ಸೋಮವಾರ, ಆಗಸ್ಟ್ 19, 2019
22 °C
ತಗ್ಗಿದ ತುಂಗಭದ್ರಾ ಜಲಾಶಯದ ಒಳ– ಹೊರಹರಿವು

ಸಹಜ ಸ್ಥಿತಿಯತ್ತ ಹಂಪಿ

Published:
Updated:
Prajavani

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಮತ್ತು ಹೊರಹರಿವು ಸೋಮವಾರ ಗಣನೀಯ ಪ್ರಮಾಣದಲ್ಲಿ ತಗ್ಗಿದ್ದು, ನದಿ ಪಾತ್ರದ ಊರುಗಳು ಸಹಜ ಸ್ಥಿತಿಗೆ ಮರಳುತ್ತಿವೆ.

ಭಾನುವಾರ ಮೂರು ಲಕ್ಷ ಕ್ಯುಸೆಕ್‌, ಸೋಮವಾರ 2.12 ಲಕ್ಷ ಕ್ಯುಸೆಕ್‌ ನೀರು ಹರಿಸಿದ್ದರಿಂದ ತಾಲ್ಲೂಕಿನ ಹಂಪಿ ತಳವಾರಘಟ್ಟ ರಸ್ತೆ ಮೇಲೆ ನೀರು ಹರಿದಿತ್ತು. ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಸಂಪರ್ಕ ಕಡಿದು ಹೋಗಿತ್ತು. ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಪ್ರವಾಸಿಗರು ಅಚ್ಯುತರಾಯ ದೇವಸ್ಥಾನದಿಂದ 2 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿದ್ದರು. 

ತಳವಾರಘಟ್ಟ, ಹಂಪಿ ಸುತ್ತಮುತ್ತಲಿನ ಬಾಳೆ ತೋಟಗಳಿಗೆ ನೀರು ನುಗ್ಗಿದ್ದರಿಂದ ರೈತರು ತೆಪ್ಪದಲ್ಲಿ ಓಡಾಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಎದುರು ಬಸವಣ್ಣ ಮಂಟಪದ ಎದುರು ಎರಡರಿಂದ ಮೂರು ಅಡಿಗಳಷ್ಟು ನೀರು ನಿಂತಿತ್ತು. ಸೋಮವಾರ ಜಲಾಶಯದಿಂದ ನದಿಗೆ 1,15,954 ಕ್ಯುಸೆಕ್‌ಗೆ ನೀರು ತಗ್ಗಿಸಿದ್ದರಿಂದ ನದಿ ಪಾತ್ರದಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ತಳವಾರಘಟ್ಟ ರಸ್ತೆ, ಎದುರು ಬಸವಣ್ಣ ಮಂಟಪ ಎದುರು ಜಮಾಯಿಸಿದ್ದ ನೀರು ಖಾಲಿಯಾಗಿದೆ. ವಾಹನ ಸಂಚಾರ ಎಂದಿನಂತೆ ಸುಗಮಗೊಂಡಿದೆ. ಬಾಳೆ ತೋಟಗಳಿಂದ ನೀರು ಹರಿದು ಹೋಗಿದ್ದು, ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ 1,35,615 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. 1,633 ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1,632.04 ಅಡಿ (97.014 ಟಿ.ಎಂ.ಸಿ.) ನೀರು ಭರ್ತಿಯಾಗಿದೆ. ಒಳಹರಿವು ಇದೇ ಪ್ರಮಾಣದಲ್ಲಿ ಇದ್ದರೆ ಮತ್ತೆ ಹೆಚ್ಚುವರಿ ನೀರು ಹರಿಸುವ ಅನಿವಾರ್ಯತೆ ಸೃಷ್ಟಿಯಾಗಿ, ನದಿ ಪಾತ್ರ ಪುನಃ ಮೈದುಂಬಿಕೊಂಡು ಹರಿಯಬಹುದು.

ನೀರಿನಲ್ಲಿ ಮುಳುಗಡೆಯಾಗಿರುವ ಪುರಂದರ ಮಂಟಪ, ಚಕ್ರತೀರ್ಥ, ವಿಜಯನಗರ ಕಾಲದ ಕಾಲು ಸೇತುವೆ ಈಗಲೂ ಅದೇ ಸ್ಥಿತಿಯಲ್ಲಿವೆ. ಯಾವುದೇ ಸಂದರ್ಭದಲ್ಲಿ ನದಿಗೆ ಹೆಚ್ಚುವರಿ ನೀರು ಹರಿಸಬಹುದು. ಯಾರು ಕೂಡ ನದಿ ಪಾತ್ರದಲ್ಲಿ ಓಡಾಡಬಾರದು ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.

Post Comments (+)