ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚ್ಚಂಗಿದುರ್ಗ: ಹೂವಿನ ಬೆಳೆಗೆ ಬೆಂಕಿ ಹಚ್ಚಿದ ರೈತರು

Last Updated 8 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಉಚ್ಚಂಗಿದುರ್ಗ: ಕೋವಿಡ್ -19 ಸೋಂಕು ತಡೆಗಟ್ಟಲು ಲಾಕ್ ಡೌನ್ ಘೋಷಣೆಯಾಗಿರುವ ಕಾರಣ ಬಳ್ಳಾರಿ ಜಿಲ್ಲೆಯ ಗಡಿಭಾಗದ ರೈತರು ಬೆಳೆದ ಹೂಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ ಸಮೀಪದ ಚಿಕ್ಕಮೆಗಳಗೆರೆಯ ಕೆಲ ರೈತರು ಪರದಾಡುತ್ತಿದ್ದಾರೆ. ಕೆಲವರು ಹೂವಿನ ಬೆಳೆಗೆ ಬೆಂಕಿ ಹಚ್ಚಿದ್ದಾರೆ.

ಬರ ಪರಿಸ್ಥಿತಿಯ ನಡುವೆಯೂ ಗ್ರಾಮದ ಹತ್ತು ಕುಟುಂಬಗಳು ತಮ್ಮ ಜಮೀನಿನಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಸೇವಂತಿಗೆ, ಕಾಕಡ, ಮಲ್ಲಿಗೆ, ಗಿಲಾಡಿಯ, ನೆಲಬಳ್ಳು ಹೂಗಳನ್ನು ಬೆಳೆದಿದ್ದರು.

ಆದರೆ, ದಿಗ್ಬಂಧನ ಆದೇಶದಿಂದಾಗಿ ತರಕಾರಿ ಸಾಗಣೆ ಮತ್ತು ವಹಿವಾಟಿನಲ್ಲಿ ವ್ಯತ್ಯಯವಾಗಿ ಹೂವಿನ ಬೆಲೆ ಏಕಾಏಕಿ ಕುಸಿತ ಕಂಡಿದೆ. ಗಣನೀಯವಾಗಿ ಕುಸಿದಿರುವುದರಿಂದ ಬೇಸರಗೊಂಡ ರೈತರು ಬೆಳೆಯನ್ನು ನಾಶಪಡಿಸಲು ಮುಂದಾಗಿದ್ದಾರೆ.

‘ಕೊರೊನಾ ಸೋಂಕಿನ ಹರಡುವಿಕೆಯಿಂದಾಗಿ ಅಂತರಜಿಲ್ಲಾ ಗಡಿಗಳ ಬಂದ್‌ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ದಾವಣಗೆರೆ ಜಿಲ್ಲಾ ಕೇಂದ್ರಕ್ಕೆ ಸಂಚಾರ ಸೇವೆ ಸ್ಥಗಿತಗೊಂಡಿರುವುದರಿಂದ ಗ್ರಾಮದಿಂದ ಕೇವಲ 15 ಕಿ.ಮೀ ದೂರದ ದಾವಣಗೆರೆ ಜಿಲ್ಲಾ ಕೇಂದ್ರಕ್ಕೆ ರೈತರು ಹೂಗಳನ್ನು ತರಲು ಅವಕಾಶ ಸಿಗುತ್ತಿಲ್ಲ. ಹೂವಿನ ವಹಿವಾಟು ನಡೆಯದೇ ಹೊಲಗಳಲ್ಲಿ ಅರಳಿರುವ ಹೂಗಳು ಬಾಡಲಾರಂಭಿಸಿವೆ. ಬೇರೆ ದಾರಿ ಕಾಣದೇ 2 ಎಕರೆ ಜಮೀನಿನಲ್ಲಿ ಬೆಳೆದಿರುವ ಸೇವಂತಿಗೆ ಬೆಳೆಗೆ ಬೆಂಕಿ ಹಚ್ಚಿರುವುದಾಗಿ ರೈತ ಹುಚ್ಚಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

*
ಮಾರುಕಟ್ಟೆಯಲ್ಲಿ ಹೂಗಳನ್ನು ಕೇಳುವವರಿಲ್ಲ. ಸಾಲ ಮಾಡಿ ಬೆಳೆ ಬೆಳೆದ ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಎದುರಾಗಿದೆ. ಜಿಲ್ಲಾಡಳಿತ ರೈತರ ಸಮಸ್ಯೆಗೆ ಸ್ಪಂದಿಸಬೇಕು
-ಹುಚ್ಚಪ್ಪ, ಹೂವಿನ ಬೆಳೆಗಾರ

*
ಬೇಸಿಗೆಯಲ್ಲಿ ಹಬ್ಬ, ಮದುವೆ ಸಮಾರಂಭ ಹೆಚ್ಚಾಗಿ ನಡೆಯುವುದರಿಂದ ಯುಗಾದಿಗೆ ಹೂ ಬರುವಂತೆ ಬೆಳೆಯಲಾಗಿತ್ತು. ಲಾಕ್‌ಡೌನ್‌ನಿಂದಾಗಿ ಹೂಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಮುಂಗಾರು ಬಿತ್ತನೆಗಾಗಿ ಬೆಳೆ ನಾಶಕ್ಕೆ ಮುಂದಾಗಿದ್ದೇವೆ
-ನಾಗರಾಜ, ರೈತ

*
ಹೂವಿನ ಮಾರುಕಟ್ಟೆಯಲ್ಲಿ ಖರೀದಿದಾರರು ಇಲ್ಲದಿರುವುದರಿಂದ ಹೂವಿನ ಬೆಳೆಗಾರರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ರೈತರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಸಿದ್ಧವಿದೆ.
-ಡಾ.ನಾಗವೇಣಿ, ತಹಶೀಲ್ದಾರ್, ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT