ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-–ತ್ಯಾಜ್ಯ ಪುನರ್ಬಳಕೆಗೆ ಚೀನಾ ಮಾದರಿ

ರಾಜ್ಯ ಮಾಲಿನ್ಯ ಮಂಡಳಿ ಮುಖ್ಯ ಪರಿಸರ ಅಧಿಕಾರಿ ಡಿ.ಆರ್‌.ಕುಮಾರಸ್ವಾಮಿ ಸಲಹೆ
Last Updated 2 ಏಪ್ರಿಲ್ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ ಇ–ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಪುನರ್‌ಬಳಕೆ ಮಾಡುತ್ತಿಲ್ಲ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಪರಿಸರ ಅಧಿಕಾರಿ ಡಿ.ಆರ್‌.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ‘ಆಲ್‌ ಇಂಡಿಯಾ ಇ–ವೇಸ್ಟ್‌ ರಿಸೈಕ್ಲರ್ಸ್‌ ಅಸೋಸಿಯೇಷನ್‌’ ಉದ್ಘಾಟಿಸಿ ಅವರು ಮಾತನಾಡಿದರು.

‘ಚೀನಾ, ಸಿಂಗಪುರದಲ್ಲಿ ಇ–ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಣೆ ಮಾಡಿ ಪುನರ್ಬಳಕೆ ಮಾಡಲಾಗುತ್ತಿದೆ. ಚೀನಾದಲ್ಲಿ ಇದನ್ನು ವಿಂಗಡಿಸುವ ಕಾರ್ಮಿಕರ ದಕ್ಷತೆಯೂ ಉತ್ತಮವಾಗಿದೆ. ಹಾಂಕಾಂಗ್‌ನಲ್ಲಿ ಕಾರ್ಮಿಕನೊಬ್ಬ ದಿನಕ್ಕೆ ಸರಾಸರಿ 800 ಕೆ.ಜಿ ತ್ಯಾಜ್ಯ ವಿಂಗಡಿಸುತ್ತಾನೆ. ಆದರೆ, ನಮ್ಮಲ್ಲಿ ಒಬ್ಬ ನೌಕರ ಸರಾಸರಿ 100 ಕೆ.ಜಿ ಮಾತ್ರ ವಿಂಗಡಿಸುತ್ತಾನೆ. ಚೀನಾ ಕಾರ್ಮಿಕರಂತೆ ನಮ್ಮ ಕಾರ್ಮಿಕರಲ್ಲೂ ಕಾರ್ಯದಕ್ಷತೆ ಹೆಚ್ಚಿಸಬೇಕಿದೆ’ ಎಂದರು.

ಎಲೆಕ್ಟ್ರಾನಿಕ್‌ ತ್ಯಾಜ್ಯಗಳಲ್ಲಿರುವ ಆರ್ಸೆನಿಕ್‌, ಕ್ಯಾಡ್ಮಿಯಂ, ಸೀಸದಂತಹ ಭಾರಲೋಹಗಳು ಜಲಮೂಲ ಮತ್ತು ಮಣ್ಣಿಗೆ ಸೇರಿ ಪರಿಸರ ಮಾಲಿನ್ಯಕ್ಕೆ ಕಾರ
ಣವಾಗುತ್ತಿವೆ. ಕಲುಷಿತ ನೀರಿನಿಂದ ಕಾಯಿಲೆಗಳೂ ಹರಡುತ್ತಿವೆ. ಹೆಚ್ಚುತ್ತಿರುವ ಇ–ತ್ಯಾಜ್ಯದಿಂದ ಪರಿಸರದ ಮೇಲೂ ತೀವ್ರ ಸ್ವರೂಪದ ಪರಿಣಾಮ ಉಂಟಾಗುತ್ತಿದೆ. ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ ಹಾಗೂ ಪುನರ್‌ಬಳಕೆ ಈಗ ಅನಿವಾರ್ಯ ಎಂದರು.

‘ತ್ಯಾಜ್ಯ ಮರುಬಳಕೆ ಘಟಕಗಳ ತಪಾಸಣೆ ನಡೆಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಇನ್ನು ಮೂರು ತಿಂಗಳಲ್ಲಿ ಎಲ್ಲ ಘಟಕಗಳಿಗೂ ದಿಢೀರ್‌ ಭೇಟಿ ನೀಡುತ್ತೇವೆ. ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಮತ್ತು ಇ–ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದ ಘಟಕಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಎಸ್‌.ಸುರೇಶ್‌ ತಿಳಿಸಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಎಂ.ಸಿ.ರಮೇಶ್‌, ‘ನಗರದಲ್ಲಿ ಅನಧಿಕೃತ ಘಟಕಗಳಿಗೆ ಇ–ತ್ಯಾಜ್ಯ ಸಾಗಿಸುವ ಬಗ್ಗೆ ದೂರುಗಳಿವೆ. ಪರವಾನಗಿದಾರರು ಈ ಬಗ್ಗೆ ಹದ್ದಿನ ಕಣ್ಣಿಡಬೇಕು. ವಾಟ್ಸ್‌ ಆ್ಯಪ್‌, ಇಮೇಲ್‌, ದೂರವಾಣಿ ಮೂಲಕ ಇಂತ ಚಟುವಟಿಕೆ ಬಗ್ಗೆ ನಮ್ಮ ಗಮನಕ್ಕೆ ತರಬಹುದು. ಖುದ್ದಾಗಿಯೂ ಮಂಡಳಿಗೆ ದೂರು ನೀಡಬಹುದು. ಅನಧಿಕೃತ ಘಟಕಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

ಅಸೋಸಿಯೇಷನ್‌ ಅಧ್ಯಕ್ಷ ಕಾಳೀರೇಗೌಡ, ‘ದೇಶದಲ್ಲಿ ಇ–ತ್ಯಾಜ್ಯ ಮರುಬಳಕೆಯ 180 ಘಟಕಗಳು ಮಾತ್ರ ಪರವಾನಗಿ ಹೊಂದಿವೆ. ಇಂತಹ 87 ಘಟಕಗಳು ಬೆಂಗಳೂರಿನಲ್ಲೇ ಇವೆ. ಮೇಕ್‌ ಇನ್‌ ಇಂಡಿಯಾ ಯೋಜನೆಯಿಂದಲೂ ಎಲೆಕ್ಟ್ರಾನಿಕ್‌ ವಸ್ತುಗಳ ಬಳಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ತ್ಯಾಜ್ಯ ನಿರ್ವಹಣೆಗೆ ಈಗ ಇನ್ನಷ್ಟು ಗಮನ ಹರಿಸಬೇಕಾಗಿದೆ. ಉತ್ಪಾದಕರು ಮತ್ತು ಬಳಕೆದಾರರಲ್ಲಿ ಈ ಬಗ್ಗೆ ಅರಿವು ಮೂಡಿಸಲಿದ್ದೇವೆ’ ಎಂದರು.
**
ಅಂಕಿ– ಅಂಶ
20 ಲಕ್ಷ ಟನ್‌

ದೇಶದಲ್ಲಿ ಪ್ರತಿ ವರ್ಷ ಉತ್ಪತ್ತಿಯಾಗುವ ಇ–ತ್ಯಾಜ್ಯ

1 ಲಕ್ಷ ಟನ್‌
ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಇ–ತ್ಯಾಜ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT