ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ‌ ಹೆಸರೇ ಬಿಜೆಪಿ‌ ಬಲ: ಶ್ರೀರಾಮುಲು

Last Updated 21 ಏಪ್ರಿಲ್ 2019, 11:08 IST
ಅಕ್ಷರ ಗಾತ್ರ

ಬಳ್ಳಾರಿ: ಮೋದಿಯ ಹೆಸರಿನ ಬಲದಿಂದ ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ ಗೆಲ್ಲುವುದು ಖಚಿತ' ಎಂದು ಶಾಸಕ‌ ಬಿ.ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಕ್ಷೇತ್ರದ ಎಲ್ಲೆಡೆ ಸಂಚರಿಸಿ ಪ್ರಚಾರ ನಡೆಸಿದ್ದಾರೆ. ಎಲ್ಲ ಮುಖಂಡರೂ ಪ್ರಚಾರ ನಡೆಸಿದ್ದಾರೆ. ರಾಜ್ಯದಲ್ಲಿ 22 ಕ್ಷೇತ್ರದಲ್ಲಿ ಪಕ್ಷ ಗೆಲ್ಲುವ ‌ವಿಶ್ವಾಸವಿದೆ 'ಎಂದು ‌ತಿಳಿಸಿದರು.

'ಆದಾಯ ತೆರಿಗೆ ಇಲಾಖೆಯು, ಅನುಮಾನ ಬಂದವರ ಮೇಲೆ ದಾಳಿ‌ ನಡೆಸುವುದು ಸಹಜ. ರಾಜ್ಯದ ಎಲ್ಲೆಡೆಯೂ ನಡೆಯುತ್ತಿದೆ. ಅದರ ಬಗ್ಗೆ‌ ಮುಖ್ಯ ಮಂತ್ರಿಯವರಿಗೆ ಗೊತ್ತು. ನನಗೆ ಗೊತ್ತಿಲ್ಲ' ಎಂದರು.

' ದೇವೇಂದ್ರಪ್ಪ‌ ಸಂಬಂಧಿ ರಮೇಶ್ ಜಾರಕಿಹೊಳಿ ಪ್ರಚಾರ ನಡೆಸಿಲ್ಲ' ಎಂದು ಸ್ಪಷ್ಟಪಡಿಸಿದ್ದರು.

'ನಾನು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಏಕವಚನದಲ್ಲಿ ಉಲ್ಲೇಖಿಸಬಾರದಿತ್ತು. ಆದ್ದರಿಂದ ಅವರೂ ನನ್ನ ಬಗ್ಗೆ ಹಾಗೆಯೇ ಮಾತನಾಡಿದ್ದಾರೆ' ಎಂದ ಅವರು, 'ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮೋದಿ ಕುರಿತು ಏಕವಚನದಲ್ಲಿ ಸಂಬೋಧಿಸಿರುವುದು ಅವರ ಸಂಸ್ಕೃತಿಯನ್ನು ತೋರುತ್ತದೆ' ಎಂದರು.

'ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ವಿರೋಧಿಸಿದವರು‌ ವೈಕುಂಠವಾಸಿಗಳಾಗಿರಬಹುದು. ಆದರೆ ಅವರ ವಿರೋಧಿಗಳು ಹಲವರು ಇನ್ನೂ ಭೂಮಿ ಮೇಲಿದ್ದಾರೆ' ಎಂದು‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ಆರು ತಿಂಗಳಿಂದ ಗದಗ್ನಲ್ಲಿ ವಾಸಿಸುತ್ತಿರುವುದರಿಂದ, ಅಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಿರುವುದರಿಂದ ಅಲ್ಲಿ ಮತದಾನ ಮಾಡಲು ಅವಕಾಶ‌ ಕೊಡಿ ಎಂದು ಜಿ.ಜನಾರ್ದನರೆಡ್ಡಿ ಬಳ್ಳಾರಿ ತಹಶೀಲ್ದಾರ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮನೆ ಬಾಡಿಗೆ ಕರಾರು ಪತ್ರದಲ್ಲಿ ಮನೆ ಮಾಲೀಕರಾದ‌ ನನ್ನ ಹೆಸರು ಇಲ್ಲದಿರುವುದರಿಂದ ಅರ್ಜಿ ತಿರಸ್ಕೃತಗೊಂಡಿದ್ದು ಮರು ಅರ್ಜಿ ಸಲ್ಲಿಸಲಾಗಿದೆ. ಸೋಮವಾರ ಆ ಬಗ್ಗೆ‌ ತೀರ್ಪು ಪ್ರಕಟಗೊಳ್ಳುವ ‌ನಿರೀಕ್ಷೆ‌ ಇದೆ' ಎಂದರು.

'ಮೋದಿ ಬಗೆಗಿನ ಅಭಿಮಾನ ಏಕವ್ಯಕ್ತಿ ಪೂಜೆಯಾಗಿರುವುದರಲ್ಲಿ ತಪ್ಪೇನಿಲ್ಲ. ಕಾಂಗ್ರೆಸ್ ಕೂಡ ಇಂದಿರಾಗಾಂಧಿಯವರನ್ನು ಆರಾಧಿಸುತ್ತಿತ್ತಲ್ಲವೇ' ಎಂದರು.

ಶಾಸಕ‌ ಜಿ.ಸೋಮಶೇಖರ ರೆಡ್ಡಿ, ಪಕ್ಷದ‌ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ, ಮುಖಂಡರಾದ ಎಸ್. ಜೆ.ವಿ‌.ಮಹಿಪಾಲ್, ಎಚ್.ಹನುಮಂತಪ್ಪ, ಮುರಾರಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT