ಮಾಗಳ ಪಂಚಾಯಿತಿಗೆ ಗಾಂಧಿ ಪುರಸ್ಕಾರ

7
ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥೆಗೆ ಮಾದರಿ; ಗಣಕೀಕೃತ ಸೇವೆ

ಮಾಗಳ ಪಂಚಾಯಿತಿಗೆ ಗಾಂಧಿ ಪುರಸ್ಕಾರ

Published:
Updated:
Deccan Herald

ಹೂವಿನಹಡಗಲಿ: ಸರ್ಕಾರಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಆಡಳಿತ ಸುಧಾರಣೆಯಲ್ಲಿನ ಸಾಧನೆಗಾಗಿ ತಾಲ್ಲೂಕಿನ ಮಾಗಳ ಗ್ರಾಮ ಪಂಚಾಯಿತಿಗೆ 2018ನೇ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ ಲಭಿಸಿದೆ.

ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳ ಪೈಕಿ ಮಾಗಳ, ಸೋವೇನಹಳ್ಳಿ, ಹ್ಯಾರಡ ಪಂಚಾಯಿತಿಗಳು ಗಾಂಧಿ ಪುರಸ್ಕಾರದ ಆಯ್ಕೆ ಪಟ್ಟಿಯಲ್ಲಿದ್ದವು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ವಿಧಿಸಿದ್ದ ಮಾನದಂಡಗಳಲ್ಲಿ ಹೆಚ್ಚು ಅಂಕ ಗಳಿಸಿದ ಮಾಗಳ ಪಂಚಾಯಿತಿ ವಿಶೇಷ ಗೌರವಕ್ಕೆ ಪಾತ್ರವಾಗಿದೆ.

ಅಕ್ಟೋಬರ್‌–2ರಂದು ಬೆಂಗಳೂರಿನಲ್ಲಿ ಜರುಗಿದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೃಷ್ಣಭೈರೇಗೌಡ ಅವರು ಮಾಗಳ ಪಂಚಾಯಿತಿ ಅಧ್ಯಕ್ಷೆ ಎಚ್.ನೇತ್ರಾವತಿ, ಅಭಿವೃದ್ಧಿ ಅಧಿಕಾರಿ ಮೊಹಮ್ಮದ್ ಅಲಿ ಅವರನ್ನು ಗೌರವಿಸಿದರು.

ಆಡಳಿತ ಸುಧಾರಣೆಯಲ್ಲಿ ಮಾಗಳ ಪಂಚಾಯ್ತಿ ಇತರೆ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿದೆ. ಇಲ್ಲಿನ ಆಡಳಿತ ವ್ಯವಸ್ಥೆ ಸಂಪೂರ್ಣ ಗಣಕೀಕರಣಗೊಂಡಿದೆ. ಸಾರ್ವಜನಿಕರ ಅಲೆದಾಟ ತಪ್ಪಿಸಲು ಪಂಚಾಯಿತಿಯ ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡುವ ವ್ಯವಸ್ಥೆ ಮಾಡಿದೆ. ಎಲ್ಲ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಪಂಚಾಯಿತಿಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ.

ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಗ್ರಾಮಸಭೆ, ವಾರ್ಡ್‌ ಸಭೆ, ವಸತಿ ಸಮಿತಿ ಸಭೆಗಳನ್ನು ನಡೆಸಿ ಪಂಚತಂತ್ರ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ. ಪಂಚಾಯಿತಿಯಲ್ಲಿ ಅನುಷ್ಠಾನಗೊಂಡ ಎಲ್ಲ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ಆಯಾ ದಿನವೇ ‘ಗಾಂಧಿ ಸಾಕ್ಷಿ ಕಾಯಕ’ ವೆಬ್‌ಸೈಟ್‌ಗೆ ಅಳವಡಿಸಲಾಗಿದೆ.

ನೀರು, ನೈರ್ಮಲ್ಯ ಅಚ್ಚುಕಟ್ಟು:

ಮಾಗಳ ಗ್ರಾಮದಲ್ಲಿ 5,600 ಜನಸಂಖ್ಯೆ ಇದ್ದು, 1,300 ಕುಟುಂಬಗಳಿವೆ. ತುಂಗಭದ್ರಾ ನದಿಯಿಂದ ಪ್ರತಿ ದಿನವೂ ನೀರು ಪೂರೈಕೆ ಮಾಡಲಾಗುತ್ತಿದೆ. ಎರಡು ಶುದ್ಧ ನೀರಿನ ಘಟಕಗಳ ಮೂಲಕ ಎಲ್ಲ ಕುಟುಂಬಗಳಿಗೂ ಶುದ್ಧ ನೀರು ದೊರೆಯುತ್ತಿದೆ. ನೈರ್ಮಲ್ಯ ವ್ಯವಸ್ಥೆ ಅಚ್ಚುಕಟ್ಟಾಗಿದೆ.

‘ಪಂಚಾಯಿತಿ ವ್ಯಾಪ್ತಿಯ 1,180 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಲಾಗಿದೆ. ಬಾಕಿ ಉಳಿದ 112 ಶೌಚಾಲಯ ಕಾಮಗಾರಿಗಳು ಪ್ರಗತಿಯಲ್ಲಿವೆ. ಗ್ರಾಮಸ್ಥರ ಸಹಕಾರದಿಂದ ಕರ ವಸೂಲಾತಿಯಲ್ಲಿಯೂ ಶೇ 75ರಷ್ಟು ಸಾಧನೆ ಮಾಡಲಾಗಿದೆ’ ಎಂದು ಮೊಹಮ್ಮದ್‌ ಅಲಿ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !