ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತಬ್ಧಗೊಂಡ ಹೊಸಪೇಟೆ, ಮೂವರಿಗೆ ಸೋಂಕು; ಹೆದರಿದ ಜನ

Last Updated 31 ಮಾರ್ಚ್ 2020, 11:19 IST
ಅಕ್ಷರ ಗಾತ್ರ

ಹೊಸಪೇಟೆ: ಸೋಮವಾರ ಸಂಜೆ ಇಲ್ಲಿನ ಎಸ್‌.ಆರ್‌. ನಗರದ ಮೂವರಲ್ಲಿ ಕೊರೊನಾ ಸೋಂಕು ಇರುವುದು ದೃಢವಾಗುತ್ತಿದ್ದಂತೆ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಲಾಕ್‌ಡೌನ್‌ ಲೆಕ್ಕಿಸದೆ ತರಕಾರಿ, ದಿನಸಿ ಖರೀದಿಸಲು ಮುಗಿಬೀಳುತ್ತಿದ್ದ ದೃಶ್ಯ ನಗರದಲ್ಲಿ ಕೆಲವು ದಿನಗಳಿಂದ ಸಾಮಾನ್ಯವಾಗಿತ್ತು. ಆದರೆ, ಮಂಗಳವಾರ ಆ ದೃಶ್ಯ ಕಂಡು ಬರಲಿಲ್ಲ. ಬಹುತೇಕರು ಮನೆಯಿಂದ ಹೊರಗೆ ಬರಲಿಲ್ಲ. ಬೆಳಿಗ್ಗೆ ಬೆರಳೆಣಿಕೆಯಷ್ಟು ಜನ ಡೈರಿಗೆ ಬಂದು ಹಾಲು ತೆಗೆದುಕೊಂಡು ಹೋದವರು ಪುನಃ ಹೊರಗಡೆ ಬರಲಿಲ್ಲ.

ನಗರದ ಅನೇಕ ಕಡೆ ಬ್ಯಾರಿಕೇಡ್‌ಗಳನ್ನು ಹಾಕಿದ್ದರೂ ಜನ, ಅದರಲ್ಲೂ ಯುವಕರು ಒಟ್ಟೊಟ್ಟಿಗೆ ಮೂರ್ನಾಲ್ಕು ಮಂದಿ ಕುಳಿತುಕೊಂಡು ನಗರದಾದ್ಯಂತ ಓಡಾಡುತ್ತಿದ್ದರು. ಮಂಗಳವಾರ ಆ ದೃಶ್ಯ ಕಂಡು ಬರಲಿಲ್ಲ. ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿಯ ವಾಹನಗಳಷ್ಟೇ ನಗರದಲ್ಲಿ ಕಾಣಿಸಿಕೊಳ್ಳುತ್ತಿವೆ. ಸಕಾರಣವಿಲ್ಲದೆ ಹೊರಗೆ ಓಡಾಡುತ್ತಿರುವವರ ವಿರುದ್ಧ ಪೊಲೀಸರು ಕಠಿಣವಾಗಿ ನಡೆದುಕೊಳ್ಳುತ್ತಿದ್ದಾರೆ.

ಸ್ವತಃ ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌, ಡಿವೈಎಸ್ಪಿ ವಿ. ರಘುಕುಮಾರ ನೇತೃತ್ವದಲ್ಲಿ ಪೊಲೀಸರು ನಗರದಾದ್ಯಂತ ಸಂಚರಿಸಿ, ಜನ ಹೊರಗೆ ಓಡಾಡದಂತೆ ತಡೆಯುತ್ತಿದ್ದಾರೆ. ಮಾತು ಕೇಳದವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ.

ಇಷ್ಟು ದಿನ ಕೊರೊನಾ ಸೋಂಕಿತರು ಜಿಲ್ಲೆಯಲ್ಲಿ ಯಾರು ಇಲ್ಲ ಎಂಬ ಅತಿ ಆತ್ಮವಿಶ್ವಾಸದಿಂದ ಜನ ಎಲ್ಲೆಡೆ ಓಡಾಡುತ್ತಿದ್ದರು. ಆದರೆ, ಮಂಗಳವಾರ ಸ್ವಯಂ ಅವರೇ ದಿಗ್ಬಂಧನ ಹಾಕಿಕೊಂಡಿದ್ದರು. ಬಹುತೇಕ ರಸ್ತೆಗಳು ನಿರ್ಜನಗೊಂಡಿದ್ದವು. ಇಡೀ ನಗರ ಸ್ತಬ್ಥಗೊಂಡಿತ್ತು.
ಪಟೇಲ್‌ ನಗರಕ್ಕೆ ಸಂಪರ್ಕ ಕಲ್ಪಿಸುವ ಕಿರು ರಸ್ತೆಗಳಲ್ಲಿ ಸ್ಥಳೀಯರು ಮುಳ್ಳಿನ ಬೇಲಿ ಹಾಕಿಕೊಂಡು ಹೊರಗಿನವರು ಬಡಾವಣೆಗೆ ಬರದಂತೆ ತಡೆದಿದ್ದರು. ಚಪ್ಪರದಹಳ್ಳಿ ಸೇರಿದಂತೆ ಹಲವೆಡೆ ಜನ ರಸ್ತೆಗೆ ಅಡ್ಡವಾಗಿ ಕಲ್ಲು, ಚಕ್ಕಡಿಗಳನ್ನು ನಿಲ್ಲಿಸಿರುವುದು ಕಂಡು ಬಂತು.
ತಪಾಸಣೆ: ‘ಅಂಗನವಾಡಿ, ಆಶಾ ಕಾರ್ಯಕರ್ತೆಯರು ನಗರದಲ್ಲಿರುವ ಪ್ರತಿಯೊಂದು ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನ ಗುಣಲಕ್ಷಣಗಳಿದ್ದವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಡುತ್ತಿದ್ದಾರೆ’ ಎಂದು ಹಿರಿಯ ಆರೋಗ್ಯ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಎಸ್‌.ಆರ್‌. ನಗರಕ್ಕೆ ಉಪವಿಭಾಗಾಧಿಕಾರಿ

ಮೂವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟ ಇಲ್ಲಿನ ಎಸ್‌.ಆರ್‌. ನಗರಕ್ಕೆ ಮಂಗಳವಾರ ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಡಾವಣೆಗೆ ಸಂಪರ್ಕ ಕಲ್ಪಿಸುವ ನಾಲ್ಕು ದಿಕ್ಕಿನ ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿ ಪೊಲೀಸರು ಬಂದೋಬಸ್ತ್‌ ಮಾಡಿದ್ದಾರೆ. ಒಳ ಹೋಗುವವರು, ಹೊರ ಬರುವವರನ್ನು ತಡೆದು ವಾಪಸ್‌ ಕಳುಹಿಸುತ್ತಿದ್ದಾರೆ. ಬೆಳಿಗ್ಗೆ ನಗರಸಭೆಯಿಂದ ಬಡಾವಣೆ ಹಾಗೂ ಅದರ ಆಸುಪಾಸಿನ ಜಾಗದಲ್ಲಿ ರಸಾಯನಿಕ ಸಿಂಪಡಿಸಲಾಯಿತು.

ಕೊರೊನಾ ಸೋಂಕಿತರಲ್ಲಿ ಇಬ್ಬರು ಹೆಣ್ಣು ಮಕ್ಕಳು

ಸೋಂಕೊ ದೃಢಪಟ್ಟ ಹೊಸಪೇಟೆ ಎಸ್‌.ಆರ್‌. ನಗರದ ಒಂದೇ ಕುಟುಂಬದ ಮೂವರಲ್ಲಿ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಪುರುಷ ಸೇರಿದ್ದಾನೆ. ಮಹಿಳೆಯರಲ್ಲಿ ಒಬ್ಬರಿಗೆ 26 ವರ್ಷ, ಮತ್ತೊಬ್ಬರಿಗೆ 48 ಹಾಗೂ 52 ವರ್ಷದ ಪುರುಷ ಸೇರಿದ್ದಾನೆ. ಮಾ. 16ರಂದು ಮೂವರು ಒಟ್ಟಿಗೆ ಬೆಂಗಳೂರಿಗೆ ಹೋಗಿ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT