ಹುಲಿಗುಡ್ಡ ಯೋಜನೆಯ ಕನಸುಗಾರ

7
ಮೊದಲ ಬಾರಿ ಗೆದ್ದು ಮಂತ್ರಿಯಾಗಿದ್ದ ಜನನಾಯಕ ಈಟಿ ಶಂಭುನಾಥ

ಹುಲಿಗುಡ್ಡ ಯೋಜನೆಯ ಕನಸುಗಾರ

Published:
Updated:
Deccan Herald

ಹೂವಿನಹಡಗಲಿ: ಸರಳ ಸಜ್ಜನಿಕೆ ಹಾಗೂ ನೇರ ನಡೆ, ನುಡಿಯಿಂದಲೇ ಜನರ ಪ್ರೀತಿಗೆ ಪಾತ್ರರಾಗಿದ್ದ ಮಾಜಿ ಸಚಿವ ಈಟಿ ಶಂಭುನಾಥ (77) ಗುರುವಾರ ವಿಧಿವಶರಾಗಿದ್ದು, ಮಲ್ಲಿಗೆ ನಾಡಿನ ಸಾತ್ವಿಕ ರಾಜಕಾರಣದ ಕೊಂಡಿ ಕಳಚಿದಂತಾಗಿದೆ.

ಮೊದಲ ಪ್ರಯತ್ನದಲ್ಲೇ ಶಾಸಕರಾಗಿ, ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವ ಈಟಿ ಶಂಭುನಾಥ ಅವರು ದೂರದೃಷ್ಟಿಯ ನೀರಾವರಿ ಯೋಜನೆಗೆ ಮೂರ್ತರೂಪ ನೀಡಿದ್ದರು. ವ್ಯವಸ್ಥೆಯನ್ನು ಖಂಡಿಸುತ್ತಿದ್ದ ಅವರು, ತಮಗೆ ಸರಿ ಕಾಣಿಸದಿದ್ದಾಗ ಸ್ವ ಪಕ್ಷೀಯರನ್ನೇ ಟೀಕಿಸುವ ನಿಷ್ಠುರವಾದಿಯಾಗಿದ್ದರು.

ಶಾಸಕರಾಗಿ, ಸಚಿವರಾಗಿ ಅಧಿಕಾರ ಅನುಭವಿಸಿದ್ದರೂ ಅವರಿಗೆ ಯಾವುದೇ ಹಮ್ಮು ಬಿಮ್ಮುಗಳು ಇರಲಿಲ್ಲ. ಮನೆಯ ವರಾಂಡದಲ್ಲಿ ಮಾತಿಗೆ ಕುಳಿತರೆ ಪಕ್ಕಾ ಜವಾರಿ ಭಾಷೆಯಲ್ಲೇ ಹರಟುತ್ತಿದ್ದರು. ಸಾಮಾನ್ಯ ಕೂಲಿಕಾರನನ್ನೂ ಆತ್ಮೀಯವಾಗಿ ಮಾತಾಡಿಸುವ ಸರಳತೆಯನ್ನು ಅವರು ಮೈಗೂಡಿಸಿಕೊಂಡಿದ್ದರು. ಅವರನ್ನು ಹೊಸದಾಗಿ ನೋಡಿದ ಜನರು ‘ಮಂತ್ರಿಯಾಗಿ ಮೆರೆದ ರಾಜಕಾರಣಿಗಳು ಹೀಗೂ ಇರುತ್ತಾರೆಯೇ’ ಎಂದು ಉದ್ಗರಿಸುತ್ತಿದ್ದರು.

ನೀರಾವರಿ ಯೋಜನೆಗೆ ಚಾಲನೆ: ಸತತ ಬರಗಾಲಕ್ಕೆ ತುತ್ತಾಗುತ್ತಿದ್ದ ಹೂವಿನಹಡಗಲಿ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಶಂಭುನಾಥ ಅವರ ಕಾಳಜಿಯಾಗಿತ್ತು. ಅಧಿಕಾರದಲ್ಲಿದ್ದಾಗ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿದ್ದ ಕ್ಯಾಪ್ಟನ್‌ ರಾಜಾರಾವ್‌ ಅವರನ್ನು ಆಹ್ವಾನಿಸಿ ಹುಲಿಗುಡ್ಡ (ಇಂದಿನ ಸಿಂಗಟಾಲೂರು) ಏತ ನೀರಾವರಿ ಯೋಜನೆಗಾಗಿ ಸಮೀಕ್ಷೆ ನಡೆಸಿದ್ದರು.

1992–93ರಲ್ಲಿ ಅಂದಿನ ಉಪಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಂದ ಈ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು. ನಂತರ ಈ ಯೋಜನೆಗೆ ಎಂ.ಪಿ.ಪ್ರಕಾಶ್ ಅವರು ಹೊಸರೂಪ ನೀಡಿ ಹೆಚ್ಚಿನ ಹಣ ಮಂಜೂರು ಮಾಡಿಸುವ ಮೂಲಕ ನೀರಾವರಿ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ಇಂದು ನೀರಾವರಿ ಸೌಲಭ್ಯ ಪಡೆದಿರುವ ರೈತರು ಈ ಇಬ್ಬರು ಮಹಾನ್‌ ಚೇತನಗಳನ್ನು ಸ್ಮರಿಸುತ್ತಿದ್ದಾರೆ.
 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !