ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಬದುಕು ರೂಪಿಸಿದ ಮಜ್ಜಿಗೆ ಮೆಣಸಿನಕಾಯಿ

ಗೃಹ ಕೈಗಾರಿಕೆಯಲ್ಲಿ ಯಶಸ್ಸು ಕಂಡ ಹೂವಿನಹಡಗಲಿಯ ಸಕ್ರಹಳ್ಳಿ ಕೊಟ್ರೇಶ್ ಪರಿವಾರ
Last Updated 14 ನವೆಂಬರ್ 2018, 9:37 IST
ಅಕ್ಷರ ಗಾತ್ರ

ಹೂವಿನಹಡಗಲಿ: ಪಟ್ಟಣದ ಬಸೆಟ್ಟಿಯವರ ಓಣಿಯನ್ನು ಹೊಕ್ಕರೆ ಉಪ್ಪು ಜೀರಿಗೆ ತುಂಬಿದ ಮಜ್ಜಿಗೆ ಮೆಣಸಿನಕಾಯಿಯ ಘಮಲು ಮೂಗಿಗೆ ರಾಚುತ್ತದೆ. ಸಕ್ರಹಳ್ಳಿಯವರ ಮನೆ ಹತ್ತಿರಕ್ಕೆ ಹೋದಂತೆ ಹಪ್ಪಳ ತೀಡುವ ಸದ್ದು ಕಿವಿಗೆ ಅಪ್ಪಳಿಸುತ್ತದೆ.

ಇಲ್ಲಿ ತಯಾರಾಗುವ ಶುಚಿಯಾದ ಕುರುಕಲು ಪದಾರ್ಥಗಳು ಹೂವಿನಹಡಗಲಿ ಸೇರಿದಂತೆ ನೆರೆಯ ತಾಲ್ಲೂಕುಗಳಿಗೂ ಲಗ್ಗೆ ಇಟ್ಟಿವೆ. ಪಟ್ಟಣದ ನಿವಾಸಿ ಸಕ್ರಹಳ್ಳಿ ಕೊಟ್ರೇಶ್ ಕುಟುಂಬದವರು ಗೃಹ ಕೈಗಾರಿಕೆಯಲ್ಲೇ ಸ್ವಾವಲಂಬನೆಯ ಹಾದಿ ಕಂಡುಕೊಂಡಿದ್ದಾರೆ. ಎಂಟು ವರ್ಷದಿಂದ ಮಜ್ಜಿಗೆ ಮೆಣಸಿನಕಾಯಿ, ಉಪ್ಪಿನಕಾಯಿ, ಹಪ್ಪಳ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ರುಚಿ ಮತ್ತು ಗುಣಮಟ್ಟ ಕಾಯ್ದುಕೊಂಡು ಬಂದಿರುವುದರಿಂದ ಇವರ ಕಿರು ಉದ್ಯಮ ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತ ಸಾಗಿದೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕು ಸೊನ್ನ ಗ್ರಾಮದವರಾದ ಕೊಟ್ರೇಶ್ ಅವರದು ಕೃಷಿ ಕುಟುಂಬ. ಇವರಿಗೆ ಸಾಕಷ್ಟು ಭೂಮಿ ಇದ್ದರೂ ಸತತ ಬರಗಾಲದಿಂದ ಕೃಷಿಯಲ್ಲಿ ನಷ್ಟ ಅನುಭವಿಸಿ, 15 ವರ್ಷಗಳ ಹಿಂದೆ ಪಟ್ಟಣಕ್ಕೆ ಬಂದು ಸ್ವ ಉದ್ಯೋಗ ಆರಂಭಿಸಿದರು.

ಜೀವನ ನಿರ್ವಹಣೆಗಾಗಿ ಮೊದಲು ಪಟ್ಟಣದ ಕೊಟ್ಟೂರೇಶ್ವರ ದೇವಸ್ಥಾನದ ಬಳಿ ಸಣ್ಣದೊಂದು ಅಂಗಡಿಯನ್ನು ಪ್ರಾರಂಭಿಸಿದರು. ಪಕ್ಕದಲ್ಲೇ ಇದ್ದ ಎಸ್.ವಿ.ಜಿ. ಶಾಲೆಯ ಮಕ್ಕಳು ಕುರುಕಲು ಪದಾರ್ಥಗಳಿಗೆ ಇವರ ಅಂಗಡಿಗೆ ಮುಗಿ ಬೀಳುತ್ತಿದ್ದರು. ಮಕ್ಕಳ ಕೋರಿಕೆ ಮೇರೆಗೆ ಕೊಟ್ರೇಶರ ತಾಯಿ ಸರೋಜಮ್ಮ ಮಾವಿನಕಾಯಿಗಳನ್ನು ಹೆಚ್ಚಿ ಉಪ್ಪು, ಖಾರ ಹಾಕಿ ಕೊಡುತ್ತಿದ್ದರು.

‘ಅಂಗಡಿಗೆ ಮಾವಿನಕಾಯಿ ಪೂರೈಸುತ್ತಿದ್ದ ತೋಟದವರು ಒಮ್ಮೆ ಚೀಲಗಟ್ಟಲೆ ಮಾವಿನಕಾಯಿ ತಂದು ಹಾಕಿದ್ದರು. ಆಗ ಅನಿವಾರ್ಯವಾಗಿ ಉಪ್ಪಿನಕಾಯಿ ತಯಾರಿಸಬೇಕಾಯಿತು. ಇದನ್ನು ನೆರೆಹೊರೆಯವರು ಇಷ್ಟಪಟ್ಟು ಖರೀದಿಸಿದರು. ಇದು ಉಪ್ಪಿನಕಾಯಿ ಉದ್ಯಮ ಆರಂಭಿಸಲು ಪ್ರೇರೇಪಿಸಿತು’ ಎಂದು ಕೊಟ್ರೇಶ್ ಹೇಳಿದರು.

ಪ್ರತಿವರ್ಷ ವಿಶೇಷ ತಳಿಯ 30 ಕ್ವಿಂಟಲ್‌ ಮಾವು, 20 ಕ್ವಿಂಟಲ್‌ ನಿಂಬೆ ಉಪ್ಪಿನಕಾಯಿ ತಯಾರಿಸುತ್ತಾರೆ. 70–80 ಚೀಲ ಹಸಿ ಮೆಣಸಿನಕಾಯಿ ಖರೀದಿಸಿ 3–4 ಕ್ವಿಂಟಲ್‌ನಷ್ಟು ಮಜ್ಜಿಗೆ ಮೆಣಸಿನಕಾಯಿ ಸಿದ್ಧಪಡಿಸುತ್ತಾರೆ. ಕೊಟ್ರೇಶ್ ಅವರ ತಾಯಿ ಸರೋಜಮ್ಮ, ಪತ್ನಿ ರೋಹಿಣಿ, ಮಗಳು ನಿಂಗಮ್ಮ ಉಪ್ಪಿನಕಾಯಿ ಮತ್ತು ಮಜ್ಜಿಗೆ ಮೆಣಸಿನಕಾಯಿ ತಯಾರಿಕೆಗೆ ಕೈ ಜೋಡಿಸುತ್ತಾರೆ. ಮೆಣಸಿನಕಾಯಿ ಕೊರೆದು, ಉಪ್ಪು ಜೀರಿಗೆ ತುಂಬಲು ನಾಲ್ಕೈದು ಜನ ಮಹಿಳೆಯರಿಗೂ ಕೆಲಸ ನೀಡುತ್ತಾರೆ. ಬೇಡಿಕೆಗೆ ತಕ್ಕಂತೆ ಹೆಸರು, ಮಡಿಕೆ, ಅಲಸಂದಿ, ಅಕ್ಕಿಯ ಹಪ್ಪಳವನ್ನೂ ತಯಾರಿಸುತ್ತಾರೆ.

ತಮ್ಮಲ್ಲಿ ತಯಾರಾಗುವ ಪದಾರ್ಥಗಳನ್ನು ಕೊಟ್ರೇಶ್ ಅವರು ಹಡಗಲಿ, ಹಿರೇಹಡಗಲಿ, ಮಾಗಳ, ಹೊಳಲು, ಸೋಗಿಯ ವಾರದ ಸಂತೆಗಳಲ್ಲಿ ಮಾರಾಟ ಮಾಡುತ್ತಾರೆ. ಮಾವಿನಕಾಯಿ ಉಪ್ಪಿನಕಾಯಿ ಪ್ರತಿ ಕೆಜಿಗೆ ₹80, ನಿಂಬೆ ಉಪ್ಪಿನಕಾಯಿ ಕೆಜಿಗೆ ₹60, ಮಜ್ಜಿಗೆ ಮೆಣಸಿನಕಾಯಿ ಪ್ರತಿ ಕೆಜಿಗೆ ₹200 ಹಾಗೂ ₹10, ₹20 ಪ್ಯಾಕೆಟ್‌ಗಳನ್ನು ಸಿದ್ದಪಡಿಸಿ ಮಾರುತ್ತಾರೆ. ಶಾಲಾ ಬಿಡುವಿನ ವೇಳೆಯಲ್ಲಿ ಮಕ್ಕಳಾದ ಅಶ್ವಥ್, ಗುರುಬಸವರಾಜ ಮಾರಾಟಕ್ಕೆ ಸಾಥ್‌ ನೀಡುತ್ತಾರೆ.

ವರ್ಷದ ಎಲ್ಲ ದಿನಗಳಲ್ಲೂ ಇವರಲ್ಲಿ ರುಚಿಯಾದ ಉಪ್ಪಿನಕಾಯಿ, ಮಜ್ಜಿಗೆ ಮೆಣಸಿನಕಾಯಿ ದೊರೆಯುತ್ತವೆ. ದೂರದ ನಗರಗಳಲ್ಲಿ ನೆಲೆಸಿರುವ ನೌಕರ ವರ್ಗದವರು ಇವರ ಪದಾರ್ಥಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಕೊಂಡೊಯ್ಯುತ್ತಾರೆ.

‘ನಮ್ಮ ಕಿರು ಉದ್ಯಮದಿಂದ ಕುಟುಂಬದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ. ರುಚಿ ಮತ್ತು ಗುಣಮಟ್ಟ ಕಾಯ್ದುಕೊಂಡು ಬಂದಿರುವುದರಿಂದ ನಮ್ಮದೇ ಆದ ಗ್ರಾಹಕ ವಲಯ ಸೃಷ್ಟಿಯಾಗಿದೆ. ವರ್ಷದಿಂದ ವರ್ಷಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ’ ಎಂದು ಕೊಟ್ರೇಶ್ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT