ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆ: ಬಿಜೆಪಿ,ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡು

ಸಜ್ಜಾಗುತ್ತಿದೆ ಅಖಾಡ
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆಗೆ ಅಖಾಡ ಸಜ್ಜಾಗುತ್ತಿದ್ದು, ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಬೆಳೆಯುತ್ತಿದೆ.

ಕಾಂಗ್ರೆಸ್‌ನಿಂದ ಚುನಾವಣಾ ಕಣಕ್ಕೆ ಇಳಿಯ ಬಯಸುವವರ ಸಂಖ್ಯೆ ಬಿಜೆಪಿಗಿಂತ ಸ್ವಲ್ಪ ದೊಡ್ಡದಾಗಿದೆ. ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿ ಇದುವರೆಗೆ100ಕ್ಕೂ ಹೆಚ್ಚು ಜನ ಅರ್ಜಿ ಹಾಕಿದ್ದಾರೆ. ಬಿಜೆಪಿಯ ಟಿಕೆಟ್‌ ಗಿಟ್ಟಿಸಲು 70 ಜನ ಅರ್ಜಿ ಸಲ್ಲಿಸಿದ್ದಾರೆ. ದಿನೇ ದಿನೇ ಈ ಪಟ್ಟಿ ದೊಡ್ಡದಾಗುತ್ತಲೇ ಇದೆ.

ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವುದರಿಂದ ಜೆ.ಡಿ.ಎಸ್‌. ಸಿದ್ಧತೆಯಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ. ಇಲ್ಲಿಯವರೆಗೆ ಹತ್ತು ಜನ ಜೆ.ಡಿ.ಎಸ್‌.ನಿಂದ ಸ್ಪರ್ಧಿಸುವುದಕ್ಕೆ ಒಲವು ತೋರಿ ಅರ್ಜಿ ಹಾಕಿದ್ದಾರೆ. ಎಲ್ಲ 20 ಸ್ಥಾನಗಳಿಗೆ ಸ್ಪರ್ಧಿಸಬೇಕೋ ಅಥವಾ ಗೆಲ್ಲುವ ಸ್ಥಾನಗಳಿಗಷ್ಟೇ ಸ್ಪರ್ಧಿಸಬೇಕೋ ಎಂಬ ಗೊಂದಲ ಜೆ.ಡಿ.ಎಸ್‌.ನಲ್ಲಿದೆ.

ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಪಕ್ಷದ ಮುಖಂಡರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎರಡೂ ಪಕ್ಷಗಳು ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ. ಬೇಗ ಟಿಕೆಟ್‌ ಘೋಷಿಸಿದರೆ ಅತೃಪ್ತಿ ಹೊಗೆಯಾಡಬಹುದು. ಪಕ್ಷದ ವಿರುದ್ಧ ತಿರುಗಿ ಬೀಳಬಹುದು ಎಂಬ ಆತಂಕ ಮುಖಂಡರನ್ನು ಕಾಡುತ್ತಿದೆ. ಅದರಲ್ಲೂ ಕಾಂಗ್ರೆಸ್‌ನಲ್ಲಿ ಹೆಚ್ಚಿನ ಟಿಕೆಟ್‌ ಆಕಾಂಕ್ಷಿಗಳು ಇರುವುದರಿಂದ ಮುಖಂಡರು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನಾಮಪತ್ರ ಸಲ್ಲಿಕೆಗೆ ಒಂದೋ, ಎರಡೋ ದಿನ ಇರುವಾಗ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಿಸಿದರೂ ಅಚ್ಚರಿ ಪಡಬೇಕಿಲ್ಲ ಎಂದು ತಿಳಿದು ಬಂದಿದೆ.

ಶಾಸಕ ಬಿ. ಶ್ರೀರಾಮುಲು, ಚುನಾವಣಾ ಉಸ್ತುವಾರಿ ಎಚ್‌.ಆರ್‌. ಗವಿಯಪ್ಪನವರು ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ. ಶೀಘ್ರದಲ್ಲೇ ಮತ್ತೊಂದು ಸಭೆ ನಡೆಸಿ, ಟಿಕೆಟ್‌ ಹಂಚಿಕೆಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಭದ್ರಕೋಟೆ:

ಕಮಲಾಪುರ ಪಟ್ಟಣ ಪಂಚಾಯಿತಿ ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಹಿಂದಿನ ಎರಡು ಚುನಾವಣೆಗಳಲ್ಲಿ ಜಯ ಗಳಿಸಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್‌, ಈ ಸಲ ಜಯಭೇರಿ ಬಾರಿಸಿ ಹ್ಯಾಟ್ರಿಕ್‌ ಸಾಧನೆ ಮಾಡುವ ಕನಸು ಕಾಣುತ್ತಿದೆ.

ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ 14 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಬಿ.ಎಸ್‌.ಆರ್‌. ಕಾಂಗ್ರೆಸ್‌ ಮೂರು ಸ್ಥಾನ, ಮೂವರು ಪಕ್ಷೇತರರು ಜಯ ಗಳಿಸಿದ್ದರು. ಈ ಹಿಂದೆ ಬಿಜೆಪಿ ಒಡೆದ ಮನೆಯಾಗಿತ್ತು. ಈಗ ಆ ಪಕ್ಷದ ಎಲ್ಲ ಮುಖಂಡರು ಒಂದಾಗಿರುವುದರಿಂದ ಶಕ್ತಿ ಬಂದಿದೆ. ಕಾಂಗ್ರೆಸ್‌ನ ಭದ್ರಕೋಟೆಗೆ ಲಗ್ಗೆಯಿಡಲು ಬಿಜೆಪಿ ತೀವ್ರ ಕಸರತ್ತು ನಡೆಸುತ್ತಿದೆ. ಜೆ.ಡಿ.ಎಸ್‌. ಕೂಡ ಖಾತೆ ತೆರೆಯುವ ಉಮೇದಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT