ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಭೀಮಾ ನಾಯ್ಕ ಸೋದರತ್ತೆ ಮಗನ ಶಂಕಾಸ್ಪಾದ ಸಾವು

ಬಾಲಕನ ಪೋಷಕರು, ಗ್ರಾಮಸ್ಥರಿಂದ ಶಾಲೆ ಎದುರು ಶವವಿಟ್ಟು ಪ್ರತಿಭಟನೆ
Last Updated 26 ನವೆಂಬರ್ 2019, 12:20 IST
ಅಕ್ಷರ ಗಾತ್ರ

ಹೊಸಪೇಟೆ: ಅಪಹರಿಸಿ ಕೊಲೆ ಮಾಡಿದ್ದಾರೆ ಎನ್ನಲಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಅವರ ಸೋದರತ್ತೆಯ ಮಗನ ಪೋಷಕರು, ಗ್ರಾಮಸ್ಥರು ಮಂಗಳವಾರ ನಗರದ ಶ್ರೀ ಚೈತನ್ಯ ಟೆಕ್ನೊ ಶಾಲೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.

ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಸುನೀಲ್‌ ನಾಯ್ಕ (16) ಅವರ ಶವ ಸೋಮವಾರ (ನ.25) ಮಧ್ಯಾಹ್ನ ಬಳ್ಳಾರಿ ತಾಲ್ಲೂಕಿನ ಅಲ್ಲೀಪುರ ಬಳಿ ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆಯಲ್ಲಿ (ಎಚ್‌.ಎಲ್‌.ಸಿ.) ಸಿಕ್ಕಿದೆ.

ಮಂಗಳವಾರ (ನ.26) ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಒಪ್ಪಿಸಲಾಗಿದೆ. ಶವ ಪಡೆದು ನೇರವಾಗಿ ಶಾಲೆಗೆ ಬಂದ ಬಾಲಕನ ಪೋಷಕರು, ಗ್ರಾಮಸ್ಥರು, ಶಾಲೆಯ ಗೇಟ್‌ ಎದುರು ಕುಳಿತು ಪ್ರತಿಭಟನೆ ನಡೆಸಿದರು. ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್‌ ಮಾಡಿದರು.

ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಜರುಗಿಸಬೇಕು. ಕೊಲೆಗೆ ಕಾರಣರಾದವರನ್ನು ಬಂಧಿಸುವವರೆಗೆ ಸ್ಥಳ ಬಿಟ್ಟು ಕದಲಿವುದಿಲ್ಲ ಎಂದು ಒಂದು ಗಂಟೆಗೂ ಹೆಚ್ಚು ಸಮಯ ಪ್ರತಿಭಟಿಸಿದರು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ, ತನಿಖೆ ನಡೆಸಿ, ಕಾನೂನು ಕ್ರಮದ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಟ್ಟರು. ಬಾಲಕ ಮೃತಪಟ್ಟಿದ್ದರಿಂದ ಮಂಗಳವಾರ ಶಾಲೆಗೆ ರಜೆ ಘೋಷಿಸಲಾಗಿತ್ತು. ಬಾಲಕನ ಭಾವಚಿತ್ರವಿರುವ ಶ್ರದ್ಧಾಂಜಲಿ ಫ್ಲೆಕ್ಸ್‌ ಗೇಟ್‌ ಮುಂಭಾಗದಲ್ಲಿ ಹಾಕಲಾಗಿತ್ತು.

ಘಟನೆಯ ವಿವರ:

ಹತ್ತನೇ ತರಗತಿಯಲ್ಲಿ ಓದುತ್ತಿರುವ ಸುನೀಲ್‌ ಹಾಗೂ ಅದೇ ತರಗತಿಯ ಯಶ್‌ ರವಿ, ನಿತಿನ್‌ ಅವರ ಮಧ್ಯೆ ನ. 22ರಂದು (ಶುಕ್ರವಾರ) ಕ್ಷುಲ್ಲಕ ಕಾರಣಕ್ಕಾಗಿ ಶಾಲೆಯ ಶೌಚಾಲಯದಲ್ಲಿ ಜಗಳವಾಗಿದೆ. ಈ ಕುರಿತು ಶಾಲೆಯವರು ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ವಿಷಯ ತಿಳಿಸಿದ್ದಾರೆ. ಸುನೀಲ್‌ ಪೋಷಕರು ಸಭೆಗೆ ಗೈರಾಗಿದ್ದರು. ಪ್ರಾಂಶುಪಾಲರು ಕೂಡ ರಜೆ ಮೇಲಿದ್ದರಿಂದ ಸೋಮವಾರ (ನ.25) ಎಲ್ಲರನ್ನು ಕರೆಸಿ, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.

ಶನಿವಾರ (ನ.23) ಎಂದಿನಂತೆ ಮೂವರು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿ ಮನೆಗೆ ಹಿಂತಿರುಗಿದ್ದಾರೆ. ಇಲ್ಲಿನ ಎಂ.ಜೆ. ನಗರದಲ್ಲಿನ ನಿವಾಸಕ್ಕೆ ಸುನೀಲ್ ಹೋಗಿದ್ದಾನೆ. ಸಂಜೆ ಏಳು ಗಂಟೆ ಸುಮಾರಿಗೆ ಇಲ್ಲಿನ ಎಂ.ಪಿ. ಪ್ರಕಾಶ್‌ ನಗರದ ಬಳಿಯ ಎಚ್‌.ಎಲ್‌.ಸಿ. ಬಳಿ ಸುನೀಲ್‌ ಅವರ ಬೈಸಿಕಲ್‌, ಬ್ಯಾಗುಗಳು ಪತ್ತೆಯಾಗಿವೆ. ಈ ವಿಷಯ ಪೋಷಕರಿಗೆ ಗೊತ್ತಾಗಿ ಅವರು, ‘ನನ್ನ ಮಗನನ್ನು ಅಪಹರಿಸಿದ್ದಾರೆ’ ಎಂದು ಬಡಾವಣೆ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದಾರೆ. ದೂರು ಕೊಟ್ಟ ಎರಡು ದಿನಗಳ ನಂತರ ಶವ ಸಿಕ್ಕಿದೆ.

‘ಸುನೀಲ್‌ನೊಂದಿಗೆ ಜಗಳವಾಡಿದ್ದ ಯಶ್‌ ರವಿ, ನಿತಿನ್‌ ಹಾಗೂ ಅವರಿಬ್ಬರ ಪೋಷಕರು ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ. ಶುಕ್ರವಾರ ಕರೆದ ಸಭೆಗೆ ನಾನು ಹೋಗಿರಲಿಲ್ಲ. ಅದೇ ದಿನ ರವಿ, ನಿತಿನ್‌ ಪೋಷಕರು ನನ್ನ ಮಗನನ್ನು ಹೊಡೆದು, ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ಅವರು ಹೇಳಿದಂತೆ ಮಾಡಿದ್ದಾರೆ. ಅದಕ್ಕೆ ಶಾಲೆಯವರ ಕುಮ್ಮಕ್ಕು ಕೂಡ ಇದೆ. ಹಾಗಾಗಿ ಘಟನೆಗೆ ಕಾರಣರಾದವರನ್ನು ಬಂಧಿಸಬೇಕು’ ಎಂದು ಸುನೀಲ್‌ ತಂದೆ ಹುಲುಗಾ ನಾಯ್ಕ, ತಾಯಿ ದೇವಿಬಾಯಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT