ಕೋಮುವಾದಿಗಳಿಂದ ಬಹುತ್ವ ಭಾರತ ರಕ್ಷಿಸಿ: ಎಸ್‌.ಜಿ. ಸಿದ್ದರಾಮಯ್ಯ

ಶುಕ್ರವಾರ, ಮೇ 24, 2019
29 °C

ಕೋಮುವಾದಿಗಳಿಂದ ಬಹುತ್ವ ಭಾರತ ರಕ್ಷಿಸಿ: ಎಸ್‌.ಜಿ. ಸಿದ್ದರಾಮಯ್ಯ

Published:
Updated:

ಹೊಸಪೇಟೆ: ‘ಬಹುತ್ವದ ಭಾರತ ಗಂಡಾಂತರದಲ್ಲಿದೆ. ಕೋಮುವಾದಿಗಳನ್ನು ಅಧಿಕಾರದಿಂದ ಕೆಳಗಿಳಿಸಿ ಅದನ್ನು ರಕ್ಷಿಸುವ ದೊಡ್ಡ ಹೊಣೆಗಾರಿಕೆ ಎಲ್ಲ ನಾಗರಿಕರ ಮೇಲಿದೆ’ ಎಂದು ಪ್ರಗತಿಪರ ವೇದಿಕೆಯ ಎಸ್‌.ಜಿ. ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ಸಂಜೆ ಇಲ್ಲಿ ‘ಮುಖ್ಯಮಂತ್ರಿ’ ಚಂದ್ರು, ವಸುಂಧರಾ ಭೂಪತಿ ಹಾಗೂ ಬಿ.ಟಿ. ಲಲಿತಾ ನಾಯಕ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಬಹುಧರ್ಮ, ಬಹು ಸಂಸ್ಕೃತಿ, ಬಹು ಪರಂಪರೆಯ ದೇಶ ನಮ್ಮದು. ಆದರೆ, ಅದನ್ನು ಹಾಳುಗೆಡವಿ ಏಕಸಂಸ್ಕೃತಿ ಹೇರುವ ಹುನ್ನಾರ ನಡೆಸಲಾಗುತ್ತಿದೆ. ಅದರಲ್ಲೂ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ ನಂತರ ಸಾಂವಿಧಾನಿಕ ಸಂಸ್ಥೆಗಳು, ಬಹುತ್ವವನ್ನು ಹಾಳು ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಹಿಂದೆ ಬಿಜೆಪಿಯ ಅಟಲ್‌ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾಗಿದ್ದರು. ಆದರೆ, ದ್ವೇಷದ ಕಿಚ್ಚು ಹೊತ್ತಿಸುವ ಮಾತುಗಳನ್ನು ಅವರು ಆಡಿರಲಿಲ್ಲ. ಮೋದಿಯವರು ಅದಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಇಡೀ ದೇಶದಾದ್ಯಂತ ಮೋದಿಯವರ ಹೆಸರಿನಲ್ಲಿ ಮತ ಯಾಚಿಸಲಾಗುತ್ತಿದೆ. ಅದು ಪ್ರಜಾತಂತ್ರಕ್ಕೆ ಮಾರಕ. ಸ್ಥಳೀಯ ವಿಷಯಗಳು, ಸ್ಥಳೀಯ ಅಭ್ಯರ್ಥಿಗಳ ಹೆಸರಿನಲ್ಲಿ ಮತ ಕೇಳಬೇಕು. ಇಲ್ಲದಿದ್ದರೆ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಈಗಾಗಲೇ ಮೋದಿಯವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಪುನಃ ಅಧಿಕಾರಕ್ಕೆ ಬಂದರೆ ಸಂವಿಧಾನ, ಪ್ರಜಾಪ್ರಭುತ್ವವನ್ನು ನಾಶಗೊಳಿಸುತ್ತಾರೆ’ ಎಂದರು.

‘ಈ ಚುನಾವಣೆಯಲ್ಲಿ ಅನೇಕ ಹಸಿ ಸುಳ್ಳುಗಳನ್ನು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿವೆ. ಆದರೆ, ಅವುಗಳು ಏನೂ ಮಾಡಿಲ್ಲ. ಎಲ್ಲವೂ ನನ್ನ ಕಾಲದಲ್ಲೇ ಆಗಿವೆ ಎಂದು ಮೋದಿ ಹೇಳುತ್ತಿದ್ದಾರೆ. ಉಗ್ರಪ್ಪನವರು ಒಳ್ಳೆಯ ಸಂಸದೀಯ ಪಟು. ಅಂತಹವರು ಗೆದ್ದರೆ ರಾಜ್ಯದ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಬಹುದು. ಹಾಗಾಗಿ ಜನ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಮೌಲ್ಯಗಳ ಜತೆ ಜತೆಗೆ ಯಾವ ಪಕ್ಷವನ್ನು ಬೆಂಬಲಿಸಿದರೆ ಭಾರತವನ್ನು ಕೋಮುವಾದಿಗಳಿಂದ ರಕ್ಷಿಸಬಹುದು ಎಂಬುದು ನಮ್ಮ ನಿಲುವು ಸ್ಪಷ್ಟ. ಹೀಗಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಿದ್ದೇವೆ. ಪ್ರಗತಿಪರ ಚಿಂತನೆ ಹೊಂದಿರುವ ಪ್ರಕಾಶ್‌ ರಾಜ್‌, ಸಿ.ಎಸ್‌. ದ್ವಾರಕಾನಾಥ್‌ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮನವಿ ಮಾಡಿಕೊಂಡಿದ್ದೆವು. ಆದರೆ, ಅವರು ಮಾತು ಕೇಳಲಿಲ್ಲ. ಮತ ವಿಭಜನೆಯಾದರೆ ಕೋಮುವಾದಿಗಳು ಆಯ್ಕೆಯಾಗಲು ಸುಲಭವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ವಸುಂಧರಾ ಭೂಪತಿ, ‘ಮೋದಿಯವರ ನೋಟು ರದ್ದತಿಯ ನಿರ್ಧಾರದಿಂದ ದೇಶದಾದ್ಯಂತ 50 ಲಕ್ಷ ಉದ್ಯೋಗ ಕಳೆದುಕೊಂಡಿದ್ದಾರೆ. ಹೆಣ್ಣು ಭ್ರೂಣ ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಗುಂಪು ದಾಳಿಗಳು ಹೆಚ್ಚಾಗಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮೋದಿ ಪುನಃ ಅಧಿಕಾರಕ್ಕೆ ಬರದಂತೆ ತಡೆಯಬೇಕಿದೆ’ ಎಂದರು.

ಮುಖ್ಯಮಂತ್ರಿ ಚಂದ್ರು ಮಾತನಾಡಿ, ‘ಐದು ವರ್ಷಗಳಲ್ಲಿ ಮೋದಿಯವರು 19 ದಿನಗಳಷ್ಟೇ ಸಂಸತ್ತಿಗೆ ಹಾಜರಾಗಿದ್ದಾರೆ. 19 ಹಳೆಯ ಯೋಜನೆಗಳಿಗೆ ಹೊಸ ಹೆಸರು ಕೊಟ್ಟು ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !