ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿವಿ | ಅಧಿಕಾರ ಅವಧಿ ವಿಸ್ತರಣೆಗೆ ಲಾಬಿ; ಕುಲಪತಿ ವಿರುದ್ಧ ಪತ್ರ ಸಮರ

ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಯಿಂದ ರಾಜ್ಯಪಾಲರಿಗೆ ದೂರು
Last Updated 18 ಫೆಬ್ರುವರಿ 2022, 9:56 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ವಿರುದ್ಧ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ನೌಕರರ ಸಂಘದವರು ಪತ್ರ ಸಮರ ಸಾರಿದ್ದಾರೆ.

ಫೆ. 21ರಂದು ರಮೇಶ ಅವರ ಅಧಿಕಾರದ ಅವಧಿ ಕೊನೆಗೊಳ್ಳಲಿದೆ. ಆರು ತಿಂಗಳಿನಿಂದ ಒಂದು ವರ್ಷದ ಅವಧಿಗೆ ಅಧಿಕಾರದ ಅವಧಿ ವಿಸ್ತರಣೆಗೆ ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ವಿಷಯ ತಿಳಿದಿರುವ ನೌಕರ ಸಂಘದವರು ಅವರ ವಿರುದ್ಧ ಪತ್ರ ಚಳವಳಿ ನಡೆಸಿದ್ದಾರೆ. ಅದರ ಭಾಗವಾಗಿ ರಾಜ್ಯಪಾಲ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಉನ್ನತ ಶಿಕ್ಷಣ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇದೇ ವೇಳೆ ವಿಜಯನಗರ ಜಿಲ್ಲಾ ವಾಲ್ಮೀಕಿ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಸರ್ಕಾರಕ್ಕೆ ಪತ್ರ ಬರೆದು, ರಮೇಶ ಅವರನ್ನು ಮುಂದುವರೆಸದಂತೆ ಹಕ್ಕೊತ್ತಾಯ ಮಾಡಿವೆ.

ರಮೇಶ ಅವರ ಅವಧಿಯಲ್ಲಿ ಮುಂಬಡ್ತಿ, ಪ್ರೊಬೇಷನರಿ ಘೋಷಣೆ, ಪಿಂಚಣಿ, ಶಿಷ್ಯವೇತನ, ಪಿಎಚ್‌.ಡಿ ಕೊಲೊಕ್ವಿಯಂಗೆ ಲಂಚ ಪಡೆಯಲಾಗಿದೆ ಎಂಬ ಗಂಭೀರ ಆರೋಪಗಳನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮಾಡಿದ್ದಾರೆ.

ಈ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರ ವಿರುದ್ಧ ಆರೋಪ ಮಾಡಿರುವ ಪ್ರಾಧ್ಯಾಪಕರನ್ನು ವರ್ಗಾವಣೆ ಸೇರಿದಂತೆ ಇತರೆ ಸೌಲಭ್ಯಗಳಿಂದ ವಂಚಿಸಿ, ಸೇಡಿನ ಕ್ರಮ ಜರುಗಿಸುತ್ತಿದ್ದಾರೆ.

ಈ ಬಗ್ಗೆ ರಾಜ್ಯದ ಅನೇಕ ಲೇಖಕರು, ಸಂಘ ಸಂಸ್ಥೆಗಳು ಕೂಡ ಧ್ವನಿ ಎತ್ತಿವೆ. ಹೀಗಾಗಿ ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆ ಆರಂಭಿಸಬೇಕು. ನೂತನ ಕುಲಪತಿ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿಶ್ವವಿದ್ಯಾಲಯದ ಅಧಿನಿಯಮದ ಪ್ರಕಾರ, ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೊಬ್ಬರನ್ನು ಪ್ರಭಾರ ಕುಲಪತಿಯಾಗಿ ನೇಮಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಕುರಿತು ಸಿಂಡಿಕೇಟ್‌ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕುಲಪತಿ ವಿರುದ್ಧದ ಗುರುತರ ಆರೋಪಗಳ ಕುರಿತು ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸಲು ಸಿಂಡಿಕೇಟ್‌ ಸಭೆ ತೀರ್ಮಾನ ತೆಗೆದುಕೊಂಡು ತಿಂಗಳಿಗೂ ಹೆಚ್ಚು ಸಮಯ ಕಳೆದಿದೆ. ಆದರೆ, ಇದುವರೆಗೆ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ. ಕೂಡಲೇ ತನಿಖೆ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಯುಜಿಸಿ ನಿಯಮ, ಮೀಸಲಾತಿ ನಿಯಮ ಅನುಸರಿಸಿಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿರುವ ಹಾಲಿ ಕುಲಪತಿಯವರನ್ನು ಮುಂದುವರೆಸುವುದು ಸೂಕ್ತವಲ್ಲ. 38 ತಿಂಗಳಿಂದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಿಲ್ಲ. ಸಾಂಸ್ಥಿಕ ನೈತಿಕ ಮೌಲ್ಯ ಕುಸಿಯುವಂತೆ ಮಾಡಿರುವ ರಮೇಶ ಅವರ ಅಧಿಕಾರದ ಅವಧಿ ಯಾವುದೇ ಕಾರಣಕ್ಕೂ ವಿಸ್ತರಿಸಬಾರದು. ಅವರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕೆಂದು ವಿಜಯನಗರ ಜಿಲ್ಲಾ ವಾಲ್ಮೀಕಿ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಎಚ್‌. ಬಸವರಾಜ ಆಗ್ರಹಿಸಿದ್ದಾರೆ.

ಈ ಕುರಿತು ಕುಲಪತಿ ಪ್ರೊ.ಸ.ಚಿ. ರಮೇಶ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT