ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ: ಹತೋಟಿ ಕ್ರಮಕ್ಕೆ ಪರಿಸರಾಸಕ್ತರ ಒತ್ತಾಯ

ಮುಳ್ಳಯ್ಯನಗಿರಿ, ಬಾಬಾ ಬುಡನ್‌ಗಿರಿ ಶ್ರೇಣಿಯಲ್ಲಿ ಅಪಾರ ಹಾನಿ
Last Updated 7 ಮಾರ್ಚ್ 2018, 9:22 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನ ಮುಳ್ಳಯ್ಯನಗಿರಿ, ಬಾಬಾ ಬುಡನ್‌ಗಿರಿ ಶ್ರೇಣಿಗಳಲ್ಲಿ ದೊಡ್ಡ ಬೆಂಕಿ ಕಾಣಿಸಿದ್ದು ಮೂರ್ನಾಲ್ಕು ದಿನಗಳಿಂದ ಹತೋಟಿಗೆ ಬಂದಿಲ್ಲ. ಬೆಂಕಿಯ ಕೆನ್ನಾಲಿಗೆಗೆ ಶೋಲಾ ಕಾಡು, ಹುಲ್ಲುಗಾವಲು ಸುಟ್ಟಿವೆ.

ಚಂದ್ರದ್ರೋಣ ಪರ್ವತ ಶ್ರೇಣಿ, ಚುರ್ಚೆಗುಡ್ಡ ಮೀಸಲು ಅರಣ್ಯದಲ್ಲಿ ಬೆಂಕಿ ಬಿದ್ದು ನೂರಾರು ಎಕರೆಯಲ್ಲಿನ ಕಾಡು ನಾಶವಾಗಿದೆ. ಬೆಂಕಿ ಕೆನ್ನಾಲಿಗೆಗೆ ವನ್ಯಜೀವಿಗಳು ದಿಕ್ಕೆಟ್ಟಿವೆ. ಬಾನಾಡಿಗಳು, ಕಪ್ಪೆ, ಹಾವುಗಳು ಆಹುತಿಯಾಗಿವೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ಕಡವೆ ಮರಿಯೊಂದು ಹೊನ್ನಮ್ಮನ ಹಳ್ಳದ ಬಳಿ ಬಿದ್ದು ಮೃತಪಟ್ಟಿದೆ. ಅತ್ತಿಗುಂಡಿ ಬಳಿಯ ಹೊನ್ನಮ್ನನ ಹಳ್ಳದ ಮೇಲ್ಭಾಗ, ಮಾಣಿಕ್ಯಧಾರಾ ಬೆಟ್ಟ ಸಾಲಿನಲ್ಲಿ ಬೆಂಕಿಗೆ ಸಸ್ಯಗಳು, ವನ್ಯಜೀವಿ ಸಂಕುಲ ನಾಶವಾಗಿದೆ

ಔಷಧೀಯ ಸಸ್ಯಗಳು, 12 ವರ್ಷ ಗಳಿಗೊಮ್ಮೆ ಹೂ ಬಿಡುವ ನೀಲ ಕುರಂಜಿ ಸಸ್ಯಗಳು ಸುಟ್ಟಿವೆ. ನೀರಿನ ಉಗಮಕ್ಕೆ ಕಾರಣವಾದ ಹುಲ್ಲುಗಾವಲು, ಶೋಲಾ ಕಾಡುಗಳು ಸುಟ್ಟಿರುವುದರಿಂದ ಗಿರಿಶ್ರೇಣಿಯ ಜಲಮೂಲಗಳೂ ನಾಶವಾಗುವ ಭೀತಿ ಆವರಿಸಿದೆ.

ಮುಳ್ಳಯ್ಯನ ಗಿರಿ, ಬಾಬಾಬುಡನ್‌ ಗಿರಿ, ಚುರ್ಚೆಗುಡ್ಡ ಮೀಸಲು ಅರಣ್ಯ, ಸುತ್ತಲಿನ ಪ್ರದೇಶಗಳಲ್ಲಿ ಬೆಂಕಿ ಅನಾಹುತಗಳು ಹೆಚ್ಚುತ್ತಿದ್ದರೂ ಅರಣ್ಯ ಇಲಾಖೆಯವರು ಹತೋಟಿಗೆ ಸನ್ನದ್ಧರಾಗಿಲ್ಲ.

ಮುಂಜಾಗ್ರತ ಕ್ರಮ ಕೈಗೊಂಡಿಲ್ಲ. ಬೆಂಕಿ ನಂದಿಸಲು, ಬೀಳದಂತೆ ಎಚ್ಚರವಹಿಸಲು ಬೆಂಕಿ ವೀಕ್ಷಕರನ್ನು ನೇಮಿಸಿಕೊಳ್ಳಬೇಕಿತ್ತು. ಅಲ್ಲಲ್ಲಿ ಬೆಂಕಿ ನಿಗ್ರಹ ಶಿಬಿರಗಳನ್ನು ತೆರೆದು, ಸಿಬ್ಬಂದಿಯನ್ನು ಸಜ್ಜುಗೊಳಿಸಬೇಕಿತ್ತು. ಉದ್ದೇಶ ಪೂರ್ವಕವಾಗಿ ಕಾಡಿಗೆ ಬೆಂಕಿ ಹೊತ್ತಿಸುವವರನ್ನು ಹಿಡಿದು ಪ್ರಕರಣ ದಾಖಲಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಉತ್ಸಾಹ ತೋರುತ್ತಿಲ್ಲ, ಹೀಗಾಗಿ, ಕಿಡಿಗೇಡಿಗಳು ಕೈಚಳಕ ತೋರುತ್ತಿದ್ದಾರೆ. ಬೆಂಕಿಯಿಂದ ತೋಟ ರಕ್ಷಿಸಿಕೊಳ್ಳಲು ಸ್ಥಳೀಯ ಕಾಫಿ ತೋಟದವರೇ ಬೆಂಕಿ ಹಚ್ಚುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಮುತ್ತೋಡಿ ಪ್ರಾದೇಶಿಕ ವಲಯ ಹಾಗೂ ಚಿಕ್ಕಮಗಳೂರು, ಕಡೂರು, ಮೂಡಿಗೆರೆ ವಲಯ ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ತಮ್ಮ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಉಂಟಾಗುವ ಬೆಂಕಿಯನ್ನು ತಹಬದಿಗೆ ತರಲು ಮುಂದಾಗಬೇಕು. ಬೆಂಕಿ ಬೀಳದಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಹಿರಿಯ ಅಧಿಕಾರಿಗಳು ಆದೇಶಿಸಬೇಕು ಎಂದು ಪರಿಸರಾಸಕ್ತರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT