‘ಪ್ರಾಣ ಕೈಯಲ್ಲಿ ಹಿಡಿದು ಜೀವಸ್ಬೇಕು’

7

‘ಪ್ರಾಣ ಕೈಯಲ್ಲಿ ಹಿಡಿದು ಜೀವಸ್ಬೇಕು’

Published:
Updated:
Deccan Herald

ಕಂಪ್ಲಿ: ‘ಹೊಳೆಗೆ ನೀರು ಬಂದ್ರೆ ಸಾಕು ಮನೆ ಮಂದಿಯೆಲ್ಲ ನಿದ್ರೆಗೆಡಬೇಕು. ಯಾವಾಗ ನೀರು ಮನ್ಯಾಗ ಬರ್ತಾವೋ ಗೊತ್ತಿಲ್ಲ. ಹೊಳ್ಯಾಗ ನೀರು ತಗ್ಗೊವರೆಗೆ ಎಲ್ರೂ ಪ್ರಾಣ ಕೈಯಲ್ಲಿ ಹಿಡಿದು ಜೀವ್ನ ಮಾಡ್ಬೇಕು’

ಇಲ್ಲಿಯ ಕೋಟೆ ಪ್ರದೇಶದಲ್ಲಿ ವಾಸವಾಗಿರುವ ಮೀನುಗಾರರ ಕುಟುಂಬದ ಕಲಾವತಿ ಮೇಲಿನಂತೆ ಹೇಳಿದರು.

ತುಂಗಭದ್ರಾ ಜಲಾಶಯದಿಂದ ನದಿಗೆ 2 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸುತ್ತಿರುವುದರಿಂದ ಕಂಪ್ಲಿಯ ನದಿ ಅಂಚಿನಲ್ಲಿರುವ ಮೀನುಗಾರರ ಮನೆಗಳಿಗೆ ನೀರು ನುಗ್ಗಿದೆ. ಮನೆಯಿದ್ದರೂ ಅದರೊಳಗೆ ಇರಲಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ತಗ್ಗುವವರೆಗೆ ತಾಲ್ಲೂಕು ಆಡಳಿತವು ಎಲ್ಲ ಮೀನುಗಾರರ ಕುಟುಂಬದವರಿಗೆ ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದೆ. ಅವರಿದ್ದ ಜಾಗಕ್ಕೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿ ಮಾತನಾಡಿಸಿದಾಗ ಕಲಾವತಿ ಹಾಗೂ ಮೀನುಗಾರರ ಕುಟುಂಬದ ಇತರೆ ಸದಸ್ಯರು ತಮ್ಮ ನೋವು ತೋಡಿಕೊಂಡರು.

‘ಪ್ರತಿ ಸಲ ನದಿಯಲ್ಲಿ ಪ್ರವಾಹ ಬಂದಾಗ ಮನೆ ಬಿಟ್ಟು ಬೇರೆ ಕಡೆ ಹೋಗಿ ಇರಬೇಕಾಗುತ್ತದೆ. ನಮಗೆ ಸರ್ಕಾರ ಸೂಕ್ತ ಸೌಲಭ್ಯ ಕಲ್ಪಿಸದೆ ಶಾಲೆಯಲ್ಲಿ ಉಳಿಸುತ್ತದೆ. ನೀರು ತಗ್ಗುವವರೆಗೆ ಆಕಾಶ ನೋಡುತ್ತ ದಿನ ದೂಡಬೇಕು. ಆದಕಾರಣ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು. ಬೇರೆ ಕಡೆ ನಿವೇಶನ ಕಲ್ಪಿಸಬೇಕು’ ಎಂದು ಕಲಾವತಿ ಆಗ್ರಹಿಸಿದರು. ಅವರ ಮಾತಿಗೆ ಅಲ್ಲಿಯೇ ಇದ್ದ ಪಿ. ಮಲ್ಲಮ್ಮ, ಜ್ಯೋತಿ, ಮಲ್ಲಿಕಾ, ಕರಿಬಸಮ್ಮ, ಮಣಿಯಮ್ಮ ಹೂಂ... ಎಂದು ಉದ್ಗಾರ ತೆಗೆದು ದನಿಗೂಡಿಸಿದರು.

‘ಒಟ್ಟು ಆರು ಕುಟುಂಬದ ಸದಸ್ಯರಿಗೆ ಈ ಶಾಲೆಯಲ್ಲಿ ಉಳಿದುಕೊಳ್ಳಲು ಸರ್ಕಾರ ವ್ಯವಸ್ಥೆ ಮಾಡಿದೆ. 25 ಕೆ.ಜಿ. ಅಕ್ಕಿ, 1 ಕೆ.ಜಿ. ತೊಗರಿ ಬೇಳೆ ನೀಡಿದ್ದಾರೆ. ಅವರೆಲ್ಲ ಮನೆಗೆ ಹಿಂತಿರುಗುವವರೆಗೆ ಅದರಲ್ಲೇ ಜೀವನ ನಡೆಸಬೇಕು. ಶಾಲೆಯಲ್ಲಿ ರಾತ್ರಿ ವೇಳೆ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲ. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಲ್ಲದ ಕಾರಣ ಸೊಳ್ಳೆಗಳ ಕಾಟ ತೀವ್ರವಾಗಿದೆ. ರಾತ್ರಿ ಮಲಗಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ’ ಎಂದು ಮಣಿಯಮ್ಮ ಹೇಳಿದರು.

‘ನದಿಯ ಕಚ್ಚಾ ನೀರನ್ನೇ ಕೊಳಾಯಿಗಳಿಗೆ ಪೂರೈಸುತ್ತಿದ್ದಾರೆ. ಸರ್ಕಾರ ವ್ಯವಸ್ಥೆ ಮಾಡಿದರೆ ಎಲ್ಲವೂ ಸರಿಯಾಗಿ ಇರಬೇಕು. ಕನಿಷ್ಠ ಶುದ್ಧ ನೀರು, ಒಳ್ಳೆಯ ಪರಿಸರದಲ್ಲಿ ನಮ್ಮನ್ನು ಇರಿಸದಿದ್ದರೆ ಏನು ಪ್ರಯೋಜನ. ಸೊಳ್ಳೆಗಳಿಂದ ಕಡಿಸಿಕೊಂಡು ಮಲೇರಿಯಾ, ಚಿಕುನ್‌ಗುನ್ಯಾ ತರಿಸಿಕೊಳ್ಳಬೇಕಾಗುತ್ತದೆ’ ಎಂದು ನೋವು ತೋಡಿಕೊಂಡರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !