ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡ ರಕ್ಷಿಸಲು ಸ್ಮಶಾನದ ಬಿದಿರು; ವಿಶಿಷ್ಟ ಕೆಲಸ ಮಾಡುತ್ತಿರುವ ಸರ್ಕಾರಿ ಶಾಲೆ

ಸೌಕರ್ಯಗಳ ಕೊರತೆ ನಡುವೆಯೂ ಗುತ್ತಿಗನೂರು ಶಾಲೆ ವೈಶಿಷ್ಟ್ಯ
Last Updated 9 ನವೆಂಬರ್ 2018, 13:54 IST
ಅಕ್ಷರ ಗಾತ್ರ

ಕುರುಗೋಡು: ಸ್ಮಶಾನದಲ್ಲಿ ಬಿದ್ದಿರುವ ವಸ್ತುಗಳನ್ನು ಮುಟ್ಟಿಸಿಕೊಳ್ಳಲು ಜನ ಹಿಂಜರಿಯುತ್ತಾರೆ. ಆದರೆ, ತಾಲ್ಲೂಕಿನ ಗುತ್ತಿಗನೂರು ಶಾಲೆಯ ಶಿಕ್ಷಕರು ಶವ ಸಾಗಿಸಲು ಉಪಯೋಗಿಸುವ ಬಿದಿರು ಹಾಗೂ ಬಂಬುಗಳನ್ನು ತಂದು, ಗಿಡಗಳನ್ನು ರಕ್ಷಿಸುವ ಅಪರೂಪದ ಕೆಲಸ ಮಾಡಿದ್ದಾರೆ.

ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಆರ್. ಲಿಂಗರಾಜ್, ಭಾಷಾ ಶಿಕ್ಷಕ ಜಗದೀಶ್‌ ಹಾಗೂ ವಿಜ್ಞಾನ ಶಿಕ್ಷಕ ಜಿ.ಎಂ. ಸ್ವಾಮಿ ಅವರ ಪರಿಶ್ರಮದಿಂದ ಇದು ಸಾಧ್ಯವಾಗಿದೆ.

ಶಾಲೆಯ ಆವರಣದಲ್ಲಿ 548 ಜಾತಿಯ ಗಿಡಗಳನ್ನು ನೆಡಲಾಗಿತ್ತು. ಅವುಗಳನ್ನು ಹೇಗಪ್ಪ ರಕ್ಷಿಸಬೇಕು ಎಂದು ಈ ಮೂವರಿಗೆ ಕಾಡುತ್ತಿತ್ತು. ಆಗ ಹೊಳೆದದ್ದೇ ಶವ ಸಾಗಿಸಲು ಉಪಯೋಗಿಸುವ ಬಿದಿರು ಹಾಗೂ ಬಂಬುಗಳು. ಸ್ಮಶಾನದಲ್ಲಿ ವ್ಯರ್ಥವಾಗಿ ಬಿದ್ದದ್ದನ್ನು ಕಂಡ ಅವರು, ಶಾಲೆಗೆ ತಂದು ಗಿಡಗಳಿಗೆ ಸುತ್ತುವರಿದು ಕಟ್ಟಿದರು. ಅವುಗಳಿಗೆ ನಿತ್ಯ ನೀರುಣಿಸಿ ಜತನ ಮಾಡಿರುವುದರಿಂದ ಬೆಳೆದು ದೊಡ್ಡದಾಗಿವೆ.

4.50 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಶಾಲಾ ಆವರಣದ ಒಂದು ಬದಿಯಲ್ಲಷ್ಟೇ ಕಾಂಪೌಂಡ್ ಇದೆ. ಉಳಿದ ಮೂರು ಕಡೆಗಳಲ್ಲಿ ಯಾವುದೇ ರಕ್ಷಣೆ ಇಲ್ಲ. ಆವರಣದಲ್ಲಿ ಎರಡು ಕೊಳವೆಬಾವಿ ಕೊರೆಸಿದರೂ ನೀರು ದೊರೆತಿಲ್ಲ. ಗ್ರಾಮಸ್ಥರ ಸಹಕಾರದಿಂದ ಎರಡು ಕಿ.ಮೀ. ದೂರದಿಂದ ಶಾಲೆಯ ವರೆಗೆ ಪೈಪ್ ಲೈನ್ ಮಾಡಲಾಗಿದೆ. ಶಾಲೆಯಲ್ಲಿ ತರಗತಿಗಳು ಬಿಟ್ಟ ನಂತರ ಶಿಕ್ಷಕರು ಗಿಡಗಳಿಗೆ ನೀರುಣಿಸುತ್ತಾರೆ. ಬೇಸಿಗೆ ರಜಾ ದಿನಗಳಲ್ಲಿ ಕೂಲಿಯೊಬ್ಬರನ್ನು ನೇಮಿಸಿ, ಗಿಡಗಳು ಬೆಳೆಯುವಂತೆ ನೋಡಿಕೊಂಡಿದ್ದಾರೆ.

85 ಗಂಡು, 99 ಹೆಣ್ಣು ಸೇರಿ ಒಟ್ಟು 184 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಸೇರಿ ಹತ್ತು ಜನ ಶಿಕ್ಷಕರಿದ್ದಾರೆ. ಗುಣಮಟ್ಟದ ಶಿಕ್ಷಣದ ಜತೆಗೆ ಪರಿಸರ ಕಾಳಜಿಗೂ ಇಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ಶಾಲೆಯ ವಿದ್ಯಾರ್ಥಿಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಯೂ ಸಾಧನೆ ಮಾಡಿ ಹೆಸರು ಗಳಿಸಿದ್ದಾರೆ.

ಪ್ರಸಕ್ತ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಪ್ರೌಢಶಾಲೆ ಮಕ್ಕಳ ಕ್ರೀಡಾಕೂಟದ ಬಾಲಕರ ವಿಭಾಗದ ಕಬಡ್ಡಿ ಪಂದ್ಯಾವಳಿಯಲ್ಲಿ ಕಲಬುರ್ಗಿ ವಿಭಾಗ ಮಟ್ಟದ ಅಂತಿಮ ಪಂದ್ಯದ ವರೆಗೆ ತಲುಪಿ ದ್ವಿತೀಯ ಬಹುಮಾನ ಗಿಟ್ಟಿಸಿದ್ದಾರೆ.
ಎಲ್ಲ ವಿಷಯಗಳ ಶಿಕ್ಷಕರು ಅನುಭವಿಗಳು ಇರುವುದರಿಂದ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಅದರಲ್ಲೂ ವಿಜ್ಞಾನ ಶಿಕ್ಷಕ ಜಿ.ಎಂ. ಸ್ವಾಮಿಯವರ ಪರಿಣಾಮಕಾರಿ ಬೋಧನೆಯಿಂದ ಪ್ರತಿವರ್ಷ ವಿಜ್ಞಾನ ವಿಷಯದಲ್ಲಿ ಎಲ್ಲ ಮಕ್ಕಳು ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾಗುತ್ತಿದ್ದಾರೆ. ಹಿಂದಿನ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಶಾಲೆ ತಾಲ್ಲೂಕಿಗೆ ಎರಡನೇ ಸ್ಥಾನ ಪಡೆದಿತ್ತು.

ಗ್ರಾಮದಿಂದ ಮೂರು ಕಿ.ಮೀ. ದೂರದಲ್ಲಿರುವ ಶಾಲೆಗೆ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಶಿಕ್ಷಕರ ಸಹಕಾರ ಮತ್ತು ಆಸಕ್ತಿಯಿಂದ ಸಮಸ್ಯೆಗಳಲ್ಲಿಯೂ ವಿಶೇಷ ಸಾಧನೆ ಮಾಡುತ್ತಿದೆ.

‘ಸೌಕರ್ಯಗಳ ಕೊರತೆ ನಡುವೆ ಶಿಕ್ಷಕರು ಪರಿಣಾಮಕಾರಿಯಾಗಿ ಪಾಠ ಮಾಡುತ್ತಿದ್ದಾರೆ. ಪರಿಸರದ ಬಗ್ಗೆ ಕಾಳಜಿ ತೋರಿಸುತ್ತಿದ್ದಾರೆ. ಶಾಲೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿದರೆ ಇನ್ನೂ ಉತ್ತಮ ಸಾಧನೆ ಮಾಡಬಹುದು’ ಎನ್ನುತ್ತಾರೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶೇಖಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT