ಶುಕ್ರವಾರ, ಸೆಪ್ಟೆಂಬರ್ 25, 2020
24 °C
82 ಮಿ.ಮೀ ವರ್ಷಧಾರೆ, 80 ಗುಡಿಸಲಿಗೆ ಹಾನಿ

ಹೊಸಪೇಟೆಯಲ್ಲಿ ರಾತ್ರಿಯಿಡಿ ಬಿರುಸಿನ ಮಳೆ; ಮನೆಗಳಿಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಶುಕ್ರವಾರ ರಾತ್ರಿಯಿಡಿ ಬಿರುಸಿನ ಮಳೆಯಾಗಿದೆ. ಸಂಜೆ ಎಂಟು ಗಂಟೆಗೆ ಆರಂಭಗೊಂಡ ಮಳೆ ಶನಿವಾರ ನಸುಕಿನ ಜಾವದ ವರೆಗೆ ಸತತವಾಗಿ ಸುರಿದಿದೆ. 82 ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ.

ಭಾರಿ ಮಳೆಯಿಂದ ನಗರದ ಬಹುತೇಕ ಚರಂಡಿಗಳು ಉಕ್ಕಿ ಹರಿದಿವೆ. ಹಳ್ಳ, ಕೊಳ್ಳಗಳು ಭರ್ತಿಯಾಗಿವೆ. ನಗರ ಹೊರವಲಯದ ಜಂಬುನಾಥಹಳ್ಳಿಗುಡ್ಡ ಹಳ್ಳದ ನೀರು ನಗರದ ಅಲೆಮಾರಿ ಬುಡ್ಗ ಜಂಗಮ ಕಾಲೊನಿ, ಆಜಾದ್‌ ನಗರ, ಶಾದಿ ಮಹಲ್‌ ಪ್ರದೇಶಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿದೆ.

ಮಳೆ ನೀರು ರಭಸವಾಗಿ ಹರಿದು ಬಂದದ್ದರಿಂದ ಅಲೆಮಾರಿಗಳ ಟೆಂಟ್‌ಗಳು, ಗುಡಿಸಲು ಕಿತ್ತು ಹೋಗಿವೆ. ದವಸ ಧಾನ್ಯ, ಬಟ್ಟೆ ಸೇರಿದಂತೆ ಇತರೆ ವಸ್ತುಗಳು ನೀರಿನಲ್ಲಿ ತೊಯ್ದಿವೆ. ಒಟ್ಟು 80 ಗುಡಿಸಲುಗಳಿಗೆ ಹಾನಿಯಾಗಿದೆ. ಮಾರೆಮ್ಮ ದೇವಸ್ಥಾನಕ್ಕೂ ನೀರು ನುಗ್ಗಿದೆ.

ಆಜಾದ್‌ ನಗರದಿಂದ ಅಲೆಮಾರಿ ಕಾಲೊನಿ ವರೆಗಿನ ಮುಖ್ಯರಸ್ತೆ, ಬಡಾವಣೆಯಲ್ಲಿ ಎರಡರಿಂದ ಮೂರು ಅಡಿ ನೀರು ಸಂಗ್ರಹಗೊಂಡಿದ್ದು, ಜನ ಓಡಾಡಲು ಸಮಸ್ಯೆಯಾಗಿದೆ. ಪಟೇಲ್‌ ನಗರದ ವೇಣುಗೋಪಾಲ ದೇವಸ್ಥಾನಕ್ಕೂ ನೀರು ನುಗ್ಗಿದೆ.
ಬಸವೇಶ್ವರ ಬಡಾವಣೆ, ಚಪ್ಪರದಹಳ್ಳಿ, ಚಿತ್ತವಾಡ್ಗಿ, ಪಟೇಲ್‌ ನಗರ ಸೇರಿದಂತೆ ಹಲವೆಡೆ ಚರಂಡಿಗಳು ಉಕ್ಕಿ ಹರಿದು, ಹೊಲಸು ರಸ್ತೆ ಮೇಲೆ ಹರಿದಾಡಿದೆ.

‘ಬಡಾವಣೆಯಲ್ಲಿ ಚರಂಡಿಗಳನ್ನು ನಿರ್ಮಿಸಿಲ್ಲ. ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲ. ಹಳ್ಳದ ನೀರು ಬಂದು ಗುಡಿಸಲುಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಇಷ್ಟಾದರೂ ಇದುವರೆಗೆ ಯಾವೊಬ್ಬ ಜನಪ್ರತಿನಿಧಿ, ಅಧಿಕಾರಿ ಭೇಟಿ ಮಾಡಿಲ್ಲ’ ಎಂದು ಅಲೆಮಾರಿ ಗುಡಾರ ಗುಡಿಸಲು ನಿವಾಸಿಗಳ ಕಲ್ಯಾಣ ಸಂಘದ ಜಿಲ್ಲಾ ಅಧ್ಯಕ್ಷ ಸಣ್ಣ ಮಾರೆಪ್ಪ ಹೇಳಿದ್ದಾರೆ.

ತಾಲ್ಲೂಕಿನ ಹಂಪಿ, ಚಿನ್ನಾಪುರ, ನಲ್ಲಾಪುರ, ಹೊಸೂರು, ಬೈಲುವದ್ದಿಗೇರಿ, ಧರ್ಮಸಾಗರ, ವಡ್ಡರಹಳ್ಳಿ, ಸಂಕ್ಲಾಪುರ, ಕಾರಿಗನೂರು, ವ್ಯಾಸನಕೆರೆ, ಬಸವನದುರ್ಗ, ನಾಗೇನಹಳ್ಳಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.

ಬಿತ್ತನೆ ಮತ್ತಷ್ಟು ಚುರುಕು
ನಾಲ್ಕೈದು ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವ ಕಾರಣ ಹೊಸಪೇಟೆ ಸುತ್ತಮುತ್ತಲಿನ ಭಾಗಗಳಲ್ಲಿ ಬಿತ್ತನೆ ಕಾರ್ಯ ಮತ್ತಷ್ಟು ಚುರುಕು ಪಡೆದಿದೆ. ಜೂನ್‌ನಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಿರಲಿಲ್ಲ. ಆದರೆ, ಜುಲೈನಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಕಾರಣ ರೈತರು ಸಂತಸಗೊಂಡಿದ್ದಾರೆ. ಶನಿವಾರದಿಂದ ತುಂಗಭದ್ರಾ ಜಲಾಶಯದ ಕಾಲುವೆಗಳಿಗೂ ನೀರು ಹರಿಯಲಿದ್ದು, ಭತ್ತ ನಾಟಿ ಚುರುಕು ಪಡೆದುಕೊಳ್ಳಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು