ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಾಂತ್ಯಕ್ಕೆ ತಾಯಿ, ಮಕ್ಕಳ ಸರ್ಕಾರಿ ಆಸ್ಪತ್ರೆ ಶುರು

₹11 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಆಸ್ಪತ್ರೆ; ಭರದಿಂದ ನಡೆದಿದೆ ಕಾಮಗಾರಿ
ಅಕ್ಷರ ಗಾತ್ರ

ಹೊಸಪೇಟೆ: ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಈ ವರ್ಷಾಂತ್ಯಕ್ಕೆ ಇಲ್ಲಿನ ನಗರಸಭೆ ಕಚೇರಿ ಬಳಿ ಕಾರ್ಯಾರಂಭ ಮಾಡಲಿದೆ.

ಜಿ+1 ಕಟ್ಟಡ ನಿರ್ಮಾಣ ಕೆಲಸವು ಭರದಿಂದ ನಡೆಯುತ್ತಿದೆ. ಈಗಾಗಲೇ ಎರಡೂ ಮಹಡಿಗಳಿಗೆ ಆರ್‌.ಸಿ.ಸಿ. ಹಾಕಲಾಗಿದೆ. ಪ್ಲಾಸ್ಟರ್‌, ಟೈಲ್ಸ್‌, ವೈರಿಂಗ್‌, ಸುಣ್ಣ, ಬಣ್ಣ ಬಳಿಯುವ ಕೆಲಸ ಪೂರ್ಣಗೊಂಡರೆ ಕಟ್ಟಡ ಎಲ್ಲ ರೀತಿಯಲ್ಲೂ ಸಿದ್ಧಗೊಳ್ಳುತ್ತದೆ. ಈ ವರ್ಷದ ಡಿಸೆಂಬರ್‌ ಒಳಗೆ ಕಟ್ಟಡ ನಿರ್ಮಾಣ ಕೆಲಸ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

2018ರ ಫೆಬ್ರುವರಿಯಲ್ಲಿ ಕಟ್ಟಡ ನಿರ್ಮಾಣ ಕೆಲಸ ಆರಂಭಗೊಳ್ಳಬೇಕಿತ್ತು. ಆದರೆ, ಆಸ್ಪತ್ರೆ ಜಾಗಕ್ಕೆ ಹೊಂದಿಕೊಂಡಿರುವ ಚರ್ಚ್‌ನವರು ನ್ಯಾಯಾಲಯದ ಮೊರೆ ಹೋಗಿ, ತಡೆಯಾಜ್ಞೆ ತಂದಿದ್ದರಿಂದ ಆಗಸ್ಟ್‌ನಲ್ಲಿ ಕೆಲಸ ಕೈಗೆತ್ತಿಕೊಳ್ಳಲಾಯಿತು. ಇದರಿಂದ ವಿಳಂಬವಾಗಿದೆ.

‘ನಿಗದಿತ ಅವಧಿಯಲ್ಲಿ ಕಾಮಗಾರಿ ಆರಂಭಗೊಂಡಿದ್ದರೆ ಬೇಗ ಕಟ್ಟಡ ನಿರ್ಮಾಣ ಕೆಲಸ ಮುಗಿಯುತ್ತಿತ್ತು. ಆದರೆ, ಚರ್ಚ್‌ನವರು ನ್ಯಾಯಾಲಯದಿಂದ ತಡೆ ತಂದದ್ದರಿಂದ ವಿಳಂಬವಾಗಿದೆ. ಈಗ ಯಾವುದೇ ಅಡೆತಡೆಗಳಿಲ್ಲದೆ ಕೆಲಸ ಮುಂದುವರೆದಿದೆ. ಈ ವರ್ಷಾಂತ್ಯದೊಳಗೆ ಕೆಲಸ ಪೂರ್ಣಗೊಳ್ಳಲಿದೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್‌ ‘ಪ್ರಜಾವಾಣಿ’ಗೆ ಭರವಸೆ ವ್ಯಕ್ತಪಡಿಸಿದರು.

‘ಚರ್ಚ್‌ನವರು ಸೆಷನ್ಸ್‌ ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿರುವುದನ್ನು ಪ್ರಶ್ನಿಸಿ ಮೇಲಿನ ಕೋರ್ಟ್‌ಗೆ ಹೋಗಲು ನಿರ್ಧರಿಸಿದ್ದಾರೆ. ಒಂದುವೇಳೆ ಮತ್ತೆ ತಡೆಯಾಜ್ಞೆ ತಂದರೆ ವಿಳಂಬವಾಗಬಹುದು. ಆಸ್ಪತ್ರೆ ನಿರ್ಮಾಣಗೊಂಡರೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಹಾಗಾಗಿ ಚರ್ಚ್‌ನವರು ಕಟ್ಟಡ ನಿರ್ಮಾಣಕ್ಕೆ ತಡೆ ಒಡ್ಡಬಾರದು. ಸಾರ್ವಜನಿಕ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.

‘ನಗರದ ಉಪವಿಭಾಗ ಮಟ್ಟದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆ ಮೇಲೆ ಹೆಚ್ಚಿನ ಒತ್ತಡ ಇದೆ. ನಾಲ್ಕೈದು ತಾಲ್ಲೂಕುಗಳಿಂದ ನಿತ್ಯ ನೂರಾರು ಜನ ಬರುತ್ತಾರೆ. ಒಂದುವೇಳೆ ತಾಯಿ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆ ನಿರ್ಮಾಣಗೊಂಡರೆ ಆ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ ಉತ್ತಮ ಚಿಕಿತ್ಸೆ ಸಿಗುತ್ತದೆ. ಸಾರ್ವಜನಿಕರು ಅಪಾರ ಹಣ ಖರ್ಚು ಮಾಡಿ, ಖಾಸಗಿ ಆಸ್ಪತ್ರೆಗಳಿಗೆ ಅಲೆಯುವುದು ತಪ್ಪುತ್ತದೆ’ ಎಂದರು.

60 ಹಾಸಿಗೆಯ ಸುಸಜ್ಜಿತ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳಿಗೆ ಅಗತ್ಯವಾದ ಎಲ್ಲ ರೀತಿಯ ಚಿಕಿತ್ಸೆ ಒಂದೇ ಸೂರಿನಡಿ ಸಿಗಲಿದೆ. ಸ್ತ್ರೀರೋಗ ತಜ್ಞೆ, ಮಕ್ಕಳ ವೈದ್ಯರು, ಅರವಳಿಕೆ ತಜ್ಞರು, ಸ್ಟಾಫ್‌ ನರ್ಸ್‌ ಹಾಗೂ ‘ಡಿ’ ಗ್ರುಪ್‌ ನೌಕರರ ನೇಮಕ ಮಾಡಬೇಕು. ಆಸ್ಪತ್ರೆ ಕಾರ್ಯಾರಂಭಕ್ಕೂ ಮುನ್ನ ವೈದ್ಯರು ಹಾಗೂ ಸಿಬ್ಬಂದಿ ನೇಮಕ ಪ್ರಕ್ರಿಯೆ ಚುರುಕುಗೊಳಿಸಲು ಉದ್ದೇಶಿಸಲಾಗಿದೆ.

2017–18ರಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಕರ್ನಾಟಕ ರಾಜ್ಯ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆ ಅಡಿಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆ ನಿರ್ಮಾಣಕ್ಕೆ ಒಟ್ಟು ₹11 ಕೋಟಿ ಅನುದಾನ ಮಂಜೂರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT