ಭಾನುವಾರ, ಸೆಪ್ಟೆಂಬರ್ 22, 2019
25 °C
ಒಂದೂವರೆ ವರ್ಷದಿಂದ ಕ್ಷೇತ್ರದತ್ತ ಸುಳಿಯದ ಪ್ರವೀಣ್‌ ಸಿಂಗ್‌

ಬಡವಾಯಿತೇ ಹಂಪಿ ಜಿಲ್ಲಾ ಪಂಚಾಯಿತಿ ಕ್ಷೇತ್ರ?

Published:
Updated:
Prajavani

ಹೊಸಪೇಟೆ: ಹಂಪಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಪ್ರವೀಣ್‌ ಸಿಂಗ್‌ ಅವರು ಒಂದೂವರೆ ವರ್ಷದಿಂದ ಕ್ಷೇತ್ರದತ್ತ ಸುಳಿಯದ ಕಾರಣ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂಬ ಆರೋಪ ಕ್ಷೇತ್ರದ ಜನ ಮಾಡುತ್ತಿದ್ದಾರೆ.

‘ಕ್ಷೇತ್ರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಜನರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸ್ಪಂದಿಸುವವರು ಇಲ್ಲದಂತಾಗಿದೆ’ ಎಂಬುದು ಸಾರ್ವಜನಿಕರ ಆರೋಪ.

ಸಿಂಗ್‌ ನಡೆದುಕೊಂಡಿರುವ ರೀತಿ ಸಹ ಅದನ್ನು ಪುಷ್ಟೀಕರಿಸುವಂತಿದೆ. 2018ರ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಇಚ್ಛೆ ಸಿಂಗ್‌ ಹೊಂದಿದ್ದರು. ಅದಕ್ಕಾಗಿ ಅವರು ಅನೇಕ ವರ್ಷಗಳಿಂದ ಸಿದ್ಧತೆ ಕೂಡ ಮಾಡಿಕೊಳ್ಳುತ್ತ ಬಂದಿದ್ದರು. ಆದರೆ, ಚುನಾವಣೆಯ ಹೊಸ್ತಿಲಿನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಆನಂದ್‌ ಸಿಂಗ್‌ಗೆ ಟಿಕೆಟ್‌ ನೀಡಲಾಯಿತು. ಇದರಿಂದ ಪ್ರವೀಣ್‌ ಸಿಂಗ್‌ ತೀವ್ರ ಅಸಮಾಧಾನಗೊಂಡಿದ್ದರು. ಅಷ್ಟೇ ಅಲ್ಲ, ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದರು. ಕೊನೆಯ ಗಳಿಗೆಯಲ್ಲಿ ಒಂದೆರಡು ದಿನಗಳಷ್ಟೇ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.

ನಂತರ ನಡೆದ ಲೋಕಸಭೆ ಉಪಚುನಾವಣೆ, ಸಾರ್ವತ್ರಿಕ ಚುನಾವನೆಯಿಂದಲೂ ದೂರ ಉಳಿದರು. ಪಕ್ಷದಿಂದ ಅಂತರ ಕಾಪಾಡಿಕೊಂಡಿದಲ್ಲದೇ ಕ್ಷೇತ್ರದಿಂದ ಕೂಡ ದೂರವಾದರು. ಅವರ ಕ್ಷೇತ್ರದ ವ್ಯಾಪ್ತಿಗೆ ಬರುವ ‘ಹಂಪಿ ಉತ್ಸವ’ ಸೇರಿದಂತೆ ಯಾವ ಕಾರ್ಯಕ್ರಮಗಳಿಗೂ ಹಾಜರಾಗಲಿಲ್ಲ.

‘ಆಗಸ್ಟ್‌ನಲ್ಲಿ ತುಂಗಭದ್ರಾ ಜಲಾಶಯದಿಂದ ನದಿಗೆ ಎರಡು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸಲಾಗಿತ್ತು. ಈ ಸಂದರ್ಭದಲ್ಲಿ ತಾಲ್ಲೂಕಿನ ಹಂಪಿ, ವೆಂಕಟಾಪುರ, ಬುಕ್ಕಸಾಗರ ಗ್ರಾಮಗಳಿಗೆ ನೀರು ನುಗ್ಗಿ ಗ್ರಾಮಸ್ಥರು ತೊಂದರೆ ಅನುಭವಿಸಿದ್ದರು. ಈ ಸಂದರ್ಭದಲ್ಲೂ ಅವರು ಗ್ರಾಮಸ್ಥರ ಸಮಸ್ಯೆ ಆಲಿಸುವ ಕೆಲಸ ಮಾಡಲಿಲ್ಲ’ ಎನ್ನುವುದು ಸಾರ್ವಜನಿಕರ ದೂರಾಗಿದೆ.

‘ಒಂದೂವರೆ ವರ್ಷದಿಂದ ಪ್ರವೀಣ್‌ ಸಿಂಗ್‌ ಅವರು ಕ್ಷೇತ್ರದತ್ತ ಸುಳಿದಿಲ್ಲ. ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಕ್ಷೇತ್ರಕ್ಕೆ ಭೇಟಿ ಕೊಡುವ ಗೋಜಿಗೆ ಹೋಗಲಿಲ್ಲ. ಹೆಸರಿಗಷ್ಟೇ ಅವರು ಸದಸ್ಯರಾಗಿದ್ದಾರೆ. ಜನರ ಕಷ್ಟ–ಸುಖ ಅರಿಯುವ ಕೆಲಸ ಆರಂಭದಿಂದ ಮಾಡಲೇ ಇಲ್ಲ’ ಎಂದು ಹಂಪಿ ನಿವಾಸಿ ರಾಜು ಹೇಳಿದರು.

‘ಜಿಲ್ಲಾ ಪಂಚಾಯಿತಿಗೆ ಚುನಾವಣೆ ನಡೆದು 4 ವರ್ಷಗಳಾಗುತ್ತ ಬಂದಿದೆ. ಆರಂಭದಲ್ಲಿ ಕೆಲ ದಿನ ಸಿಂಗ್‌ ಉತ್ಸಾಹದಿಂದ ಓಡಾಡಿದರು. ಆದರೆ, ನಂತರದ ದಿನಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗಲಿಲ್ಲ ಎಂದು ಕ್ಷೇತ್ರದ ಜನರನ್ನು ಕಡೆಗಣಿಸುವುದು ಎಷ್ಟು ಸರಿ. ರಾಜಕೀಯದಲ್ಲಿ ಏಳು–ಬೀಳು ಸಾಮಾನ್ಯ. ಆದರೆ, ಜನರಿಂದ ದೂರ ಇರಬಾರದು. ಅದರಲ್ಲೂ ಆಯ್ಕೆ ಮಾಡಿ ಕಳುಹಿಸಿದ ಮತದಾರರನ್ನು ಮರೆಯಬಾರದು’ ಎಂದು ನಾಗೇನಹಳ್ಳಿಯ ಹುಲುಗಪ್ಪ ಅಭಿಪ್ರಾಯಪಟ್ಟರು.

Post Comments (+)