ಗಣೇಶ ಚತುರ್ಥಿ: ಬೆಳಿಗ್ಗೆ ಪ್ರತಿಷ್ಠಾಪನೆ, ಸಂಜೆ ವಿಸರ್ಜನೆ

7
ಶ್ರದ್ಧಾ, ಭಕ್ತಿಯಿಂದ ವಿಘ್ನ ನಿವಾರಕನ ಪೂಜೆ; ಎಲ್ಲೆಡೆ ಸಡಗರ, ಸಂಭ್ರಮ

ಗಣೇಶ ಚತುರ್ಥಿ: ಬೆಳಿಗ್ಗೆ ಪ್ರತಿಷ್ಠಾಪನೆ, ಸಂಜೆ ವಿಸರ್ಜನೆ

Published:
Updated:
Deccan Herald

ಹೊಸಪೇಟೆ: ಗಣೇಶ ಚತುರ್ಥಿಯನ್ನು ಗುರುವಾರ ನಗರದಾದ್ಯಂತ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ಸೂರ್ಯ ಕಣ್ತೆರೆಯುವುದಕ್ಕೂ ಮುನ್ನವೇ ಮಹಿಳೆಯರು ಮನೆಯ ಅಂಗಳವನ್ನು ಸಾರಿಸಿ, ಅದರ ಮೇಲೆ ಬಗೆಬಗೆಯ ರಂಗೋಲಿಗಳನ್ನು ಬಿಡಿಸಿದರು. ಮನೆ ಬಾಗಿಲನ್ನು ಹೂ, ಮಾವಿನ ಎಲೆಯ ತೋರಣ ಹಾಗೂ ಬಾಳೆ ದಿಂಡಿನಿಂದ ಅಲಂಕರಿಸಿದರು. ಇದರಿಂದಾಗಿ ಎಲ್ಲೆಡೆ ವಾತಾವರಣ ಕಳೆಗಟ್ಟಿತ್ತು.

ಇಲ್ಲಿನ ಪಟೇಲ್್ ನಗರ, ರಾಣಿಪೇಟೆ, ಅಮರಾವತಿ, ಚಿತ್ತವಾಡ್ಗಿ, ಬಸವೇಶ್ವರ ಬಡಾವಣೆ, ಪಾಂಡುರಂಗ ಕಾಲೊನಿ, ಎಂ.ಪಿ. ಪ್ರಕಾಶ ನಗರ ಸೇರಿದಂತೆ ಬಹುತೇಕ ಬಡಾವಣೆಗಳ ಮನೆಯ ಅಂಗಳ ರಂಗೋಲಿಯಿಂದ ಕಂಗೊಳಿಸುತ್ತಿತ್ತು. ಒಂದಕ್ಕಿಂತ ಒಂದು ಭಿನ್ನವಾದ ರಂಗೋಲಿಯನ್ನು ನೋಡುತ್ತಿದ್ದರೆ ಯಾರೋ ಸ್ಪರ್ಧೆ ಹಮ್ಮಿಕೊಂಡಿದ್ದಿರಬಹುದು ಎಂಬ ಭಾವನೆ ಮನದಲ್ಲಿ ಮೂಡುತ್ತಿತ್ತು.

ಮನೆಯಲ್ಲಿ ವಿಶೇಷ ರೀತಿಯಲ್ಲಿ ಸಿಂಗರಿಸಿದ ಮಂಟಪದ ನಡುವೆ ಬೆನಕನನ್ನು ಪ್ರತಿಷ್ಠಾಪಿಸಿ, ಆತನಿಗೆ ಹೂ, ಹಣ್ಣು, ಕಾಯಿ ಸಮರ್ಪಿಸಿದರು. ಚಕ್ಕುಲಿ, ರವೆ ಉಂಡೆ, ಮೋದಕಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ‘ವಿಘ್ನ ನಿವಾರಕನಿಗೆ ಜಯವಾಗಲಿ’, ‘ಸಂಕಷ್ಟ ಹರನಿಗೆ ಜಯವಾಗಲಿ’ ಎಂದು ಕುಟುಂಬ ಸದಸ್ಯರೆಲ್ಲರೂ ಕೂಡಿ ಜೈಕಾರ ಹಾಕಿದರು. ಪ್ರತಿಯೊಬ್ಬರೂ ಸಾಲಾಗಿ ನಿಂತು ದರ್ಶನ ಪಡೆದು, ಮನೆ ಮಂದಿಯೆಲ್ಲ ಕುಳಿತು ಹೋಳಿಗೆ, ಪಾಯಸ ಸೇರಿದಂತೆ ಇತರೆ ಖಾದ್ಯಗಳನ್ನು ಸವಿದರು.

ಇದು ಮನೆಗಳಲ್ಲಿ ಕಂಡು ಬಂದ ಚಿತ್ರಣವಾದರೆ, ಬಡಾವಣೆಗಳಲ್ಲಿ ಆಯಾ ಗಣೇಶ ಮಂಡಳಿಯವರು ಇದಕ್ಕಿಂತ ಭಿನ್ನವಾಗಿ ಹಬ್ಬ ಆಚರಿಸಿದರು. ಮಂಡಳಿಯ ಯುವಕರೆಲ್ಲರೂ ಸೇರಿ ಮಾರುಕಟ್ಟೆಗೆ ಹೋಗಿ, ಅಲ್ಲಿಂದ ಬಡಾವಣೆಯ ತನಕ ಗಣಪನ ಪ್ರತಿಮೆಯನ್ನು ಮೆರವಣಿಗೆಯಲ್ಲಿ ತಂದರು. ಮೆರವಣಿಗೆಯುದ್ದಕ್ಕೂ ತಮಟೆ ಬಾರಿಸುತ್ತ, ತಲೆ ಮೇಲೆ ಕೇಸರಿ ವರ್ಣದ ಗಾಂಧಿ ಟೋಪಿ, ಕೇಸರಿ ಧ್ವಜಗಳನ್ನು ಹಾರಿಸುತ್ತ, ಹೆಜ್ಜೆ ಹಾಕಿದರು. ‘ಗಣಪತಿ ಬೊಪ್ಪ ಮೋರ್‍ಯಾ’ ಎಂಬ ಘೋಷಣೆಗಳನ್ನು ಕೂಗಿದರು.

ಕೆಲವು ಬಡಾವಣೆಗಳವರು ಬೆಳಿಗ್ಗೆ ಪ್ರತಿಮೆ ತಂದು ಪ್ರತಿಷ್ಠಾಪಿಸಿದರೆ, ಕೆಲವರು ಮಧ್ಯಾಹ್ನ ತಂದರು. ಮತ್ತೆ ಕೆಲವರು ಇಳಿಸಂಜೆಯಲ್ಲಿ ತಂದು ಪೂಜಿಸಿದರು. ಹೀಗೆ ದಿನವಿಡೀ ಮೆರವಣಿಗೆ, ಪೂಜೆ–ಪುನಸ್ಕಾರ ನಡೆದಿದ್ದರಿಂದ ತಮಟೆ, ಪಟಾಕಿ ಸುಡುವ ಸದ್ದು ಕೇಳಿ ಬಂತು. ಮನೆಗಳಲ್ಲಿ ಸಂಜೆ ಮತ್ತೊಮ್ಮೆ ಗಣಪನಿಗೆ ಪೂಜೆ ಸಲ್ಲಿಸಿ, ವಿದಾಯ ಹೇಳಿದರು.

ಕಂಚಿನ ತಟ್ಟೆಯಲ್ಲಿ ಗಣಪನನ್ನು ಕೂರಿಸಿ, ತಲೆ ಮೇಲೆ ಇಟ್ಟುಕೊಂಡು, ಗಣಪನ ಜಪಿಸುತ್ತ ಕುಟುಂಬ ಸದಸ್ಯರೆಲ್ಲರೂ ತಂಡೋಪ ತಂಡವಾಗಿ ಇಲ್ಲಿನ ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆ (ಎಚ್‌.ಎಲ್‌.ಸಿ.), ಕೆಳಮಟ್ಟದ ಕಾಲುವೆ (ಎಲ್‌.ಎಲ್‌.ಸಿ.) ಹಾಗೂ ಬಸವ ಕಾಲುವೆಗೆ ತೆರಳಿದರು. ಅಲ್ಲಿ ಜಯಘೋಷದೊಂದಿಗೆ ಪ್ರತಿಮೆಗಳನ್ನು ವಿಸರ್ಜಿಸಿದರು. ವಿವಿಧ ಬಡಾವಣೆಗಳಿಂದ ಕುಟುಂಬ ಸಮೇತ ಜನ ಕಾಲುವೆಗಳಿಗೆ ಬಂದದ್ದರಿಂದ ಸಂಜೆ ಏಳರಿಂದ ರಾತ್ರಿ 10ರ ವರೆಗೆ ಜನಜಾತ್ರೆ ಕಂಡು ಬಂತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !