ಪೌರಾಣಿಕ ಪಾತ್ರಕ್ಕೆ ಜೀವ ತುಂಬುವ ಕಲಾವಿದ

ಶನಿವಾರ, ಏಪ್ರಿಲ್ 20, 2019
29 °C
‘ಶಕುನಿ’ ಪಾತ್ರದಿಂದ ಖ್ಯಾತಿಯಾಗಿರುವ ಮಜ್ಜಿಗಿ ಬಸವರಾಜ

ಪೌರಾಣಿಕ ಪಾತ್ರಕ್ಕೆ ಜೀವ ತುಂಬುವ ಕಲಾವಿದ

Published:
Updated:
Prajavani

ಹೂವಿನಹಡಗಲಿ: ತಾಲ್ಲೂಕಿನ ಕೊಂಬಳಿ ಗ್ರಾಮದ ಹವ್ಯಾಸಿ ರಂಗಭೂಮಿ ಕಲಾವಿದ ಮಜ್ಜಿಗಿ ಬಸವರಾಜ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ರೌದ್ರ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

‘ರಕ್ತರಾತ್ರಿ’ ನಾಟಕದ ‘ಶಕುನಿ’ ಪಾತ್ರಕ್ಕೆ ಜೀವ ತುಂಬುವ ಅವರು ಕುಹಕ ನಗು, ವಿಶಿಷ್ಟ ಶೈಲಿಯ ಮಾತುಗಾರಿಕೆ, ಸಹಜ ಅಭಿನಯದ ಮೂಲಕ ಮನೆ ಮಾತಾಗಿದ್ದಾರೆ.

20ನೇ ವಯಸ್ಸಿಗೆ ಬಣ್ಣ ಹಚ್ಚಿದ ಬಸವರಾಜ ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಖಳನಾಯಕನ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಪ್ರತಿ ವರ್ಷ ಊರಿನ ಜಾತ್ರೆಯ ಸಂದರ್ಭದಲ್ಲಿ ಏರ್ಪಡಿಸುವ ನಾಟಕ ಪ್ರದರ್ಶನಗಳಲ್ಲಿ ಅವರು ಅಭಿನಯಿಸುತ್ತಾರೆ.

ಮಜ್ಜಿಗಿ ಬಸವರಾಜ ಹುಟ್ಟಿದ್ದು ಮುಂಡರಗಿ ತಾಲ್ಲೂಕು ಶೀರನಹಳ್ಳಿಯಲ್ಲಿ, ಬೆಳೆದದ್ದು ತಾಲ್ಲೂಕಿನ ಕೊಂಬಳಿಯಲ್ಲಿ. ಬಾಲ್ಯದಲ್ಲಿರುವಾಗಲೇ ಕೊಂಬಳಿ ಗ್ರಾಮದಲ್ಲಿನ ರಂಗ ಪರಿಸರದಿಂದ ಪ್ರೇರಣೆಗೊಂಡು ಅವರು ನಟನೆಯ ಆಸಕ್ತಿ ಬೆಳೆಸಿಕೊಂಡವರು. ಮೊದಲು ‘ಕುರುಕ್ಷೇತ್ರ’ ಬಯಲಾಟದಲ್ಲಿ ‘ಅಶ್ವತ್ಥಾಮ’ ಪಾತ್ರವನ್ನು ನಿರ್ವಹಿಸಿ ಕಲಾ ರಸಿಕರ ಮೆಚ್ಚುಗೆಗೆ ಪಾತ್ರವಾಗಿದ್ದರು. ಬಳಿಕ ‘ಗುರಿ ಸಾಧಿಸಿದ ಗಂಡು’ ‘ಕುಡುಕ ಕಟ್ಟಿದ ತಾಳಿ’, ‘ಕಲಿಯುಗದ ಸೀತೆ’ ಸಾಮಾಜಿಕ ನಾಟಕಗಳಲ್ಲಿ ಖಳನಾಯಕನ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ‘ಸೈ’ ಎನಿಸಿಕೊಂಡವರು.

‘ರಕ್ತರಾತ್ರಿ’ ಪೌರಾಣಿಕ ನಾಟಕದಲ್ಲಿನ ‘ಶಕುನಿ’ ಪಾತ್ರ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದೆ. ಕೊಂಬಳಿ, ಶೀರನಹಳ್ಳಿ ಮತ್ತು ದಾವಣಗೆರೆಯಲ್ಲಿ ಈ ನಾಟಕ ಐದು ಪ್ರದರ್ಶನ ಕಂಡಿದೆ. ಜನರು ರೂಢಿಗತವಾಗಿ ‘ಶಕುನಿ’ ಎಂದೇ ಕರೆಯುವ ಮಟ್ಟಿಗೆ ಅವರು ಆ ಪಾತ್ರಕ್ಕೆ ಜೀವ ತುಂಬಿದವರು.

‘ಸಾಮಾಜಿಕ ನಾಟಕವೇ ಇರಲಿ, ಪೌರಾಣಿಕ ನಾಟಕವೇ ಆಗಿರಲಿ ಮಜ್ಜಿಗಿ ಬಸವರಾಜ ಪಾತ್ರಗಳ ಮೂಲಕ ಪರಕಾಯ ಪ್ರವೇಶ ಮಾಡುತ್ತಾರೆ. ‘ರಕ್ತರಾತ್ರಿ’ ನಾಟಕದಲ್ಲಿ ಅವರು ‘ಶಕುನಿ’ ಪಾತ್ರ ನಿರ್ವಹಿಸುವ ಪರಿ ಬೆರಗು ಮೂಡಿಸುತ್ತದೆ. ರಂಗ ಸಜ್ಜಿಕೆಯನ್ನೇ ನಡುಗಿಸುವಂತಹ ಕುಹಕ ನಗು, ನೈಜ ಅಭಿನಯ ರೋಮಾಂಚನ ಉಂಟು ಮಾಡುತ್ತದೆ’ ಎಂದು ಗ್ರಾಮದ ಜನರು ನೆನಪಿಸಿಕೊಳ್ಳುತ್ತಾರೆ.

‘ಕೊಂಬಳಿಯಲ್ಲಿದ್ದ ರಂಗ ಪರಿಸರ ನನ್ನಲ್ಲಿ ನಟನೆಯ ಆಸೆ ಚಿಗುರಿಸಿತು. ಚಿಕ್ಕವನಿದ್ದಾಗ ರಂಗ ತಾಲೀಮುಗಳಿಗೆ ಹೋಗಿ ವೀಕ್ಷಿಸುತ್ತಿದ್ದೆ. ಹಿರಿಯ ಕಲಾವಿದರ ಅಭಿನಯ ನೋಡಿ ನಾನೂ ಅವರಂತೆ ಆಗುವ ಕನಸು ಕಾಣುತ್ತಿದ್ದೆ. ನಿರಂತರ ಪ್ರಯತ್ನ ಪಟ್ಟಿದ್ದರಿಂದ ಆ ಅವಕಾಶ ನನಗೂ ಒದಗಿ ಬಂತು’ ಎಂದು ನೆನಪಿಸಿಕೊಳ್ಳುವ ಬಸವರಾಜ, ‘ಪಾತ್ರಗಳು ಯಾವುದೇ ಇರಲಿ ಸಮರ್ಥವಾಗಿ ನಿರ್ವಹಿಸಬಲ್ಲೆ’ ಎನ್ನುತ್ತಾರೆ.

‘ಪೌರಾಣಿಕ ನಾಟಕಕ್ಕೆ ಪ್ರೇಕ್ಷಕರ ಕೊರತೆಯಿಲ್ಲ. ಆದರೆ, ರಕ್ತರಾತ್ರಿ ನಾಟಕ ಪ್ರದರ್ಶನಕ್ಕೆ ಸುಮಾರು ₹1.50 ಲಕ್ಷಕ್ಕೂ ಹೆಚ್ಚು ಖರ್ಚು ಬರುವುದರಿಂದ ಗ್ರಾಮೀಣ ಭಾಗದಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನ ಕಡಿಮೆಯಾಗಿವೆ. ನಾವೆಲ್ಲಾ ₹10 ಸಾವಿರ ವಂತಿಗೆ ಹಾಕಿಕೊಂಡು ಪಾತ್ರ ಮಾಡುತ್ತೇವೆ. ಸರ್ಕಾರ ವಿಶೇಷವಾಗಿ ಪೌರಾಣಿಕ ನಾಟಕಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು’ ಎಂದು ಅವರು ಒತ್ತಾಯಿಸುತ್ತಾರೆ.
 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !