ಹೊಸಪೇಟೆ: ಆನಂದ್‌ ಸಿಂಗ್‌ ಬೆಂಬಲಿಗರಿಂದ ಪ್ರತಿಭಟನೆ

7
ಶಾಸಕರಾದ ಗಣೇಶ್‌, ಭೀಮಾ ನಾಯ್ಕ ವಿರುದ್ಧ ಆಕ್ರೋಷ

ಹೊಸಪೇಟೆ: ಆನಂದ್‌ ಸಿಂಗ್‌ ಬೆಂಬಲಿಗರಿಂದ ಪ್ರತಿಭಟನೆ

Published:
Updated:
Prajavani

ಹೊಸಪೇಟೆ: ಶಾಸಕ ಆನಂದ್‌ ಸಿಂಗ್‌ ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡಿಸಿ ಅವರ ಬೆಂಬಲಿಗರು ಭಾನುವಾರ ನಗರ ಹಾಗೂ ತಾಲ್ಲೂಕಿನ ಕಮಲಾಪುರದಲ್ಲಿ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನ ಕಮಲಾಪುರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ಬಳಿ ಸೇರಿದ ಬೆಂಬಲಿಗರು, ಕಂಪ್ಲಿ ಮುಖ್ಯರಸ್ತೆಯಲ್ಲಿ ರಸ್ತೆತಡೆ ಚಳವಳಿ ನಡೆಸಿದರು. ಟೈರ್‌ಗೆ ಬೆಂಕಿ ಹಚ್ಚಿದರು. ಸಂಜೆ ನಗರದ ರೋಟರಿ ವೃತ್ತದಲ್ಲಿ ಟೈರ್‌ ಸುಟ್ಟು ಆಕ್ರೋಷ ಹೊರ ಹಾಕಿದರು. ಶಾಸಕರಾದ ಜೆ.ಎನ್‌.ಗಣೇಶ್‌, ಭೀಮಾ ನಾಯ್ಕ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಪ್ರಕರಣದ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಅವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು. 

ಬೆಂಬಲಿಗರಾದ ತಾಯಪ್ಪ ದೊಡ್ಡಮನಿ, ಆಂಥೋನಿ, ಗಣೇಶ, ರಾಮಕೃಷ್ಣ ಕಾಕಬಾಳು, ಕಾರ್ತಿಕ್, ಜಗನ್ನಾಥ, ಆರ್.ಎಸ್.ಕಾರ್ತಿಕ್, ಕೃಷ್ಣ, ಡಿ.ವಿ.ಸುರೇಶ್, ರೋಷನ್ ಜಮೀರ್, ಕೆ.ಎಸ್. ಮಳಿಯಪ್ಪ, ನೂರ್ ಇದ್ದರು.

ಕಚೇರಿ ಭಣಭಣ:

ಸದಾ ಪಕ್ಷದ ಕಾರ್ಯಕರ್ತರು, ಬೆಂಬಲಿಗರಿಂದ ಗಿಜಿಗಿಡುತ್ತಿದ್ದ ನಗರದ ರಾಣಿಪೇಟೆಯಲ್ಲಿರುವ ಆನಂದ್‌ ಸಿಂಗ್‌ ಮನೆ, ಪಟೇಲ್‌ ನಗರದ ಪಕ್ಷದ ಕಚೇರಿಯಲ್ಲಿ ಭಾನುವಾರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ವಿಷಯ ತಿಳಿದು ಅವರ ಕುಟುಂಬ ಸದಸ್ಯರು ಬೆಂಗಳೂರಿಗೆ ದೌಡಾಯಿಸಿದ್ದರು.

ಕೆ.ಪಿ.ಸಿ.ಸಿ. ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಅವರ ಸುದ್ದಿಗೋಷ್ಠಿ ಭಾನುವಾರ ಬೆಳಿಗ್ಗೆ 11ಕ್ಕೆ ಕಾಂಗ್ರೆಸ್‌ ಕಚೇರಿಯಲ್ಲಿ ನಿಗದಿಯಾಗಿತ್ತು. ಆದರೆ, ವಿಷಯ ಗೊತ್ತಾದ ನಂತರ ಸುದ್ದಿಗೋಷ್ಠಿ ನಡೆಸಬೇಕೋ ಅಥವಾ ಬೇಡವೋ ಎಂಬ ಗೊಂದಲಕ್ಕೆ ಒಳಗಾದರು. ನಂತರ ಒಂದೂವರೆ ಗಂಟೆ ತಡವಾಗಿ ಬಂದು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಆನಂದ್ ಸಿಂಗ್‌ ಅವರ ಆಪ್ತರು ಯಾರು ಇರಲಿಲ್ಲ. ನಗರದಲ್ಲಿ ದಿನವಿಡೀ ಆನಂದ್‌ ಸಿಂಗ್‌ ಮೇಲಿನ ಹಲ್ಲೆ ಕುರಿತು ಎಲ್ಲೆಡೆ ಗುಸು ಗುಸು ಚರ್ಚೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !