ನೆಮ್ಮದಿ ತರುವ ರಾಜಿ ಸಂಧಾನ: ನ್ಯಾಯಾಧೀಶ ಖಾಸಿಂ ಚೂರಿಖಾನ್‌

7
ಜಿಲ್ಲಾ ನ್ಯಾಯಾಲಯದಲ್ಲಿ ಲೋಕ ಅದಾಲತ್‌

ನೆಮ್ಮದಿ ತರುವ ರಾಜಿ ಸಂಧಾನ: ನ್ಯಾಯಾಧೀಶ ಖಾಸಿಂ ಚೂರಿಖಾನ್‌

Published:
Updated:
Deccan Herald

ಬಳ್ಳಾರಿ: ‘ಯಾವುದೇ ವ್ಯಾಜ್ಯವಿದ್ದರೂ ಎರಡೂ ಕಡೆಯವರಿಗೆ ರಾಜಿ ಸಂಧಾನ ನೆಮ್ಮದಿ ತರುತ್ತದೆ. ಅದಕ್ಕಾಗಿಯೇ ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ ಅನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಖಾಸಿಂ ಚೂರಿಖಾನ್‌ ಹೇಳಿದರು.

ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಲೋಕ ಅದಾಲತ್‌ಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಿ ಸಂಧಾನದ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳಲು ವಕೀಲರನ್ನು ನೇಮಿಸಿಕೊಳ್ಳುವುದು ಕಡ್ಡಾಯವಾಗಿಲ್ಲ. ನ್ಯಾಯಾಲಯ ಶುಲ್ಕವೂ ಇರುವುದಿಲ್ಲವಾದ್ದರಿಂದ ಇದು ಕಡಿಮೆ ವೆಚ್ಚದ ಪ್ರಯತ್ನ’ ಎಂದು ಹೇಳಿದರು.

‘ನ್ಯಾಯಾಲಯಗಳಲ್ಲಿ ವ್ಯಾಜ್ಯ ಪ್ರಕರಣಗಳು ಇತ್ಯರ್ಥಗೊಳ್ಳಬೇಕಾದರೆ ಹೆಚ್ಚು ಸಮಯ ಬೇಕಾಗುತ್ತದೆ. ಹಣವೂ ಖರ್ಚಾಗುತ್ತದೆ. ಅದಾಲತ್‌ನಲ್ಲಿ ಪಾಲ್ಗೊಂಡರೆ ಹಣ–ಸಮಯ ಎರಡನ್ನೂ ಉಳಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಬಯಸಿದಂತೆ: ‘ನ್ಯಾಯಾಲಯದಲ್ಲಿ ಕಕ್ಷಿದಾರರು ಬಯಸಿದಂತೆ ಏನೂ ನಡೆಯುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಆದರೆ ಅದಾಲತ್‌ನಲ್ಲಿ ಕಕ್ಷಿದಾರರ ಅನುಕೂಲಕ್ಕೆ ತಕ್ಕಂತೆ ಪ್ರಕರಣಗಳು ಇತ್ಯರ್ಥಗೊಳ್ಳುವ ಸಾಧ್ಯತೆ ಇರುತ್ತದೆ. ಎರಡೂ ಕಡೆಯವರಿಗೆ ಸಮಾಧಾನ ತರುವ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ’ ಎಂದರು.

ಶೇ 60 ಇತ್ಯರ್ಥ: ‘ಪ್ರತಿ ಅದಾಲತ್‌ನಲ್ಲಿ ಶೇ 50ರಿಂದ 60ರಷ್ಟು ಪ್ರಕರಣಗಳನ್ನು ಮಾತ್ರ ಇತ್ಯರ್ಥಪಡಿಸಲು ಸಾಧ್ಯವಾಗುತ್ತದೆ. ಇದು ಕಡಿಮೆ ಏನಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದವರ ನೆಮ್ಮದಿ, ಹಣ ಹಾಗೂ ಸಮಯದ ಉಳಿತಾಯ ದೊಡ್ಡ ಸಾಧನೆಯೇ ಆಗುತ್ತದೆ’ ಎಂದು ಹೇಳಿದರು.

ಅದಾಲತ್‌ನಲ್ಲಿ ನ್ಯಾಯಾಧೀಶರಾದ ಎಸ್‌.ಬಿ.ಹಂದ್ರಾಳ್‌, ರಾಜಾ ಸೋಮಶೇಖರ್‌, ವಿಫುಲಾ ಪೂಜಾರಿ, ವೀಣಾ ನಾಯ್ಕರ್‌, ಅಶ್ವಿನಿ ಕೋರೆ, ಮುರುಘೇಂದ್ರ ತುಬಾಕೆ ಪಾಲ್ಗೊಂಡಿದ್ದರು.

ನೂರಾರು ಮಂದಿ: ಬೆಳಿಗ್ಗೆ 11ರ ವೇಳೆಗೆ ಆರಂಭವಾದ ಅದಾಲತ್‌ ಸಂಜೆ 4 ಗಂಟೆಯವರೆಗೂ ನಡೆಯಿತು. ಜಿಲ್ಲೆಯ ವಿವಿಧ ಪ್ರದೇಶಗಳ ನೂರಾರು ಮಂದಿ ಪಾಲ್ಗೊಂಡು ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಂಡರು.

ಬ್ಯಾಂಕ್ ವಸೂಲಾತಿ: ಬಾರದ ರೈತರು!
ಬಳ್ಳಾರಿ: ಸಾಲ ಮನ್ನಾ ಆಗಬಹುದು ಎಂಬ ನಿರೀಕ್ಷೆಯಲ್ಲಿರುವ ಬಹಳಷ್ಟು ರೈತರು ಅದಾಲತ್‌ಗೆ ಬರಲಿಲ್ಲ. ಸಾಲ ವಸೂಲಾತಿ ಸಲುವಾಗಿ ಬಂದಿದ್ದ ಬ್ಯಾಂಕ್‌ ಅಧಿಕಾರಿಗಳು ಬೆರಳೆಣಿಕೆಯಷ್ಟು ಪ್ರಕರಣಗಳಿಂದಲೇ ₨ 62 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿ ಗಮನ ಸೆಳೆದರು.

* ವ್ಯಾಜ್ಯಗಳ ಶೀಘ್ರ ಇತ್ಯರ್ಥಕ್ಕಾಗಿಯೇ ನಡೆಯುವ ನಿರಂತರವಾಗಿ ನಡೆಯುವ ಲೋಕ ಅದಾಲತ್‌ ಅನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕು
–ಖಾಸಿಂ ಚೂರಿಖಾನ್‌, ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !