ಉಗ್ರಪ್ಪ ಮತ ನೀಡಿದವರು ಆರೇ ತಿಂಗಳಲ್ಲಿ ಮನಸ್ಸು ಬದಲಿಸಿದರು

ಬುಧವಾರ, ಜೂನ್ 19, 2019
26 °C

ಉಗ್ರಪ್ಪ ಮತ ನೀಡಿದವರು ಆರೇ ತಿಂಗಳಲ್ಲಿ ಮನಸ್ಸು ಬದಲಿಸಿದರು

Published:
Updated:

ಹೊಸಪೇಟೆ: ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿದ್ದ ವಿಜಯನಗರ ಕ್ಷೇತ್ರದ ಮತದಾರರು ಸಾರ್ವತ್ರಿಕ ಚುನಾವಣೆಯಲ್ಲಿ ಮನಸ್ಸು ಬದಲಿಸಿ ಬಿಜೆಪಿ ಪರ ನಿಂತಿದ್ದಾರೆ.

ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆನಂದ್‌ ಸಿಂಗ್‌ ಅವರನ್ನು ಕ್ಷೇತ್ರದ ಜನತೆ ಏಳು ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿದ್ದರು. ಅದಾದ ಆರು ತಿಂಗಳ ಬಳಿಕ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಅದೇ ಪಕ್ಷದ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪನವರಿಗೆ ಅವರ ಪ್ರತಿಸ್ಪರ್ಧಿಗಿಂತ 30 ಸಾವಿರಕ್ಕೂ ಅಧಿಕ ಮತಗಳನ್ನು ಕೊಟ್ಟು ಜಯದ ದಡ ಸೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಮನಸ್ಸು ಬದಲಿಸಿದ್ದಾರೆ. ಅಷ್ಟೇ ಅಲ್ಲ, ದೊಡ್ಡ ಪ್ರಮಾಣದಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರಿಗೆ 18,494 ಮತಗಳ ಮುನ್ನಡೆ ಸಿಕ್ಕಿದೆ. ಕ್ಷೇತ್ರದಲ್ಲಿ ದೇವೇಂದ್ರಪ್ಪನವರ ಪರ 87,914 ಮತಗಳು ಬಿದ್ದರೆ, ವಿ.ಎಸ್‌. ಉಗ್ರಪ್ಪನವರ ಪರ 69,420 ಮತಗಳು ಚಲಾವಣೆಯಾಗಿವೆ. ಜಿಲ್ಲೆಯಲ್ಲಿ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಬಳಿಕ ಅತಿ ಹೆಚ್ಚು ಲೀಡ್‌ ಕೊಟ್ಟ ಕ್ಷೇತ್ರ ವಿಜಯನಗರವಾಗಿದೆ.

ಅಂದಹಾಗೆ, ಆರು ತಿಂಗಳ ಹಿಂದೆಯಿದ್ದ ಕ್ಷೇತ್ರದ ಜನರ ಮನಸ್ಥಿತಿ ಏಕಾಏಕಿ ಬದಲಾಗಲು ಕಾರಣವೇನು ಎಂಬ ಪ್ರಶ್ನೆಗೆ ಕಾರಣ ಹುಡುಕುತ್ತ ಹೋದರೆ ಅನೇಕ ವಿಷಯಗಳು ಗೊತ್ತಾಗುತ್ತವೆ.

ವಿಧಾನಸಭೆ ಹಾಗೂ ಉಪಚುನಾವಣೆಯಲ್ಲಿ ದೊಡ್ಡ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿಯೂ ಸುಲಭವಾಗಿ ಗೆಲ್ಲಬಹುದು ಎಂದು ಕಾಂಗ್ರೆಸ್ಸಿಗರು ಅಂದುಕೊಂಡು ಮೈಮರೆತಿದ್ದರು. ಆದರೆ, ಬಿಜೆಪಿ ಸೋಲಿನಿಂದ ಕಂಗೆಡಲಿಲ್ಲ. ಉಪಚುನಾವಣೆಯಲ್ಲಿ ಸೋತ ಕೆಲವೇ ದಿನಗಳ ನಂತರ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ಶುರು ಮಾಡಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರ ಸಲಹೆ ಕೂಡ ಪಡೆದುಕೊಂಡರು.

ಪ್ರತಿ ಬೂತ್‌ಗೆ ಇಂತಿಷ್ಟು ಕಾರ್ಯಕರ್ತರನ್ನು ನಿಯೋಜಿಸಿ ಪ್ರಚಾರ ಕಾರ್ಯ ಶುರು ಮಾಡಿದರು. ಅದಕ್ಕೆ ಸಂಘದ ಕಾರ್ಯಕರ್ತರು ಹೆಗಲು ಕೊಟ್ಟರು. ಒಬ್ಬರಿಗೆ ಜವಾಬ್ದಾರಿ ವಹಿಸಿದರೆ ಭಿನ್ನಾಭಿಪ್ರಾಯ ಉಂಟಾಗಬಹುದು ಎಂಬ ಕಾರಣಕ್ಕೆ ಪಕ್ಷದ ಮುಖಂಡರಲ್ಲಿ ವಾರ್ಡ್‌ ಹಂಚಿಕೆ ಮಾಡಿ ಹೊಣೆಗಾರಿಕೆ ವಹಿಸಿದರು. ಪ್ರತಿಯೊಬ್ಬರೂ ಅವರಿಗೆ ವಹಿಸಿದ ವಾರ್ಡ್‌ನಲ್ಲಷ್ಟೇ ಗಮನಹರಿಸಿ ಕೆಲಸ ಮಾಡಿದರು. ಮನೆ ಮನೆಗೆ ಹೋಗಿ ದೇಶಭಕ್ತಿ ಹಾಗೂ ನರೇಂದ್ರ ಮೋದಿಯವರ ಹೆಸರಿನಲ್ಲಿ ಪ್ರಚಾರ ಕೈಗೊಂಡರು. ತಳಮಟ್ಟದಲ್ಲಿ ಕೈಗೊಂಡ ಪ್ರಚಾರ ಚುನಾವಣೆಯಲ್ಲಿ ಮತಗಳಾಗಿ ಬದಲಾದವು.

ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಅವರು ಒಮ್ಮೆ ಮಾತ್ರ ನಗರದಲ್ಲಿ ಉಗ್ರಪ್ಪನವರೊಂದಿಗೆ ಪ್ರಚಾರ ಕೈಗೊಂಡಿರುವುದು ಬಿಟ್ಟರೆ ಮತ್ತೆ ಕಾಣಿಸಿಕೊಳ್ಳಲಿಲ್ಲ. ಇದು ಕಾಂಗ್ರೆಸ್‌ ಕಾರ್ಯಕರ್ತರ ಆತ್ಮವಿಶ್ವಾಸ ಕುಸಿಯಲು ಕಾರಣವಾಯಿತು. ಸೇನಾಧಿಪತಿ ಇಲ್ಲದೆ ಸೈನಿಕರು ಯುದ್ಧರಂಗಕ್ಕೆ ಇಳಿದಂತಾಗಿತ್ತು. ಎರಡನೇ ಹಂತದ ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಇತ್ತು. ಇದು ಪಕ್ಷದ ಮತ ಕುಸಿಯಲು ಕಾರಣವಾಯಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !