ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್ಟರ್‌ನಲ್ಲಿ ಮಕ್ಕಳ ಮೆರವಣಿಗೆ, ಸಿಹಿ ವಿತರಣೆ

ಬೇಸಿಗೆ ರಜೆ ಮುಗಿಸಿ ಶಾಲೆಗೆ ಬಂದ ವಿದ್ಯಾರ್ಥಿಗಳು, ಹಬ್ಬದ ವಾತಾವರಣ
Last Updated 30 ಮೇ 2018, 11:15 IST
ಅಕ್ಷರ ಗಾತ್ರ

ಮಂಡ್ಯ: ಟ್ರ್ಯಾಕ್ಟರ್‌ನಲ್ಲಿ ಮಕ್ಕಳ ಮೆರವಣಿಗೆ, ತಳಿರು, ತೋರಣಗಳಿಂದ ಸಿಂಗರಿಸಿದ್ದ ಶಾಲೆಗಳು, ಸಿಹಿ ತಿಂಡಿ, ಹಣ್ಣು, ಪಾಯಸ, ಪೊಂಗಲ್‌, ಜಹಾಂಗೀರ್‌ ವಿತರಣೆ, ಮಕ್ಕಳಿಗಾಗಿ ಕಾಯುತ್ತಿದ್ದ ಶಿಕ್ಷಕರು, ಬಿಸಿಯೂಟ ತಯಾರಿಸಿದ ಸಿಬ್ಬಂದಿ, ಪುಸ್ತಕ ವಿತರಣೆ. ಇವಿಷ್ಟು ಮಂಗಳವಾರ ಪುನಾರಂಭಗೊಂಡ ಶಾಲೆಯಲ್ಲಿ ಕಂಡುಬಂದ ಚಟುವಟಿಕೆಗಳು.

ಬೇಸಿಗೆ ರಜೆ ಮುಗಿಸಿ ಮರಳಿ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಆಕರ್ಷಕ ಚಟುವಟಿಕೆಗಳ ಮೂಲಕ ಸ್ವಾಗತ ಕೋರಿದರು. ಕೀಲಾರ ಗ್ರಾಮದ ಶಾಲೆಯಲ್ಲಿ ಮಕ್ಕಳನ್ನು ಟ್ರ್ಯಾಕ್ಟರ್‌  ಮೆರವಣಿಗೆಯ ಮೂಲಕ ಶಾಲೆಗೆ ಕರೆತರಲಾಯಿತು. ಬ್ಯಾಂಡ್‌ ವಾದ್ಯಗಳ ಮೂಲಕ ಜಾಥಾ ನಡೆಸಲಾಯಿತು. ಶಾಲಾ ಕಟ್ಟಡವನ್ನು ಕಬ್ಬು, ಬಾಳೆ ಕಂಬ, ಮಾವಿನ ತೋರಣ, ಬಣ್ಣದ ಪೇಪರ್‌ಗಳಿಂದ ಸಿಂಗಿರಸಲಾಗಿತ್ತು. ವಿದ್ಯಾರ್ಥಿನಿಯರು ಬೆಳಿಗ್ಗೆಯೇ ಶಾಲೆಗೆ ಬಂದು ಬಣ್ಣಬಣ್ಣದ ರಂಗೋಲಿ ಹಾಕಿದ್ದರು. ಶಿಕ್ಷಕಿಯರೂ ರಂಗೋಲಿ ಹಾಕಲು ಸಹಾಯ ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸೂರ್ಯಪ್ರಕಾಶ್‌ ಮೂರ್ತಿ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಿದರು.  ಪಠ್ಯ ಪುಸ್ತಕ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಹಬ್ಬದ ಮಾದರಿಯಲ್ಲಿ ಮಕ್ಕಳನ್ನು ಶಾಲೆಗೆ ಸ್ವಾಗತ ಕೋರಲಾಗುತ್ತಿದೆ. ಶಿಕ್ಷಕರು ಅವರ ಆಸಕ್ತಿಗೆ ಅನುಗುಣವಾಗಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ನಾವು ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇವೆ’ ಎಂದು ಡಿಡಿಪಿಐ ಹೇಳಿದರು. ಬಿಇಒ ಶಿವಪ್ಪ, ಬಿಆರ್‌ಸಿ ನಾಗರಾಜ್‌ ಇದ್ದರು.

ಪಾಯಸ ವಿತರಣೆ: ನಗರದ ಗುತ್ತಲಿನ ಕುವೆಂಪು ಶತಮಾನೋತ್ಸವ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಪಾಯಸ ವಿತರಣೆ ಮಾಡುವ ಮೂಲಕ ಸ್ವಾಗತ ಕೋರಿದರು. ಮುಖ್ಯ ಶಿಕ್ಷಕ ಮೂಡಲಗಿರಿಯಪ್ಪ ಹಾಗೂ ಎಸ್‌ಡಿಎಂಸಿ ಸದಸ್ಯರು ಬಡಾವಣೆಯಲ್ಲಿ ಮಕ್ಕಳೊಂದಿಗೆ ಜಾಥಾ ನಡೆಸಿದರು. ಶಾಲೆಗೆ ದಾಖಲಾಗದ ಮಕ್ಕಳು ಕೂಡಲೇ ದಾಖಲಾಗಬೇಕು. ಶಾಲೆಯಿಂದ ಹೊರಗುಳಿದ 6–13 ವರ್ಷ ವಯಸ್ಸಿನ ಮಕ್ಕಳು ವಿಶೇಷ ದಾಖಲಾತಿ ಅಭಿಯಾನದ ಮೂಲಕ ದಾಖಲಾಗಬೇಕು ಎಂದು ಅರಿವು ಮೂಡಿಸಿದರು. ‘ನಮ್ಮ ಶಾಲೆಯಲ್ಲಿ 300ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದು ಮಾದರಿ ಶಾಲೆಯಾಗಿದೆ. ಅಭಿಯಾನದ ಮೂಲಕ ಮಕ್ಕಳನ್ನು ದಾಖಲು ಮಾಡಲಾಗಿದೆ’ ಎಂದು ಮುಖ್ಯಶಿಕ್ಷಕ ಮೂಡಲಗಿರಿಯಪ್ಪ ಹೇಳಿದರು.

ಹೂ ಕೊಟ್ಟು ಸ್ವಾಗತ: ಹಾಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯರು ಮಕ್ಕಳಿಗೆ ಗುಲಾಬಿ ಹೂ, ಸಿಹಿ, ಕೋಸಂಬರಿ, ಬಾಳೆಹಣ್ಣು ವಿತರಣೆ ಮಾಡಿ ಶಾಲೆಗೆ ಸ್ವಾಗತ ಕೋರಿದರು. ಶಾಲೆಯ ಕಾಂಪೌಂಡ್‌ಗೆ ಬಾಳೆ ಕಂಬ, ಮಾವಿನ ತೋರಣದಿಂದ ಸಿಂಗರಿಸಲಾಗಿತ್ತು.

ಕೊಳೆಗೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇಸರಿಭಾತ್‌ ವಿತರಣೆ ಮಾಡಿ ಸ್ವಾಗತ ಕೋರಲಾಯಿತು. ಶಾಲೆಯಲ್ಲಿ 12 ಮಕ್ಕಳಿದ್ದು ಮಂಗಳವಾರ 8 ಮಕ್ಕಳು ಶಾಲೆಗೆ ಬಂದಿದ್ದರು. ಎಲ್ಲರಿಗೂ ಪಠ್ಯ ಪುಸ್ತಕ ವಿತರಣೆ ಮಾಡಲಾಯಿತು. ಸಮೀಪದಲ್ಲೇ ಇರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಬಡಾವಣೆಯಲ್ಲಿ ದಾಖಲಾತಿ ಆಂದೋಲನ ನಡೆಸಿದರು.

ತಾವರೆಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಹಿಯ ಜೊತೆ ಅನ್ನ, ಸಾಂಬಾರ್‌ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಾಲೆಗೆ ಬಂದ ಮಕ್ಕಳಿಗೆ ಆಟದ ಸಾಮಾನು ನೀಡಿ ಆಟವಾಡಲು ಅವಕಾಶ ನೀಡಲಾಗಿತ್ತು.

ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗೆ ಬಂದ ಮಕ್ಕಳಿಗೆ ಪೊಂಗಲ್‌, ಚಿತ್ರಾನ್ನದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್‌ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಜಹಾಂಗೀರ್‌, ಪಲಾವ್‌, ಬಾಳೆಹಣ್ಣು ವಿತರಣೆ ಮಾಡಿ ಸ್ವಾಗತ ಕೋರಲಾಯಿತು.

ಕಡಿಮೆ ಹಾಜರಾತಿ: ‘ಮಂಗಳವಾರ’ ಕಾರಣ

ಮೊದಲ ದಿನ ಶಾಲೆಗಳಲ್ಲಿ ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಹಾಜರಾಗಿದ್ದರು. ಇದಕ್ಕೆ  ಶಿಕ್ಷಕರು ಹಲವು ಕಾರಣ ನೀಡಿದರು. ಮಂಗಳವಾರವಾದ ಕಾರಣ ಮಕ್ಕಳು ಶಾಲೆಗೆ ಬಂದಿಲ್ಲ. ಬುಧವಾರದಿಂದ ನಿಯಮಿತವಾಗಿ ಬರುತ್ತಾರೆ. ಜೂನ್‌ 1ರಿಂದ ಎಲ್ಲಾ ಮಕ್ಕಳು ಬರುತ್ತಾರೆ ಎಂದು ಕೆಲವರು ಹೇಳಿದರು.

ಮಂಗಳವಾರ ಹುಣ್ಣಿಮೆ ಇದ್ದಕಾರಣ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿಲ್ಲ. ನಿಫಾ ವೈರಾಣುವಿನ ಭಯ ಬಗ್ಗೆ ಎಲ್ಲೆಡೆ ಹರಡಿರುವ ಕಾರಣ ಮಕ್ಕಳ ಹಾಜರಾತಿ ಕಡಿಮೆಯಾಗಲು ಅದೂ ಕಾರಣವಿರಬಹುದು ಎಂದು ಕೆಲ ಶಾಲೆಗಳ ಶಿಕ್ಷಕರು ತಿಳಿಸಿದರು. ಎಲ್ಲೆಡೆ ಮಕ್ಕಳ ಕಳ್ಳರು ಇದ್ದಾರೆ ಎಂಬ ಸುದ್ದಿ ಹರಡಿರುವುದೂ ಒಂದು ಕಾರಣ. ಅಲ್ಲದೆ ಮೊದಲ ದಿನ ಕೇವಲ ಶಾಲೆಯ ಸ್ವಚ್ಛತಾ ಕಾರ್ಯ ಇರುತ್ತದೆ ಎಂಬ ಕಾರಣದಿಂದಲೂ ಮಕ್ಕಳು ಗೈರುಹಾಜರಾಗಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT