ಮಂಗಳವಾರ, ಮಾರ್ಚ್ 9, 2021
23 °C

ಬಾರದ ಮಳೆ: ಉದ್ಯೋಗವಿಲ್ಲದೇ ಜನರ ಪರದಾಟ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಮಳೆಗಾಲದಲ್ಲೇ ತಾಲ್ಲೂಕಿನ ಹಲವು ಗ್ರಾಮಗಳ ಜನ ಉದ್ಯೋಗ ಅರಸಿಕೊಂಡು ವಲಸೆ ಹೋಗುತ್ತಿದ್ದಾರೆ.

ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಬಹುತೇಕ ಕಡೆಗಳಲ್ಲಿ ಇದುವರೆಗೆ ಬಿತ್ತನೆಯೇ ಮಾಡಿಲ್ಲ. ಜಲಾಶಯದಲ್ಲೂ ನೀರಿನ ಸಂಗ್ರಹ ಕಡಿಮೆ ಇದೆ. ಮುಂಗಾರು ಹಂಗಾಮಿನಲ್ಲಿ ಎಲ್ಲೂ ಕೃಷಿ ಚಟುವಟಿಕೆಗಳು ನಡೆಯುತ್ತಿಲ್ಲ. ಅದು ನಡೆಯುವ ಭರವಸೆಯನ್ನೇ ಜನ ಕಳೆದುಕೊಂಡಿದ್ದಾರೆ. ಸ್ಥಳೀಯವಾಗಿ ಎಲ್ಲೂ ಉದ್ಯೋಗ ಸಿಗುತ್ತಿಲ್ಲ. ಇದರಿಂದಾಗಿ ಬೇರೆ ಕಡೆ ಜನ ವಲಸೆ ಹೋಗುತ್ತಿದ್ದಾರೆ.

ಇತ್ತೀಚೆಗೆ ತಾಲ್ಲೂಕಿನ ಕಮಲಾಪುರ, ಸೀತಾರಾಮ ತಾಂಡ, ಕಡ್ಡಿರಾಂಪುರದಿಂದ ಟ್ರ್ಯಾಕ್ಟರ್‌, ಲಾರಿಗಳಲ್ಲಿ ಸುಮಾರು ಜನ ವಲಸೆ ಹೋಗಿದ್ದರು. ಈಗ ಶ್ರೀರಾಮನಗರ ಗ್ರಾಮದ ಸರತಿ. ಈ ಗ್ರಾಮದಲ್ಲಿ ಕೆಲವೇ ಮನೆಗಳಿದ್ದು, ಇಲ್ಲಿನ ಬಹುತೇಕರು ಸಾಮಾನು ಸರಂಜಾಮುಗಳೊಂದಿಗೆ ಪಯಣ ಬೆಳೆಸಿದರು. ಕೆಲವರು ಬೆಂಗಳೂರಿನತ್ತ ಮುಖ ಮಾಡಿದರೆ, ಕೆಲವರು ಚೆನ್ನೈ, ಮುಂಬೈ ಕಡೆಗೆ ಉದ್ಯೋಗ ಹುಡುಕಿಕೊಂಡು ತೆರಳಿದ್ದಾರೆ. 

ಪ್ರತಿ ವರ್ಷ ಸಾಮಾನ್ಯವಾಗಿ ಏಪ್ರಿಲ್‌, ಮೇ ತಿಂಗಳಲ್ಲಿ ಕೆಲವು ಗ್ರಾಮಸ್ಥರು ಉದ್ಯೋಗಕ್ಕಾಗಿ ಬೇರೆಡೆ ವಲಸೆ ಹೋಗುವುದು ಈಗಲೂ ಸಾಮಾನ್ಯ. ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರಿಂದ ಸ್ವಲ್ಪಮಟ್ಟಿಗೆ ವಲಸೆ ತಗ್ಗಿತ್ತು. ಮಳೆಗಾಲದಲ್ಲಾದರೂ ಕೈತುಂಬ ಕೆಲಸ ಸಿಗಬಹುದು ಎಂಬುದು ಜನರ ನಿರೀಕ್ಷೆಯಾಗಿತ್ತು. ಆದರೆ, ಅವರ ನಿರೀಕ್ಷೆ ಹುಸಿಯಾಗಿದೆ. ಮಳೆ ಕೈಕೊಟ್ಟಿರುವುದರಿಂದ ಸ್ವಂತ ಜಮೀನಿನಲ್ಲಿ ಉಳುಮೆ ಮಾಡುವ ಸ್ಥಿತಿಯಲ್ಲಿ ಅವರಿಲ್ಲ. ಹೀಗಾಗಿ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ.

‘ನಾಲ್ಕು ವರ್ಷಗಳಿಂದ ಬರ ಬಿಟ್ಟು ಬಿಡದೇ ಕಾಡುತ್ತಿದೆ. ಮೊದಲ ಮೂರು ವರ್ಷ ಸಾಲ ಸೂಲ ಮಾಡಿ ಬಿತ್ತನೆ ಮಾಡಿದ್ದೆವು. ಮಳೆಯಾಗದ ಕಾರಣ ಬೆಳೆ ಬೆಳೆಯಲಿಲ್ಲ. ಹಾಕಿದ ಬಂಡವಾಳ ಹಾಕಿ ಕೈಸುಟ್ಟುಕೊಂಡಿದ್ದೆವು. ಈ ವರ್ಷವಂತೂ ಇದುವರೆಗೆ ಮಳೆಯೇ ಆಗಿಲ್ಲ. ಇನ್ನೇನು ಮಳೆಗಾಲ ಆರಂಭವಾಗಿ ಎರಡು ತಿಂಗಳಾಗಿದೆ. ಬರುವ ದಿನಗಳಲ್ಲಿ ಮಳೆಯಾಗುತ್ತದೆ ಎಂಬುದಕ್ಕೆ ಯಾವುದೇ ಖಾತ್ರಿ ಇಲ್ಲ. ನಮ್ಮೂರಿನ ಸುತ್ತಮುತ್ತ ಬೇರೆ ಕಡೆ ಉದ್ಯೋಗ ಸಿಗುವುದು ಕಡಿಮೆ. ಹೀಗಾಗಿ ಬೆಂಗಳೂರಿಗೆ ಮನೆ ಮಂದಿ ಕೆಲಸ ಹುಡುಕಿಕೊಂಡು ಹೋಗುತ್ತಿದ್ದೇವೆ. ಅಲ್ಲಿ ಯಾವುದಾದರೂ ಕೆಲಸ ಸಿಕ್ಕೇ ಸಿಗುತ್ತದೆ’ ಎಂದು ಶ್ರೀರಾಮನಗರದ ಕೃಷ್ಣ ಭರವಸೆ ವ್ಯಕ್ತಪಡಿಸಿದರು.

‘ನಿತ್ಯ ಕೂಲಿ ಮಾಡಿದರಷ್ಟೇ ನಮ್ಮ ಹೊಟ್ಟೆ ತುಂಬುತ್ತದೆ. ಇರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ಉಳುಮೆ ಮಾಡಬೇಕೆಂದರೆ ಮಳೆ ಇಲ್ಲ. ಅನೇಕ ಕಡೆ ಕೆಲಸ ಕೇಳಿದರೆ ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಇನ್ನೂ ಕೆಲವೇ ದಿನಗಳಿಗೆ ಆಗುವಷ್ಟು ರೇಷನ್‌ ಉಳಿದಿದೆ. ಹೀಗಾಗಿ ಈಗಲೇ ಕೆಲಸಕ್ಕಾಗಿ ಬೇರೆ ಕಡೆ ಹೋಗುತ್ತಿದ್ದೇವೆ’ ಎಂದು ರುಕ್ಕಮ್ಮ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು