಪ್ಪ, ಬಸವ ತಿಳಿಸಿದರು. ನಂತರ ‘ಚಿರತೆ ಹಳ್ಳದ ಕಡೆ ಹೋಗುತ್ತಿರುವುದನ್ನು ನೋಡಿದೆ’ ಎಂದು ಗದ್ದೆಯಲ್ಲಿ ಕೂಲಿ ಕೆಲ ನಿರ್ವಹಿಸುತ್ತಿದ್ದ ಮೌನೇಶ್ವರಿ, ದನಗಾಹಿ ಸಿ.ಡಿ. ಮಾರೆಮ್ಮ ತಿಳಿಸಿದರು.

ಈ ವಿಷಯ ಹರಡುತ್ತಿದ್ದಂತೆ ಗ್ರಾಮದ ಕೆಲವರು ಧಾವಿಸಿ ತೋಟ ಮತ್ತು ಪಕ್ಕದ ಹಳ್ಳದ ಬೇಲಿ ಪೊದೆಯಲ್ಲಿ ಹುಡುಕಾಡಿದರು. ಆದರೆ ಚಿರತೆ ಸುಳಿವು ದೊರಕಲಿಲ್ಲ. ಸದ್ಯ ಹಳ್ಳದ ಬಳಿ ಬೋನ್‌ ಇರಿಸಲಾಗಿದೆ.

ಸೋಮಲಾಪುರ ಗ್ರಾಮದ ನಾಯ್ಕರ ತಿಪ್ಪೇಶಿ ಬುಧವಾರ ಬೆಳಗಿನ ಜಾವ 4ರ ಸುಮಾರಿಗೆ ಪ್ರಕೃತಿ ಕರೆಗೆ ಹೊರ ಬಂದಾಗ ಸರ್ಕಾರಿ ಶಾಲೆಯ ಕಾಂಪೌಂಡ್‌ ಗೇಟ್‌ನಿಂದ ಚಿರತೆ ಹೊರಬರುವುದನ್ನು ಕಂಡರು. ‘ಕ್ಷಣ ಹೊತ್ತು ಮರೆಯಲ್ಲಿ ನಿಂತು ನಿರೀಕ್ಷಿಸುತ್ತಿದ್ದಾಗ ಶಾಲಾ ಕಾಂಪೌಂಡ್‌ ಮುಂದಿನ ಬೋರ್‌ವೆಲ್‌ ಬಳಿ ಮಲಗಿದ್ದ ಸಾಕು ನಾಯಿಯನ್ನು ಏಕಾಏಕಿ ಕಚ್ಚಿಕೊಂಡು ಕಾಂಪೌಂಡ್‌ ಒಳಗೆ ಹೋಯಿತು’ ಎಂದು ತಿಳಿಸಿದರು.

‘ನಂತರ ಈ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದೆ. ಆಗ ಶಾಲಾ ಕಾಂಪೌಂಡ್‌ ಒಳಗೆ ಹೋಗಿ ನೋಡಿದಾಗ ನಾಯಿ ತಿನ್ನುವಾಗ ಒಂದೇ ಕಡೆ ರಕ್ತ ಚೆಲ್ಲಿರುವುದು, ಚಿರತೆ ಹೆಜ್ಜೆ ಗುರುತುಗಳು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು’ ಎಂದರು.

ತಮಿಳುನಾಡು ರಾಜ್ಯದ ಬಾತುಕೋಳಿ ಸಾಕಾಣೆದಾರರು ದೇವಲಾಪುರ–ಸುಗ್ಗೇನಹಳ್ಳಿ ರಸ್ತೆಯ ಭತ್ತದ ಗದ್ದೆಯಲ್ಲಿ ಬೀಡು ಬಿಟ್ಟಿದ್ದಾರೆ. ‘ಮಂಗಳವಾರ ರಾತ್ರಿ ಹಟ್ಟಿ ಮೇಲೆ ದಾಳಿ ನಡೆಸಿದ ಚಿರತೆ ಸುಮಾರು 15 ಬಾತುಕೋಳಿಗಳನ್ನು ಬಲಿ ಪಡೆದಿದೆ’ ಎಂದು ಸುತ್ತಲಿನ ರೈತರು ತಿಳಿಸಿದರು.

ಪರಿಶೀಲನೆ: ‘ಸೋಮಲಾಪುರ ಶಾಲಾ ಆವರಣ ಪರಿಶೀಲಿಸಿದ್ದು, ಚಿರತೆ ಹೆಜ್ಜೆಗಳು ಸ್ಪಷ್ಟವಾಗಿ ಕಂಡುಬಂದಿವೆ. ಗ್ರಾಮದ ಬಾಲಕನ್ನು ಹೊತ್ತೊಯ್ದ ತಿಂದು ಹಾಕಿದ್ದ ಎರದಮಟ್ಟಿ ಪ್ರದೇಶದಲ್ಲಿ ಈಗಾಗಲೇ ದಟ್ಟ ಬೇಲಿ ಪೊದೆಗಳನ್ನು ತೆರವುಗೊಳಿಸಲಾಗಿದೆ. ಅಲ್ಲಿ ಸ್ಥಳ ಬಯಲಾಗಿರುವುದರಿಂದ ಜಾಡು ಬದಲಿಸಿರುವ ಚಿರತೆ ಪೂರ್ವ ಭಾಗದಿಂದ ಗ್ರಾಮಕ್ಕೆ ಪ್ರವೇಶಿಸಿ ನಾಯಿ ಬಲಿ ಪಡೆದಿದೆ’ ಎಂದು ಆರ್‌.ಎಫ್‌.ಒ ಟಿ. ಭಾಸ್ಕರ ತಿಳಿಸಿದರು.

‘ಚಿರತೆ ಸೆರೆಗೆ ಇಲಾಖೆಯ 35ಜನರು ಮತ್ತು ಗ್ರಾಮಸ್ಥರ ಸಹಕಾರದಿಂದ ಸೋಮಲಾಪುರ ಬೆಟ್ಟ ಪ್ರದೇಶದಿಂದ ದರೋಜಿ ಬೆಟ್ಟದವರೆಗೆ ಕೋಬಿಂಗ್‌ ಕಾರ್ಯಾಚರಣೆ ನಡೆಸಲಾಯಿತು’ ಎಂದು ಹೇಳಿದರು.

‘ಚಿರತೆ ಮಗು ಬಲಿ ಪಡೆದು ಒಂಭತ್ತು ದಿನ ಕಳೆದಿದೆ. ಚಿರತೆ ಸೆರೆ ಹಿಡಿಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಚಿರತೆ ಸೆರೆಗೆ ಡ್ರೋಣ್‌ ಕ್ಯಾಮೆರಾ ಬಳಸಬೇಕು. ಗ್ರಾಮಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದ ಜಿಲ್ಲಾಧಿಕಾರಿಗಳು ಇಂದಿಗೂ ಸುಳಿದಿಲ್ಲ. ಚಿರತೆ ಉಪಟಳ ಬಿಗಡಾಯಿಸಿದ್ದು, ಜಿಲ್ಲಾಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸದಿದ್ದಲ್ಲಿ ಹೋರಾಟ ಅನಿವಾರ್ಯ’ ಎಂದು ಎಸ್‌.ಕೆ. ಚಂದ್ರಗೌಡ, ಬಿ.ಎಂ. ಗಂಗಾಧರಸ್ವಾಮಿ, ವಿ. ಮಾರೇಶ್‌, ಎನ್‌. ಮಂಜುನಾಥ, ಆರ್‌. ಯರ್ರೆಪ್ಪ, ಎಚ್‌. ಬಾಷಾಸಾಬ್‌ ಎಚ್ಚರಿಸಿದರು.

’ಮೆಟ್ರಿ, ದೇವಲಾಪುರ, ಸೋಮಲಾಪುರ ಗ್ರಾಮದಲ್ಲಿ ಚಿರತೆ ಸೆರೆಗಾಗಿ ತಜ್ಞರ ವಿಶೇಷ ತಂಡ ರಚಿಸಬೇಕು. ಈ ಮೂರು ಗ್ರಾಮದಲ್ಲಿ ಚಿರತೆ ದಾಳಿಯಿಂದ ಆತಂಕ ಮನೆ ಮಾಡಿದ್ದು, ಶೀಘ್ರ ಗ್ರಾಮಸಭೆ ನಡೆಸಿ ಜನರಲ್ಲಿ ಸ್ಥೈರ್ಯ ತುಂಬುವ ಕೆಲಸ ಜಿಲ್ಲಾಡಳಿತ ಮಾಡಬೇಕು’ ಎಂದುತಾಲ್ಲೂಕು ಪಂಚಾಯ್ತಿ ಸದಸ್ಯಸಿ.ಡಿ. ಮಹದೇವ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT