ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿಗಷ್ಟೇ ನಗರ ನಿವಾಸಿಗಳು!

ಹೊಸಪೇಟೆ ನಗರಸಭೆ ಎರಡನೇ ವಾರ್ಡ್‌ನ ಬಹುತೇಕ ಜನರಿಗಿಲ್ಲ ಪಟ್ಟಾ
Last Updated 18 ಜನವರಿ 2019, 13:48 IST
ಅಕ್ಷರ ಗಾತ್ರ

ಹೊಸಪೇಟೆ: ಇವರು ನಗರ ನಿವಾಸಿಗಳು. ಆದರೆ, ಇಲ್ಲಿ ವಾಸಿಸುತ್ತಿರುವ ಬಹುತೇಕ ಜನರ ಮನೆಗಳಿಗೆ ಪಟ್ಟಾ ಇಲ್ಲ. ಇಂದೋ, ನಾಳೆ ಒಕ್ಕಲೆಬ್ಬಿಸುತ್ತಾರೆ ಎಂಬ ಆತಂಕದಲ್ಲಿಯೇ ಜೀವನ ದೂಡುತ್ತಿದ್ದಾರೆ. ಹೀಗಾಗಿ ಇವರು ಹೆಸರಿಗಷ್ಟೇ ನಗರ ನಿವಾಸಿಗಳಾಗಿದ್ದಾರೆ!

ಇದು ನಗರಸಭೆ ಎರಡನೇ ವ್ಯಾಪ್ತಿಗೆ ಬರುವ 88–ಮುದ್ಲಾಪುರದ ಜನರ ಬವಣೆ. ನಗರದ ರೈಲು ನಿಲ್ದಾಣಕ್ಕೆ ಹೊಂದಿಕೊಂಡಂತೆ ಈ ಪ್ರದೇಶ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಜನ ಇಲ್ಲಿಗೆ ಬಂದು ನೆಲೆಸಿದ್ದಾರೆ. ಇಲ್ಲಿರುವ ಬಹುತೇಕ ಜನ ದಿನಗೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಗಣಿಗಾರಿಕೆ ಉತ್ತುಂಗ ಸ್ಥಿತಿಯಲ್ಲಿದ್ದಾಗ ಇಲ್ಲಿನವರಿಗೆ ಕೈತುಂಬ ಕೆಲಸ ಇತ್ತು. ಹಣವೂ ಓಡಾಡುತ್ತಿತ್ತು. ಈಗ ಅದೆಲ್ಲ ಬರೀ ಇತಿಹಾಸ. ಇಲ್ಲಿರುವ ಮನೆಗಳ ಪೈಕಿ ಕೆಲವು ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿದ್ದರೆ, ಮತ್ತೆ ಕೆಲವು ಖಾಸಗಿಯವರಿಗೆ ಸೇರಿದ ಪ್ರದೇಶದಲ್ಲಿವೆ. ಆದರೆ, ಯಾರಿಗೂ ಪಟ್ಟಾ ಸಿಕ್ಕಿಲ್ಲ. ಯಾವಾಗ ತಮ್ಮನ್ನು ಒಕ್ಕಲೆಬ್ಬಿಸುತ್ತಾರೆ ಎಂಬ ಅನಿಶ್ಚಿತತೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

‘60–70 ವರ್ಷಗಳಿಂದ ಕೆಲಸ ಮಾಡಿಕೊಂಡು ಇಲ್ಲೇ ವಾಸಿಸುತ್ತಿದ್ದೇವೆ. ಇದುವರೆಗೆ ಪಟ್ಟಾ ಸಿಕ್ಕಿಲ್ಲ. ಈ ಕುರಿತು ನಗರಸಭೆ ಸದಸ್ಯರಿಗೆ ತಿಳಿಸಿದರೆ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ರಾಮಲಿಂಗಪ್ಪ.

‘ಈಗಾಗಲೇ ಈ ಭಾಗದಲ್ಲಿ ವಾಸಿಸುತ್ತಿರುವವರಿಗೆ ಪಟ್ಟಾ ಕೊಡಬೇಕಿತ್ತು. ನಿವೇಶನ, ಮನೆ ಇಲ್ಲದವರು ಅನೇಕ ಮಂದಿ ಇದ್ದಾರೆ. ಅಂತಹವರಿಗೆ ನಿವೇಶನ ಕೊಡುವಂತೆ ಶಾಸಕರಿಗೆ ಕೇಳಿದರೆ, ’ನಾನು ನನ್ನ ಕೈಯಿಂದ ಖರೀದಿಸಿ ಕೊಡಲೇ’ ಎಂದು ಶಾಸಕರು ಉಡಾಫೆಯಾಗಿ ಹೇಳಿದ್ದಾರೆ’ ಎಂದು ರಾಜು ತಿಳಿಸಿದರು.

‘ಇಲ್ಲಿಂದ ಸ್ವಲ್ಪ ದೂರದಲ್ಲೇ ಶಾಸಕರು ಭವ್ಯ ಬಂಗಲೆ ಕಟ್ಟಿಸಿಕೊಳ್ಳುತ್ತಿದ್ದಾರೆ. ನೂರಾರು ಜನ ಬಡವರು ಸೂರಿಲ್ಲದೆ ಬದುಕುತ್ತಿದ್ದಾರೆ. ಅವರಿಗೆ ಎಲ್ಲ ಗೊತ್ತಿದ್ದರೂ ಮೌನವಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸುಳ್ಳು ಭರವಸೆಗಳನ್ನು ಕೊಟ್ಟು ಹೋಗುವುದಕ್ಕಷ್ಟೇ ಅವರು ಸೀಮಿತರಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಮಿಕ್ಕುಳಿದ ಪ್ರದೇಶ ಹಾಗೂ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಡುವೆ ಜೋಡಿ ರೈಲು ಮಾರ್ಗಗಳು ಹಾದು ಹೋಗಿವೆ. ನಿತ್ಯಸರಕು ಸಾಗಣೆ, ಪ್ರಯಾಣಿಕ ರೈಲುಗಳು ಮೇಲಿಂದ ಮೇಲೆ ಸಂಚರಿಸುತ್ತವೆ. ಪದೇ ಪದೇ ರೈಲ್ವೆ ಗೇಟ್‌ ಹಾಕಲಾಗುತ್ತದೆ. ಸ್ಥಳೀಯರು ದೈನಂದಿನ ಕೆಲಸ, ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಹೋಗಿ ಬರಲು ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ಜಮೀನನಲ್ಲಿ ಬೆಳೆದ ಉತ್ಪನ್ನಗಳನ್ನು ಬೇರೆಡೆ ಸಾಗಿಸಲು ತೊಂದರೆ ಅನುಭವಿಸುತ್ತಿದ್ದಾರೆ.

ತುರ್ತಾಗಿ ಏನಾದರೂ ಅಪಘಾತ ಸಂಭವಿಸಿದರೆ ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಹೆಣಗಾಡಬೇಕಾದ ಪರಿಸ್ಥಿತಿ ಇದೆ. ಮೇಲ್ಸೇತುವೆ ಅಥವಾ ಅಂಡರ್‌ಪಾಸ್‌ ನಿರ್ಮಿಸಬೇಕೆಂದು ಅನೇಕ ವರ್ಷಗಳಿಂದ ಸ್ಥಳೀಯರು ಹೋರಾಟ ನಡೆಸುತ್ತಿದ್ದಾರೆ. ಆದರೆ, ಅದಕ್ಕೆ ರೈಲ್ವೆ ಇಲಾಖೆಯಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಕಿವಿಗೊಟ್ಟಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರೌಢಶಾಲೆ ಇಲ್ಲ. ಕೂಲಿ ಕೆಲಸಕ್ಕೆ ಜನ ಬೇರೆಡೆ ಹೋಗುತ್ತಾರೆ. ಆದರೆ, ಪದೇ ಪದೇ ಗೇಟ್‌ ಹಾಕುವುದರಿಂದ ಕಿರಿಕಿರಿ ಆಗುತ್ತದೆ. ಬಡಾವಣೆಗೆ ಇದೊಂದೆ ರಸ್ತೆ ಇರುವುದರಿಂದ ಸಮಸ್ಯೆ ಬಗೆಹರಿಸಬೇಕೆಂದು ಅನೇಕ ಸಲ ಚಳವಳಿ ನಡೆಸಿದ್ದೇವೆ. ಆದರೆ, ಯಾರೂ ತಲೆಗೆ ಹಾಕಿಕೊಂಡಿಲ್ಲ’ ಎಂದು ಸ್ಥಳೀಯ ನಿವಾಸಿ ವೆಂಕಣ್ಣಶೆಟ್ಟಿ ತಿಳಿಸಿದರು.

ಈ ವಾರ್ಡ್‌ ವ್ಯಾಪ್ತಿಗೆ ಬರುವ ರಾಜಾಜಿನಗರದಲ್ಲಿ ಹೊರವರ್ತುಲ ರಸ್ತೆ ನಿರ್ಮಿಸಿರುವುದರಿಂದ ಅವರಿಗೆ ಬೇರೆಡೆ ಸೂರು ಕಲ್ಪಿಸಲಾಗಿದೆ. ಇನ್ನು ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಮುಚ್ಚಿರುವುದರಿಂದ ಆ ಭಾಗದಲ್ಲಿ ವ್ಯಾಪಾರವಿಲ್ಲದೆ ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT