ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಗ್ರಹದಿಂದ ಗಣಿಗಾರಿಕೆ ಮೇಲೆ ನಿಗಾ: ಪ್ರಶಾಂತ ಕುಮಾರ್‌ ಸರ್ಕಾರ್‌

Last Updated 23 ಡಿಸೆಂಬರ್ 2018, 8:56 IST
ಅಕ್ಷರ ಗಾತ್ರ

ಹೊಸಪೇಟೆ: ‘ಬರುವ ದಿನಗಳಲ್ಲಿ ಉಪಗ್ರಹಗಳ ಸಹಾಯದಿಂದ ಗಣಿಗಳಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಪರಿಶೀಲನೆ ನಡೆಸಲಾಗುವುದು. ಹಾಗಾಗಿ ಎಲ್ಲ ಗಣಿಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಧನಬಾದ್‌ ಗಣಿ ಸುರಕ್ಷತಾ ಮಹಾನಿರ್ದೇಶಕ ಪ್ರಶಾಂತ ಕುಮಾರ್‌ ಸರ್ಕಾರ್‌ ತಿಳಿಸಿದರು.

ಗಣಿ ಸುರಕ್ಷಾ ಸಂಘ ವಲಯ–1 ಹಾಗೂ ವೀರಭದ್ರಪ್ಪ ಸಂಗಪ್ಪ ಕಂಪನಿ ಸಹಭಾಗಿತ್ವದಲ್ಲಿ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಗಣಿ ಸುರಕ್ಷಾ ಅನುಷ್ಠಾನ ಹಾಗೂ ‘ಸಿಲಿಕೋಸಿಸ್‌’ ಗಣಿ ಧೂಳಿನಿಂದ ಉಂಟಾಗುವ ಶ್ವಾಸಕೋಶ ಸಂಬಂಧಿ ಕಾಯಿಲೆ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ದೇಶದಾದ್ಯಂತ ಸಣ್ಣ, ಮಧ್ಯಮ ಹಾಗೂ ಬೃಹತ್‌ ಅದಿರಿನ ಗಣಿಗಳಿವೆ. ಅಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳನ್ನು ಅಧಿಕಾರಿಗಳಿಂದ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಉಪಗ್ರಹದ ನೆರವು ಪಡೆಯಲು ಸರ್ಕಾರ ತೀರ್ಮಾನಿಸಿದೆ. ಆಗ ಎಲ್ಲ ಗಣಿಗಳ ಮೇಲೆ ಹದ್ದಿನ ಕಣ್ಣು ಇಡಲು ಸಹಾಯವಾಗಲಿದೆ. ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿದರೆ ಅಂತಹವರು ಶಿಕ್ಷೆಗೆ ಗುರಿಯಾಗಬಹುದು’ ಎಂದು ಹೇಳಿದರು.

‘ಗಣಿ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ‘ಸಿಲಿಕೋಸಿಸ್‌’ನಿಂದ ಸಾವನ್ನಪ್ಪುತ್ತಿದ್ದಾರೆ ಎಂದರೆ ಗಣಿಗಳಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳು ಸಂಪೂರ್ಣವಾಗಿ ಪರಿಣಾಮಕಾರಿಯಲ್ಲ ಎಂದರ್ಥ. ಶೇ 1.3ರಷ್ಟು ಜನ ‘ಸಿಲಿಕೋಸಿಸ್‌’ನಿಂದ ಬಳಲುತ್ತಿದ್ದಾರೆ. ಮಣ್ಣಿನ ಮೂರ್ತಿಗಳನ್ನು ಮಾಡುವವರು ಸಹ ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಗಣಿಗಾರಿಕೆಗೆ ಸಂಬಂಧಿಸಿದಂತೆ ಸಾಕಷ್ಟು ಸುರಕ್ಷತಾ ನಿಯಮಗಳಿವೆ. ಅವುಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಆಧುನಿಕ ತಂತ್ರಜ್ಞಾನದ ನೆರವು ಕೂಡ ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.

‘ನೈತಿಕ, ಸಾಮಾಜಿಕ ಅಭಿವೃದ್ಧಿ ಗಣಿ ಜವಾಬ್ದಾರಿ ಎಂಬುದನ್ನು ಗಣಿ ಮಾಲೀಕರು ಅರಿತುಕೊಳ್ಳಬೇಕು. ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಕೆಲಸ ನಿರ್ವಹಿಸಬೇಕು. ಈ ಹಿಂದೆ ಗಣಿ ಮಾಲೀಕರು ನಿಯಮಗಳನ್ನು ಉಲ್ಲಂಘಿಸಿ ಸಾಕಷ್ಟು ತಪ್ಪು ಮಾಡಿದ್ದಾರೆ. ಭವಿಷ್ಯದಲ್ಲಿ ಅವುಗಳು ಮತ್ತೆ ಪುನರಾವರ್ತನೆ ಆಗುವುದು ಬೇಡ. ಹಳೆಯ ತಪ್ಪುಗಳಿಂದ ಪಾಠ ಕಲಿತು ಹೊಸ ಹೊಸ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಗಮನ ಹರಿಸಬೇಕು’ ಎಂದು ಸಲಹೆ ಮಾಡಿದರು.

ಎಂ.ಎಸ್.ಪಿ.ಎಲ್‌. ಕಾರ್ಯನಿರ್ವಾಹಕ ನಿರ್ದೇಶಕ ಮೇದ ವೆಂಕಟಯ್ಯ ಮಾತನಾಡಿ, ‘ಎಲ್ಲ ತರಹದ ದೂಳು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ‘ಸಿಲಿಕೋಸಿಸ್‌’ ಹೆಚ್ಚಿನ ಸಮಸ್ಯೆ ಉಂಟು ಮಾಡುತ್ತದೆ. ಗಣಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಅದು ಬರದಂತೆ ನೋಡಿಕೊಳ್ಳಬಹುದು’ ಎಂದು ಹೇಳಿದರು.

‘ಸಿಲಿಕೋಸಿಸ್‌ನಿಂದ ಶ್ವಾಸಕೋಶ, ಹೃದಯ, ಯಕೃತ್ತಿಗೆ ಸಮಸ್ಯೆಯಾಗುತ್ತದೆ. ಆ ರೋಗ ಬಂದ ನಂತರ ಚಿಕಿತ್ಸೆ ಪಡೆದುಕೊಳ್ಳುವ ಬದಲು ಅದು ಬರದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ’ ಎಂದರು.

‘ನಮ್ಮ ಗಣಿ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ತಂತ್ರಜ್ಞರು, ಆಪರೇಟರ್‌ಗಳಿಗೆ ಇನ್ನೂ ಹೆಚ್ಚಿನ ತರಬೇತಿಯ ಅವಶ್ಯಕತೆ ಇದೆ. ಅವರಿಗೆ ಉತ್ತಮ ತರಬೇತಿ ಕೊಟ್ಟರೆ ಗಣಿಗಳಲ್ಲಿ ದುರಂತಗಳು ಸಂಭವಿಸದಂತೆ ತಡೆಯಬಹುದು. ಗಣಿ ಪ್ರದೇಶಗಳಲ್ಲಿ ಮೊಬೈಲ್‌ ಬಳಕೆ ನಿಷೇಧವಿದೆ. ಆದರೆ, ಅದರ ಬಳಕೆ ಯಥೇಚ್ಛವಾಗಿ ನಡೆಯುತ್ತಿದೆ. ಅದರ ಮೇಲೆ ಕಡಿವಾಣ ಬೀಳಬೇಕು. ಸುರಕ್ಷತೆ ಎಂಬುದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಬೇಕೇ ಹೊರತು ತಾತ್ಕಾಲಿಕ ಅಥವಾ ನಿರ್ದಿಷ್ಟ ಸಮಯಕ್ಕಲ್ಲ’ ಎಂದು ಹೇಳಿದರು.

ದಕ್ಷಿಣ ವಲಯ ಗಣಿ ಸುರಕ್ಷತಾ ಉಪ ಮಹಾನಿರ್ದೇಶಕ ಉತ್ಪಲ್‌ ಸಾಹ, ಬೆಂಗಳೂರು ವಿಭಾಗದ ಗಣಿ ಸುರಕ್ಷತಾ ನಿರ್ದೇಶಕ ಜಿ. ವಿಜಯ ಕುಮಾರ್‌, ಬಳ್ಳಾರಿ ವಿಭಾಗದ ನಿರ್ದೇಶಕ ಮನೀಷ್‌ ಇ. ಮರ್ಕುಟೆ, ಗಣಿ ಉದ್ಯಮಿ ಧನಂಜಯ ಜಿ. ರೆಡ್ಡಿ, ಎಂ.ಎಸ್‌.ಪಿ.ಎಲ್‌. ಉಪಾಧ್ಯಕ್ಷ ಕೆ. ಮಧುಸೂದನ್‌ ಇದ್ದರು. ಗಣಿ ಮಾಲೀಕರು, ಗಣಿ ಕಾರ್ಮಿಕರು ಪಾಲ್ಗೊಂಡಿದ್ದರು.

***

ದೇಶದ ಇತರೆ ಗಣಿ ಪ್ರದೇಶಗಳಿಗೆ ಹೋಲಿಸಿದರೆ ಹೊಸಪೇಟೆ, ಬಳ್ಳಾರಿಯ ಗಣಿ ಪ್ರದೇಶಗಳಲ್ಲಿ ಲಭ್ಯವಿರುವ ಅದಿರಿನಲ್ಲಿ ‘ಸಿಲಿಕೋಸಿಸ್‌’ ಪ್ರಮಾಣ ಬಹಳ ಕಡಿಮೆ ಇದೆ. ಹಾಗಂತ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ.

–ಪ್ರಶಾಂತ ಕುಮಾರ್‌ ಸರ್ಕಾರ್‌, ಗಣಿ ಸುರಕ್ಷತಾ ಮಹಾನಿರ್ದೇಶಕ

ದೇಶದ ಜನಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ. ಬೇಡಿಕೆಗಳು ಹೆಚ್ಚಾಗುತ್ತಿವೆ. ಎಷ್ಟೇ ಬೇಡಿಕೆ ಹೆಚ್ಚಾದರೂ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವ ವಿಚಾರದಲ್ಲಿ ಸಮತೋಲನ ಇರಬೇಕು.

–ಮೇದ ವೆಂಕಟಯ್ಯ, ಎಂ.ಎಸ್.ಪಿ.ಎಲ್‌. ಕಾರ್ಯನಿರ್ವಾಹಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT