ಮಂಗಳವಾರ, ನವೆಂಬರ್ 12, 2019
25 °C

‘ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ’

Published:
Updated:
Prajavani

ಹೊಸಪೇಟೆ: ’ಬರುವ 2020ರ ಜನವರಿ ಒಂದಕ್ಕೆ 18 ವರ್ಷ ವಯಸ್ಸು ತುಂಬಿದವರು ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಬಹುದು‘ ಎಂದು ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ತಿಳಿಸಿದರು.

ಗುರುವಾರ ನಗರದ ತಾಲ್ಲೂಕು ಕಚೇರಿಯಲ್ಲಿ ನಡೆದ ಮತದಾರರ ನೋಂದಣಿ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಬಿ.ಎಲ್‌.ಒ., ಕಾಲೇಜಿನ ಪ್ರಾಚಾರ್ಯರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಚುನಾವಣಾ ಆಯೋಗವು national voters system portal ಮಾಡಿದ್ದು, ಅದರ ಮೂಲಕ ಮತದಾರರು ನೇರವಾಗಿ ಹೆಸರು ಸೇರಿಸಬಹುದು. ಅಷ್ಟೇ ಅಲ್ಲ, ಹೆಸರು, ಜನ್ಮ ದಿನಾಂಕ, ವಿಳಾಸ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಅದರ ಪ್ರಯೋಜನ ಪಡೆದುಕೊಳ್ಳಬಹುದು‘ ಎಂದು ತಿಳಿಸಿದರು.

’ವೆಬ್‌ಸೈಟಿನಲ್ಲಿ ಅಗತ್ಯ ದಾಖಲೆಗಳೊಂದಿಗೆ ಹೆಸರು ಸೇರಿಸಲು ಅರ್ಜಿ ಹಾಕಿದರೆ, ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಪ್ರಕ್ರಿಯೆ ಸೆ. 1ರಿಂದಲೇ ಆರಂಭಗೊಂಡಿದೆ. ಈ ತಿಂಗಳ ಅಂತ್ಯದ ವರೆಗೆ ನಡೆಯಲಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕು‘ ಎಂದು ತಿಳಿಸಿದರು.

ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ಚುನಾವಣೆ ಸಿಬ್ಬಂದಿ ರಮೇಶ, ಪಂಪಾಪತಿ, ಸಿ.ಎಸ್‍.ಸಿ. ಜಿಲ್ಲಾ ವ್ಯವಸ್ಥಾಪಕ ಲಕ್ಷ್ಮಣ್ ರಾವ್, ಕಾಕುಬಾಳು ಸುರೇಶ್, ಜಗದೀಶ, ಮಂಜುನಾಥ, ಯು. ಭೀಮರಾಜ, ಇಮಾಮ್ ಕಾಸೀಂ ಇದ್ದರು.

 

ಪ್ರತಿಕ್ರಿಯಿಸಿ (+)