ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲ ಕುಲವೆಂದು ಬಡಿದಾಡದಿರಿ: ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಹೇಳಿಕೆ

ಗುಳೇದಗುಡ್ಡ ಗುರುಸಿದ್ದೇಶ್ವರ ಬೃಹನ್ಮಠದ ಸ್ವಾಮೀಜಿ
Last Updated 26 ಆಗಸ್ಟ್ 2019, 6:45 IST
ಅಕ್ಷರ ಗಾತ್ರ

ಹೊಸಪೇಟೆ: ‘ನೇಕಾರರು ಒಳಪಂಗಡ, ಕುಲ ಕುಲವೆಂದು ಬಡಿದಾಡಿಕೊಳ್ಳದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ, ಒಗ್ಗಟ್ಟಾಗಿ ಸಮುದಾಯದ ಏಳಿಗೆಗೆ ಶ್ರಮಿಸಬೇಕು’ ಎಂದು ಗುಳೇದಗುಡ್ಡದ ಗುರುಸಿದ್ದೇಶ್ವರ ಬೃಹನ್ಮಠದ ಪೀಠಾಧಿಪತಿ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಸಾಲಿ ನೇಕಾರ ಸಮುದಾಯದ ಕ್ಷೇಮಾಭಿವೃದ್ಧಿ ತಾಲ್ಲೂಕು ಸಂಘ, ಯುವಕರು ಮತ್ತು ಮಹಿಳಾ ಸಂಘ, ಅಖಿಲ ಕರ್ನಾಟಕ ಪಟ್ಟಸಾಲಿ ನೇಕಾರರ ಸಂಘದ ಸಹಭಾಗಿತ್ವದಲ್ಲಿ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪಟ್ಟಸಾಲಿ ನೇಕಾರರ ಜಾಗೃತಿ ಸಮಾವೇಶ, ನೂತನ ಸಂಘಗಳ ನಾಮಫಲಕ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸ್ವಾರ್ಥ ದೂರವಾದರೆ ಸಂಘಟನೆ ಬಲಗೊಳ್ಳಲು ಸಾಧ್ಯ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣದ ಮಹತ್ವದ ಮನಗಾಣಬೇಕು. ಜತೆಗೆ ಗುಣಮಟ್ಟದ, ಉತ್ತಮ ಶಿಕ್ಷಣ ಕೊಡಿಸಲು ಶ್ರಮಿಸಬೇಕು. ಹೀಗೆ ಮಾಡಿದರೆ ಸಮಾಜ ಬೆಳೆಯಲು ಸಾಧ್ಯ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ, ‘ನೇಕಾರರಲ್ಲಿ ಒಟ್ಟು 29 ಒಳಪಂಗಡಗಳಿವೆ. ಎಲ್ಲ ಒಳಪಂಗಡಗಳು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿವೆ. ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಹಾಗೂ ಹೆಚ್ಚಿನ ಶಿಕ್ಷಣ ಕೊಡಿಸಲು ಒತ್ತು ಕೊಡಬೇಕು. ಶಿಕ್ಷಣದಿಂದ ಸಮಗ್ರ ಪ್ರಗತಿ ಸಾಧ್ಯ’ ಎಂದು ತಿಳಿಸಿದರು.

‘ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಆಗಿರುವುದರಿಂದ ನೇಕಾರಿಕೆ ವೃತ್ತಿಗೆ ದೊಡ್ಡ ಹೊಡೆತ ಬಿದ್ದಿದೆ. ನೇಕಾರರು ಕುಟುಂಬ ನಡೆಸಲಾಗದಂತಹ ಸ್ಥಿತಿಯಲ್ಲಿದ್ದಾರೆ. ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳ ಪ್ರಯೋಜನ ಪಡೆದು ಆರ್ಥಿಕರಾಗಿ ಸಬಲರಾಗಬೇಕು. ಹೊಸ ತಂತ್ರಜ್ಞಾನದೊಂದಿಗೆ ನೇಕಾರಿಗೆ ಮಾಡಬೇಕು’ ಎಂದು ಸಲಹೆ ಮಾಡಿದರು.

ನೇಕಾರರ ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ ನಾಲತ್ವಾಡ, ‘ನೇಕಾರರು ಬಹಳ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಅವರ ನೋವಿಗೆ ಸ್ಪಂದಿಸಿ ಅವರ ನೆರವಿಗೆ ಬರಬೇಕು’ ಎಂದು ಆಗ್ರಹಿಸಿದರು.

ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಕೆ. ಚಂದ್ರಶೇಖರ್‌, ಕೊಪ್ಪಳದ ಡಿ.ಆರ್‌.ಎಫ್‌.ಒ. ಕಾನಹೊಸಹಳ್ಳಿ ಕೆ.ಎನ್‌. ಮಧುಸೂದನ್‌, ಸಂಡೂರು ಡಿ.ಆರ್‌.ಎಫ್‌.ಒ. ಎನ್‌.ಟಿ. ಪ್ರಕಾಶ, ನಿವೃತ್ತ ಎ.ಸಿ.ಎಫ್‌. ಎನ್‌.ಸಿ. ಬಸಣ್ಣ, ಮುನಿರಾಬಾದ್‌ನ ಏಳುಕೋಟೆಪ್ಪ, ಹಿರೇಬಗನಾಳ್‌ ಸೋಮಣ್ಣ ಅವರಿಗೆ ಸತ್ಕರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ಮಹಾಲಕ್ಷ್ಮಿ, ಎನ್‌. ಪೂಜಾ, ಎಲ್‌.ಎಸ್‌. ಲಕ್ಷ್ಮಿ, ಎನ್‌. ವೀಣಾ, ಎನ್‌.ಟಿ. ನವ್ಯಾ, ಸೃಷ್ಟಿ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಉಪಾಧ್ಯಕ್ಷ ಎನ್‌. ಆಂಜನೇಯ, ಪಟ್ಟಸಾಲಿ ನೇಕಾರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌. ತಿಪ್ಪೇಸ್ವಾಮಿ, ರಾಜ್ಯ ಉಪಾಧ್ಯಕ್ಷ ಕಾನಹೊಸಹಳ್ಳಿ ಕೆ.ಎನ್‌. ಭೀಮಣ್ಣ, ಕಾರ್ಯಾಧ್ಯಕ್ಷ ಚಂದ್ರಕಾಂತ್‌ ಶೇಖಾ, ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ದೇವಾನಂದ, ಮುಖಂಡರಾದ ಎನ್‌. ತಿಪ್ಪೇಸ್ವಾಮಿ, ಎನ್‌. ರವಿ, ಎನ್‌.ಟಿ. ಸುಧಾರಾಣಿ, ಚಿದಾನಂದಪ್ಪ, ಚಂದ್ರಕಾಂತ ಕಾಮತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT