ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದ ಬೇಡಿಕೆ; ನಿವೃತ್ತ ನ್ಯಾಯಮೂರ್ತಿ ತನಿಖೆ

ಒಂದು ದಿನದ ನಂತರ ಮಾಧ್ಯಮಗಳಿಗೆ ನಿರ್ಣಯಗಳ ಪತ್ರ ಬಿಡುಗಡೆ
Last Updated 7 ಡಿಸೆಂಬರ್ 2021, 13:43 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಜರುಗಿದ ಸಿಂಡಿಕೇಟ್‌ ಸಭೆಯಲ್ಲಿ ಕೈಗೊಂಡ ಎಂಟು ನಿರ್ಣಯಗಳ ವಿವರವನ್ನು ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಅವರು ಒಂದು ದಿನದ ನಂತರ ಮಂಗಳವಾರ ಸಂಜೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಸಹ ಪ್ರಾಧ್ಯಾಪಕ ಎಂ. ಮಲ್ಲಿಕಾರ್ಜುನಗೌಡ ಅವರ ಮುಂಬಡ್ತಿಗೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆ ನಡೆಸುವುದು, ಹಣದ ಬೇಡಿಕೆಗೆ ಸಂಬಂಧಿಸಿದ ಆರೋಪಗಳ ತನಿಖೆ, 2015ರಿಂದ ಇದುವರೆಗಿನ ಶೈಕ್ಷಣಿಕ ಪ್ರಗತಿಯ ವಿಷಯಗಳು ನಿರ್ಣಯಗಳಲ್ಲಿ ಕೊನೆಯ ಸ್ಥಾನ ಪಡೆದರೆ, ಮುಂದಿನ ಸಿಂಡಿಕೇಟ್‌ ಸಭೆಯಲ್ಲಿ ನಾಡೋಜ ಗೌರವ ಪದವಿಗೆ ಸಾಧಕರ ಪಟ್ಟಿ ಕುರಿತು ಚರ್ಚಿಸಿ ತೀರ್ಮಾನಿಸುವ ವಿಷಯವು ನಿರ್ಣಯಗಳಲ್ಲಿ ಮೊದಲ ಸ್ಥಾನ ಪಡೆದಿದೆ.

ಸಮಾಜ ಕಲ್ಯಾಣ ಇಲಾಖೆಯ ಸ್ಪಷ್ಟೀಕರಣ ಆಧರಿಸಿ 371 (ಜೆ) ಅಡಿ ಬೋಧಕ ಹುದ್ದೆಗಳ ನೇಮಕಾತಿಗೆ ಕ್ರಮ, ಸರ್ಕಾರದ ಅನುದಾನ ಬಿಡುಗಡೆಯಾದ ತಕ್ಷಣ ನೌಕರರಿಗೆ ವೇತನ, ನಿವೃತ್ತರಿಗೆ ಪಿಂಚಣಿ ಸೌಲಭ್ಯ ನೀಡಲು ಕ್ರಮ, ತಾತ್ಕಾಲಿಕ ನೌಕರರಿಗೆ ಒಂದು ತಿಂಗಳ ವೇತನ ಬಿಡುಗಡೆ ಮಾಡಲಾಗಿದ್ದು, ಮತ್ತೊಂದು ತಿಂಗಳ ವೇತನ ಪಾವತಿ. ಕಾರ್ಯಕಾರಿ ಸಮಿತಿ ಸದಸ್ಯ ಜೈಭೀಮ್‌ ಕಟ್ಟಿ, ಪ್ರಾಧ್ಯಾಪಕ ಕೆ.ಎಂ. ಮೇತ್ರಿ, ಸರ್ಕಾರದ ನಿವೃತ್ತ ಉಪಕಾರ್ಯದರ್ಶಿ ಯು.ಬಿ. ಉಳವಿ ಅವರನ್ನು ಒಳಗೊಂಡ ಸಮಿತಿಯಿಂದ ಮಲ್ಲಿಕಾರ್ಜುನಗೌಡ ಮುಂಬಡ್ತಿ ಪ್ರಕರಣದ ಇಲಾಖಾವಾರು ವಿಚಾರಣೆ ನಡೆಸಲು ಸಭೆ ತೀರ್ಮಾನಿಸಿದೆ.

ಪ್ರೊಬೇಷನರಿ ಅವಧಿ ಘೋಷಣೆ, ಬೋಧಕ ಹುದ್ದೆಗಳ ನೇಮಕಾತಿ, ಪಿಂಚಣಿ ಉಪಧನ ಬಿಡುಗಡೆ, ಕೊಲೊಕ್ವಿಯಂ, ಮುಂಬಡ್ತಿಗೆ ಹಣದ ಬೇಡಿಕೆ, 2011ರಿಂದ 2021ರ ಅವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ಆರ್ಥಿಕವಾಗಿ ವಂಚಿಸಿದ ಮತ್ತು ಇತರೆ ಸಾಬೀತಾದ ಪ್ರಕರಣಗಳು, ನೇಮಕಾತಿಗೆ ಅನುಸರಿಸಿದ ಮೀಸಲಾತಿ ನಿಯಮ, ಮಾನದಂಡ, ಅಭ್ಯರ್ಥಿಗಳ ಅರ್ಹತೆ, ಡಾ. ಸಂಪತ್‌ಕುಮಾರ್‌ ತೆಗ್ಗಿ, ಶಂಕರಗೌಡ ಗುಂಡಕನಾಳ ಮಾಡಿರುವ ಆರೋಪಗಳ ಕುರಿತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಏಕವ್ಯಕ್ತಿ ತನಿಖಾ ಸಮಿತಿ ನೇಮಿಸಿ, ಮೂರು ತಿಂಗಳೊಳಗೆ ವರದಿ ಪಡೆಯಲು ಸಭೆ ಅನುಮೋದನೆ ನೀಡಿದೆ ಎಂದು ಕುಲಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT