ಸೋಮವಾರ, ಡಿಸೆಂಬರ್ 9, 2019
17 °C

ಇದು ನಲಿ–ಕಲಿ ಚಿಣ್ಣರ ಉದ್ಯಾನ!

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ಉದ್ಯಾನ ಎಂದರೆ ಥಟ್ಟನೆ ನೆನಪಾಗುವುದು ಹಚ್ಚ ಹಸಿರಿನ ಹುಲ್ಲು ಹಾಸು. ಅದರ ಸುತ್ತಲಿರುವ ಪಾದಚಾರಿ ಮಾರ್ಗದಲ್ಲಿ ಜನ ವಾಯು ವಿಹಾರ ಮಾಡುತ್ತಿರುವುದು ಕಣ್ಮುಂದೆ ಬರುತ್ತದೆ. ಅಲ್ಲೊಂದು ಇಲ್ಲೊಂದು ಮಕ್ಕಳ ಆಟಿಕೆಗಳು. ಆದರೆ, ಇಲ್ಲಿನ ಮೃತ್ಯುಂಜಯ ನಗರದ ಉದ್ಯಾನ ಸಂಪೂರ್ಣ ಭಿನ್ನವಾಗಿದೆ.

ಮಕ್ಕಳು ಆಟವಾಡಿ ನಲಿಯುವುದರ ಜತೆಗೆ ಕಲಿಕೆಗೆ ಪೂರಕವಾಗುವ ನಿಟ್ಟಿನಲ್ಲಿ ಈ ಉದ್ಯಾನ ನಿರ್ಮಿಸಲಾಗಿದೆ. ವಿಮಾನದ ಮಾದರಿಯಲ್ಲಿ ಜಾರು ಬಂಡಿ ಮಾಡಲಾಗಿದ್ದು, ಅದು ಚಿಣ್ಣರನ್ನು ಅತಿಯಾಗಿ ಆಕರ್ಷಿಸುತ್ತಿದೆ.

ಜೋಕಾಲಿ, ಪ್ಲಾಸ್ಟಿಕ್‌ ಕುದುರೆ, ಒಂಟೆ, ಕುಂಟೆಬಿಲ್ಲೆ, ಸ್ನೇಕ್‌ ಅಂಡ್‌ ಲ್ಯಾಡರ್‌ ಆಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಯೋಧನ ಪ್ರಕೃತಿ ಮಾಡಿದ್ದು, ಅದರ ಜತೆಗೆ ಸೆಲ್ಫಿ ತೆಗೆದುಕೊಳ್ಳಬಹುದು. ಆಟಿಕೆಗಳ ಸುತ್ತ ಮೃದುವಾಗಿರುವ ಮರಳು ಹಾಕಲಾಗಿದೆ. ಮಕ್ಕಳು ಆಡವಾಡುವಾಗ ಬಿದ್ದು ಗಾಯ ಮಾಡಿಕೊಳ್ಳದಿರಲಿ ಎನ್ನುವುದು ಅದರ ಹಿಂದಿರುವ ಉದ್ದೇಶ.

ಉದ್ಯಾನದ ಕಾಂಪೌಂಡ್‌ ಗ್ರಿಲ್‌ಗಳ ಮೇಲೆ ಅ, ಆ, ಇ, ಈ,, ಎ, ಬಿ, ಸಿ, ಡಿ ಕನ್ನಡ ಹಾಗೂ ಇಂಗ್ಲಿಷ್‌ ವರ್ಣಮಾಲೆಗಳನ್ನು ಬಿಡಿಸಲಾಗಿದೆ. ಮಾನವನ ವಿಕಾಸ, ಮಿಕ್ಕಿ ಮೌಸ್‌, ಕುಸ್ತಿ, ಭರತನಾಟ್ಯ, ಕರಡಿ, ಚಿರತೆ, ಹುಲಿ, ಆನೆ, ಸಿಂಹ, ಸೇಬು, ಬಾಳೆಹಣ್ಣು, ಕಿತ್ತಳೆ ಸೇರಿದಂತೆ ವಿವಿಧ ಹಣ್ಣುಗಳು ಗಮನ ಸೆಳೆಯುತ್ತವೆ. ಸುತ್ತಲೂ ಎಲ್‌.ಇ.ಡಿ. ದೀಪಗಳನ್ನು ಅಳವಡಿಸಲಾಗಿದೆ. ಉದ್ಯಾನ ಮುಂಭಾಗದ ಗೋಡೆ ಮೇಲೆ, ಮಕ್ಕಳು ಪೋಷಕರ ಕೈ ಹಿಡಿದು ಹೆಜ್ಜೆ ಹಾಕುವ ಚಿತ್ರ ಇಳಿಸಲಾಗಿದೆ.

ಅಂದಹಾಗೆ ಇಷ್ಟೆಲ್ಲ ವಿಶೇಷತೆಗಳನ್ನು ಒಳಗೊಂಡಿರುವ ಈ ಉದ್ಯಾನವನ್ನು 99X60 ಅಡಿ ಜಾಗದಲ್ಲಿ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರದ ಅಮೃತ ಯೋಜನೆಯ ಅಡಿಯಲ್ಲಿ ₨50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಉದ್ಯಾನದಲ್ಲಿ ಬಹುತೇಕ ಕೆಲಸ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.

ಹೊಸ ಆಲೋಚನೆಯೊಂದಿಗೆ ಈ ಉದ್ಯಾನಕ್ಕೆ ಮೂರ್ತ ಸ್ವರೂಪ ಕೊಡಲು ಶ್ರಮಿಸಿದವರು ಸ್ಥಳೀಯ ವಾರ್ಡ್‌ ಸದಸ್ಯ ಚಂದ್ರಕಾಂತ ಕಾಮತ್‌. ಸ್ವತಃ ಅವರೇ ಬೆಂಗಳೂರಿಗೆ ಓಡಾಡಿ, ಕಾಂಪೌಂಡ್‌ ಗ್ರಿಲ್‌ಗಳನ್ನು ಮಾಡಿಸಿದ್ದಾರೆ.

‘ಮಕ್ಕಳು ಆಟದ ಜತೆ ಜತೆಗೆ ಜ್ಞಾನ ಸಂಪಾದಿಸಬೇಕು. ಹೊರಜಗತ್ತಿಗೆ ತೆರೆದುಕೊಳ್ಳಬೇಕು ಎಂಬ ಉದ್ದೇಶದಿಂದ ಹೊಸ ಪರಿಕಲ್ಪನೆಯೊಂದಿಗೆ ಉದ್ಯಾನ ನಿರ್ಮಿಸಲಾಗಿದೆ. ಬಾಲ್ಯದಲ್ಲಿ ಚಿಣ್ಣರು ಅನೇಕ ಪ್ರಶ್ನೆಗಳನ್ನು ಕೇಳುತ್ತ ಹಲವು ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ. ಅವರು ಉದ್ಯಾನದಲ್ಲಿ ಆಡುವಾಗ ಅವರ ಗಮನ ಕಾಂಪೌಂಡ್‌ ಕಡೆಗೆ ಹರಿದು, ಖಂಡಿತವಾಗಿಯೂ ಪ್ರತಿಯೊಂದರ ಬಗ್ಗೆ ಪೋಷಕರನ್ನು ಪ್ರಶ್ನಿಸಿ ಅರಿತುಕೊಳ್ಳುತ್ತಾರೆ’ ಎಂದು ವಿವರಿಸಿದರು.

‘ಈಗಾಗಲೇ ಉದ್ಯಾನಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಉದ್ಯಾನ ಎಂದು ಹೆಸರಿಡಲಾಗಿದೆ. ಇದರ ಸನಿಹದಲ್ಲೇ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಉದ್ಯಾನವೂ ಇದೆ. ಒಂದೇ ಬಡಾವಣೆಯಲ್ಲಿ ಇಬ್ಬರೂ ಮಹನೀಯರ ಉದ್ಯಾನ ಇರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)