ವಾಸ್ತುಶಿಲ್ಪದ ಮೇಲೆ ಇಸ್ಲಾಂ ಗಾಢ ಪ್ರಭಾವ: ಎಸ್.ಕೆ. ಅರುಣಿ

ಶುಕ್ರವಾರ, ಏಪ್ರಿಲ್ 19, 2019
22 °C

ವಾಸ್ತುಶಿಲ್ಪದ ಮೇಲೆ ಇಸ್ಲಾಂ ಗಾಢ ಪ್ರಭಾವ: ಎಸ್.ಕೆ. ಅರುಣಿ

Published:
Updated:
Prajavani

ಹೊಸಪೇಟೆ: ‘ಭಾರತದಲ್ಲಿ 13ರಿಂದ 18ನೇ ಶತಮಾನದ ವರೆಗಿನ ಇಸ್ಲಾಂ ದೊರೆಗಳ ಆಳ್ವಿಕೆಯು ವಾಸ್ತುಶಿಲ್ಪದ ಮೇಲೆ ಗಾಢವಾದ ಪರಿಣಾಮ ಬೀರಿದೆ’ ಎಂದು ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ ಪ್ರಾದೇಶಿಕ ನಿರ್ದೇಶಕ ಎಸ್.ಕೆ. ಅರುಣಿ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು ಮಂಗಳವಾರ ವಿ.ವಿ.ಯಲ್ಲಿ ಹಮ್ಮಿಕೊಂಡಿದ್ದ ಸಿ.ಟಿ.ಎಂ. ಕೊಟ್ರಯ್ಯ ದತ್ತಿ ನಿಧಿ ಕಾರ್ಯಕ್ರಮದಲ್ಲಿ ‘ಹಿಂದೂ–ಮುಸ್ಲಿಂ ವಾಸ್ತುಶಿಲ್ಪ’ದ ಕುರಿತು ಮಾತನಾಡಿದರು.

‘ಮಸೀದಿ, ರೋಜಾ, ದರ್ಗಾ, ಗೋರಿ ಇವೆಲ್ಲ ಕಲೆಯ ಕೇಂದ್ರಗಳು. ಮೆಕ್ಕಾದಲ್ಲಿರುವ ವಾಸ್ತುಶಿಲ್ಪವು ಅತ್ಯಂತ ಪ್ರಮುಖವಾದುದು. ಮಸೀದಿಗಳು ವಾಸ್ತುಶಿಲ್ಪದ ಪ್ರತಿನಿಧಿಗಳಾಗಿವೆ. ಧಾರ್ಮಿಕ ಸ್ಮಾರಕಗಳು, ಶವಸಂಸ್ಕಾರದ ಭಾಗವಾದ ಗೋರಿಗಳು, ಸೂಫಿ ಸಂಪ್ರದಾಯದ ದರ್ಗಾಗಳು, ಲೌಕಿಕ ಭಾಗವಾದ ಅರಮನೆಗಳು, ಮಿನಾರ್‌ಗಳು, ನಗರ, ಕೋಟೆಗಳು, ಬಜಾರುಗಳು, ಉದ್ಯಾನವನಗಳು, ಯಾತ್ರಿ ನಿವಾಸಗಳು ಇವೆಲ್ಲವೂ ಇಸ್ಲಾಂ ವಾಸ್ತುಶಿಲ್ಪದ ಅಧ್ಯಯನಕ್ಕೆ ಮತ್ತು ಸಂಶೋಧನೆಗೆ ಆಕರಗಳಾಗಿವೆ‘ ಎಂದು ವಿವರಿಸಿದರು.

‘ಕಮಾನುಗಳು, ಗುಮ್ಮಟಗಳು, ಮಿನಾರ್‌ಗಳು, ಗಾರೆ ಅಲಂಕಾರಗಳು, ಸುಂದರ ಹಸ್ತಾಕ್ಷರಗಳು, ಬಣ್ಣಬಣ್ಣದ ಟೈಲ್ಸ್‌ಗಳು, ವರ್ಣಚಿತ್ರಗಳಲ್ಲಿ ಜ್ಯಾಮಿತಿ ಬಳಕೆ ಬಹಳ ಪ್ರಮುಖವಾದ ಲಕ್ಷಣಗಳಾಗಿ ಗೋಚರಿಸುತ್ತವೆ. ಇಲ್ಲಿ ಮೂರ್ತಿ ಪೂಜೆ ಇಲ್ಲ. ಗೋರಿಗಳು ಮುಸ್ಲಿಮೇತರ ಜಗತ್ತಿನಲ್ಲಿ ಹೇರಳವಾಗಿವೆ’ ಎಂದು ತಿಳಿಸಿದರು.

‘ಗೋರಿಗಳ ಒಳಾಂಗಣದಲ್ಲಿ ಅತ್ಯಂತ ಸುಂದರವಾದ ವರ್ಣಚಿತ್ರಗಳಿವೆ. ಊರ ಹೊರಗೆ ಪ್ರಾರ್ಥನೆ ಸಲ್ಲಿಸಲು ಈದ್ಗಾಗಳಿವೆ. ವಾಸ್ತುಶಿಲ್ಪ ಶೈಲಿಯಲ್ಲಿ ಸಾಮ್ರಾಜ್ಯ ಶೈಲಿಯನ್ನು ವಿವರಿಸುತ್ತ ಶ್ರೀರಂಗಪಟ್ಟಣ, ಸವಣೂರು, ಮಳಖೇಡ, ವಿಜಯಪುರ, ಕಲಬುರ್ಗಿ, ದೆಹಲಿ ಮೊದಲಾದ ಕಡೆಗಳಲ್ಲಿ ಕಾಣಬರುವ ತುಘಲಕ್ ಶೈಲಿ, ಲೋದಿ ಶೈಲಿ, ಮಾಳವ ಸುಲ್ತಾನರ ಶೈಲಿ, ಮೊಹಲರ ವಾಸ್ತುಶಿಲ್ಪ ಶೈಲಿ, ರಜಪೂತ ಮೊಘಲ್‍ ಶೈಲಿ, ಗುಜರಾತ್ ರಾಜಸ್ತಾನ ಶೈಲಿಯ ಮಿಶ್ರಣದ ವಾಸ್ತುಶಿಲ್ಪಗಳನ್ನು’ ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಿದರು.

ವಿಜ್ಞಾನ ನಿಕಾಯದ ಡೀನ್‌ ಸಿ. ಮಹದೇವ, ‘ವಸ್ತು ಸಂಗ್ರಹಾಲಯಗಳು, ವಿಶ್ವವಿದ್ಯಾಲಯಗಳಲ್ಲಿ ಪ್ರಯೋಗ ಶಾಲೆಗಳಿದ್ದಂತೆ. ಮುಂದಿನ ಜನಾಂಗಕ್ಕೆ ಜ್ಞಾನದ ಒಂದು ಭಾಗವಾಗಿವೆ. ಸಂಶೋಧನ ವಿದ್ಯಾರ್ಥಿಗಳು ಹಿಂದೂ–ಮುಸ್ಲಿಂ ವಾಸ್ತುಶಿಲ್ಪದ ಅನೇಕ ವಿಷಯಗಳನ್ನು ಸಂಶೋಧನೆಗಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ’ ಎಂದರು.

ಕುಲಸಚಿವ ಅಶೋಕಕುಮಾರ ರಂಜೇರೆ, ಶೈಕ್ಷಣಿಕ ಉಪಕುಲಸಚಿವ ಎಸ್.ವೈ. ಸೋಮಶೇಖರ, ವಸ್ತುಸಂಗ್ರಹಾಲಯ ಮತ್ತು ಪ್ರವಾಸೋದ್ಯಮ ಸಂಶೋಧನ ಕೇಂದ್ರದ ನಿರ್ದೇಶಕ ವಾಸುದೇವ ಬಡಿಗೇರ, ಕೇಂದ್ರದ ಸಂಶೋಧನ ಸಹಾಯಕ ಲೋಕಣ್ಣ ಭಜಂತ್ರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !