ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ‘ನಲಿಕಲಿ’ ವಿಧಾನ

ಸೋವೇನಹಳ್ಳಿ ತಾಂಡಾ ಕಿರಿಯ ಪ್ರಾಥಮಿಕ ಶಾಲೆ : ಖಾಸಗಿ ಶಾಲೆ ಮೀರಿಸುವ ಶಿಸ್ತು
Last Updated 29 ನವೆಂಬರ್ 2019, 12:41 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಸೋವೇನಹಳ್ಳಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ‘ನಲಿಕಲಿ’ ವಿಭಾಗ ಸಮರ್ಪಕ ಅನುಷ್ಠಾನಗೊಂಡಿದೆ. ಲಂಬಾಣಿ ಮಕ್ಕಳ ಕಲಿಕಾ ಪ್ರಗತಿಯೂ ಗಮನಾರ್ಹವಾಗಿದೆ.

ಇಲ್ಲಿನ ಶಿಕ್ಷಕರು ನಲಿಕಲಿ ವಿಭಾಗವನ್ನು ವಿಶಿಷ್ಟವಾಗಿ ಅಣಿಗೊಳಿಸಿದ್ದಾರೆ. ಅಕ್ಷರ ಚಪ್ಪರ, ಮೈಲಿಗಲ್ಲು ಚೀಲ, ಪ್ರಗತಿ ದಾಖಲೆಯ ಕಲಿಕಾ ಸ್ಟ್ಯಾಂಡ್, ಗೋಡೆ ಬರಹ ಎಲ್ಲವೂ ವಿಭಿನ್ನವಾಗಿವೆ. ಸರಳ ಕಲಿಕೆಗೆ ನೆರವಾಗುವಂತೆ ಕನ್ನಡ, ಇಂಗ್ಲಿಷ್ ವರ್ಣಮಾಲೆ, ಮಗ್ಗಿಗಳನ್ನು ಬಣ್ಣದಿಂದ ಬರೆದು ವಿಷಯವಾರು ಕಲಿಕಾ ಸಾಮಗ್ರಿಗಳನ್ನು ಜೋಡಿಸಿಟ್ಟಿದ್ದಾರೆ. ಮಕ್ಕಳ ಕುತೂಹಲ ಕೆರಳಿಸುವ ಸರಳ ಪ್ರಯೋಗಗಳ ಮೂಲಕ ಇಲ್ಲಿ ಕಲಿಕೆಗೆ ಪ್ರೇರೇಪಿಸಲಾಗುತ್ತಿದೆ.

ಈ ಶಾಲೆಯ ಶಿಸ್ತು ಖಾಸಗಿ ಶಾಲೆ ಮೀರಿಸುವಂತಿದೆ. ಪಾಲಕರ ಮನವೊಲಿಸಿ ಶಾಲೆಯದ್ದೇ ಪ್ರತ್ಯೇಕ ಡ್ರೆಸ್ ಕೋಡ್ ರೂಪಿಸಲಾಗಿದೆ. ಎಲ್ಲ ಮಕ್ಕಳು ಕಡ್ಡಾಯವಾಗಿ ಸಮವಸ್ತ್ರ, ಟೈ, ಬೆಲ್ಟ್, ಬೂಟು, ಸಾಕ್ಸ್ ಧರಿಸಿ ಶಾಲೆಗೆ ಬರುತ್ತಾರೆ. ಎಲ್ಲ ಸರ್ಕಾರಿ ಶಾಲೆಗಳು ಬೆಳಿಗ್ಗೆ 9.45ಕ್ಕೆ ಪ್ರಾರಂಭವಾದರೆ, ಈ ಶಾಲೆ ಬೆಳಿಗ್ಗೆ 8.30ಕ್ಕೆ ತೆರೆಯುತ್ತದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಒಂದು ಗಂಟೆ ಕಾಲ ಹಿಂದಿನ ದಿನದ ಪಾಠಗಳ ಪುನರಾವರ್ತನೆ ನಡೆಯುತ್ತದೆ.

ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ 51 ಮಕ್ಕಳಿದ್ದು, ಇಬ್ಬರು ಶಿಕ್ಷಕರಿದ್ದಾರೆ. ‘ನಲಿಕಲಿ’ ವಿಭಾಗದ ಜವಾಬ್ದಾರಿ ಹೊತ್ತಿರುವ ಮುಖ್ಯಶಿಕ್ಷಕಿ ಎಚ್.ಗಂಗಮ್ಮ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸುತ್ತಿದ್ದಾರೆ. ಶಿಕ್ಷಕ ಹನುಮಂತಪ್ಪ ಪಠ್ಯದ ಜತೆಗೆ ಸ್ಪರ್ಧಾತ್ಮಕವಾಗಿಯೂ ಮಕ್ಕಳನ್ನು ಅಣಿಗೊಳಿಸುತ್ತಾರೆ. ಪ್ರತಿವರ್ಷ ಶಾಲೆಯ ಮೂರ್ನಾಲ್ಕು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗುತ್ತಾರೆ.

ಇಲ್ಲಿನ ಶೈಕ್ಷಣಿಕ ಪರಿಸರವನ್ನು ತಾಂಡಾ ಜನರು ಮೆಚ್ಚಿಕೊಂಡಿದ್ದಾರೆ. ಮಕ್ಕಳನ್ನು ಯಾರೂ ಖಾಸಗಿ ಶಾಲೆಗೆ ದಾಖಲಿಸುತ್ತಿಲ್ಲ. ಹಕ್ಕಂಡಿ, ಸೋವೇನಹಳ್ಳಿಯ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳೂ ಇಲ್ಲಿ ಪ್ರವೇಶ ಪಡೆದಿರುವುದು ಈ ಸರ್ಕಾರಿ ಶಾಲೆಯ ಹೆಗ್ಗಳಿಕೆ.

ಈ ತಾಂಡಾದ ಅನೇಕ ಕುಟುಂಬಗಳು ಉದ್ಯೋಗ ಅರಸಿ ವರ್ಷದಲ್ಲಿ ಆರು ತಿಂಗಳು ಕಾಫಿ ಸೀಮೆಗೆ ವಲಸೆ ಹೋಗುತ್ತಾರೆ. ಮುಖ್ಯಶಿಕ್ಷಕಿ ಗಂಗಮ್ಮ ಪಾಲಕರ ಸಭೆ ನಡೆಸಿ, ಗುಳೇ ಕುಟುಂಬಗಳು ಮಕ್ಕಳನ್ನ ಜತೆಯಲ್ಲಿ ಕರೆದೊಯ್ಯದಂತೆ ಮನವೊಲಿಸಿದ್ದಾರೆ. ವಲಸೆ ಕುಟುಂಬಗಳ ಮಕ್ಕಳಿಗೆ ಸಂಜೆ ಶಾಲೆ ಬಿಡುವ ವೇಳೆ ಮತ್ತೊಮ್ಮೆ ಬಿಸಿಯೂಟ ನೀಡಿ ಮನೆಗೆ ಕಳಿಸುತ್ತಾರೆ. ಹೀಗಾಗಿ ಶಾಲೆಯ ದಾಖಲಾತಿ, ಹಾಜರಾತಿ ಶೇಕಡ ನೂರರಷ್ಟಿದೆ.

‘ಎಸ್.ಡಿ.ಎಂ.ಸಿ. ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ಪರಿಸರ ರೂಪಿಸಿದ್ದೇವೆ. ಶಾಲೆಗೆ ಬರುವ ಬಡ ಮಕ್ಕಳಿಂದಾಗಿಯೇ ನಾವು ಸಂಬಳ ಪಡೆಯುತ್ತಿದ್ದು, ಅವರಿಗೆ ಉತ್ತಮ ಭವಿಷ್ಯ ಕಟ್ಟಿಕೊಡುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದು ಎಚ್.ಗಂಗಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT