ಹಂಪಿ ರಾಣಿ ಸ್ನಾನಗೃಹಕ್ಕೆ ಹೊಸ ಮೆರಗು

ಬುಧವಾರ, ಏಪ್ರಿಲ್ 24, 2019
31 °C
ಪ್ರೇಮ ನಿವೇದನೆಯ ಬರಹದ ಕೆತ್ತನೆಯಿಂದ ಕಳೆಗುಂದಿದ್ದ ವಿಜಯನಗರ ಕಾಲದ ಸ್ಮಾರಕ

ಹಂಪಿ ರಾಣಿ ಸ್ನಾನಗೃಹಕ್ಕೆ ಹೊಸ ಮೆರಗು

Published:
Updated:
Prajavani

ಹೊಸಪೇಟೆ: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎ.ಎಸ್‌.ಐ.) ಹಂಪಿಯ ರಾಣಿ ಸ್ನಾನಗೃಹಕ್ಕೆ ಹೊಸ ಮೆರಗು ನೀಡುತ್ತಿದೆ.

ಅದರ ಗತವೈಭವವನ್ನು ಹೊಸ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಅದರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ.

ಅನೇಕ ವರ್ಷಗಳ ಹಿಂದೆ ಪ್ರವಾಸಿಗರು ಸ್ಮಾರಕದ ಒಳಭಾಗದಲ್ಲಿ ಪ್ರೇಮ ನಿವೇದನೆಯ ಬರಹವನ್ನು ಕೆತ್ತಿದ್ದರು. ಕೆಲವರು ಪ್ರಿಯತಮ–ಪ್ರಿಯತಮೆಯ ಹೆಸರು ಕೆತ್ತಿದ್ದರು. ಇದರಿಂದ ಇಡೀ ಸ್ಮಾರಕ ವಿರೂಪಗೊಂಡು, ಕಳೆಗುಂದಿತ್ತು. ಪ್ರವಾಸಿಗರು ಸ್ಮಾರಕವನ್ನು ವೀಕ್ಷಿಸುವಾಗ ಆ ಕೆತ್ತನೆ ಎಲ್ಲರ ಕಣ್ಣಿಗೆ ರಾಚುತ್ತಿತ್ತು. ಸ್ಮಾರಕದ ಸಂರಕ್ಷಣೆ ಕುರಿತು ಅನೇಕ ಜನ ಪ್ರವಾಸಿಗರು, ಇತಿಹಾಸಕಾರರು ಆಕ್ಷೇಪ ವ್ಯಕ್ತಪಡಿಸಿದ್ದರು.

ಅದರಿಂದ ಎಚ್ಚೆತ್ತುಕೊಂಡಿರುವ ಎ.ಎಸ್‌.ಐ. ಈಗ ಅದರ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡಿದೆ. ಮೂಲ ಸ್ಮಾರಕಕ್ಕೆ ಕುಂದುಂಟಾಗದಂತೆ ಎಚ್ಚರ ವಹಿಸಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಗಾರೆ, ಸುಣ್ಣ ಉಪಯೋಗಿಸಿಕೊಂಡು ಪ್ಲಾಸ್ಟರ್‌ ಮಾಡಲಾಗುತ್ತಿದೆ. ಈ ಕೆಲಸದಲ್ಲಿ ಎ.ಎಸ್‌.ಐ.ನ ನುರಿತ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಭರದಿಂದ ಕೆಲಸ ನಡೆಯುತ್ತಿದ್ದು, ಇಷ್ಟರಲ್ಲೇ ಪೂರ್ಣಗೊಳ್ಳುವ ಸಾಧ್ಯತೆ ಇದೆ.  

ಕಮಲಾಪುರದಿಂದ ಹಂಪಿಗೆ ಪ್ರವೇಶಿಸುವ ಮಾರ್ಗದಲ್ಲಿ ಎಲ್ಲರ ಕಣ್ಣಿಗೆ ಮೊದಲು ಬೀಳುವ ಸ್ಮಾರಕವೇ ರಾಣಿ ಸ್ನಾನಗೃಹ. ಹೊರಗಿನಿಂದ ನೋಡಿದರೆ ಇಡೀ ಸ್ಮಾರಕ ಚೌಕಾಕಾರದ ರೂಪದಲ್ಲಿ ಗೋಚರಿಸಿದರೆ, ಒಳಭಾಗ ಸುಂದರವಾದ ಕಮಾನುಗಳಿಂದ ಗಮನ ಸೆಳೆಯುತ್ತದೆ. ಮಧ್ಯದಲ್ಲಿ ನೀರಿನ ಕೊಳವಿದ್ದು, ಅದರಲ್ಲಿಯೇ ವಿಜಯನಗರ ಕಾಲದ ರಾಣಿಯರು ಸ್ನಾನ ಮಾಡುತ್ತಿದ್ದರು. ಅಷ್ಟೇ ಅಲ್ಲ, ಕೊಳಕ್ಕೆ ಐತಿಹಾಸಿಕ ಕಮಲಾಪುರ ಕೆರೆಯಿಂದ ನೇರ ನೀರಿನ ಸಂಪರ್ಕ ಕಲ್ಪಿಸಲಾಗಿತ್ತು ಎನ್ನುತ್ತಾರೆ ಇತಿಹಾಸ ತಜ್ಞರು.

‘ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡಿರುವ ರಾಣಿ ಸ್ನಾನಗೃಹದ ಒಂದು ಭಾಗ ಕುಸಿದಿತ್ತು. ಅಷ್ಟೇ ಅಲ್ಲ, ಅನೇಕ ವರ್ಷಗಳ ಹಿಂದೆ ಕೆಲ ಪ್ರವಾಸಿಗರು ಮನಬಂದಂತೆ ಬರಹಗಳನ್ನು ಕೆತ್ತನೆ ಮಾಡಿ ವಿರೂಪಗೊಳಿಸಿದ್ದರು. ಹೀಗಾಗಿ ಅದನ್ನು ಜೀರ್ಣೋದ್ಧಾರಗೊಳಿಸಲಾಗುತ್ತಿದೆ. ಕೆಲಸ ಪೂರ್ಣಗೊಂಡ ನಂತರ ಮೊದಲಿನಂತೆ ಕಂಗೊಳಿಸಲಿದೆ’ ಎಂದು ಎ.ಎಸ್‌.ಐ. ಸಹಾಯಕ ಎಂಜಿನಿಯರ್‌ ಸೋಮ್ಲಾ ನಾಯ್ಕ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಣಿ ಸ್ನಾನಗೃಹವು ರಾಜರ ಖಾಸಾ ಜಾಗದಿಂದ ಸ್ವಲ್ಪವೇ ದೂರದಲ್ಲಿದೆ. ವಿಜಯನಗರ ಅರಸರ ಕಾಲದಲ್ಲಿ ಅದಕ್ಕೆ ಎಷ್ಟೊಂದು ಮಹತ್ವ ಇತ್ತು ಎಂಬುದನ್ನು ಇದರಿಂದಲೇ ಅರಿಯಬಹುದು. ವರ್ಷವಿಡೀ ಪ್ರವಾಸಿಗರು ಈ ಸ್ಮಾರಕಕ್ಕೆ ಭೇಟಿ ಕೊಡುತ್ತಾರೆ. ಅದರ ಜೀರ್ಣೋದ್ಧಾರ ಮಾಡುವ ತುರ್ತು ಇತ್ತು’ ಎಂದು ಮಾಹಿತಿ ನೀಡಿದರು.

ಕೆಲ ತಿಂಗಳ ಹಿಂದೆಯಷ್ಟೇ ರಾಣಿಸ್ನಾನಗೃಹ ಎದುರಿನ ಪರಿಸರವನ್ನು ಎ.ಎಸ್‌.ಐ. ಅಭಿವೃದ್ಧಿ ಪಡಿಸಿತ್ತು. ಪ್ರವಾಸಿಗರು ಕುಳಿತುಕೊಂಡು ಆಹಾರ ಸೇವಿಸಲು ಕಲ್ಲಿನ ಆಸನಗಳ ವ್ಯವಸ್ಥೆ, ನೂರಾರು ವರ್ಷ ಹಳೆಯ ಮರದ ಸುತ್ತಲೂ ಕಟ್ಟೆ ನಿರ್ಮಿಸಿತ್ತು. ಈಗ ಶುದ್ಧ ಕುಡಿಯುವ ನೀರಿನ ಘಟಕ ಕೂಡ ನಿರ್ಮಿಸಲಾಗುತ್ತಿದೆ. ರಾಣಿ ಸ್ನಾನಗೃಹದ ಬಳಿ ಕೋತಿಗಳ ಕಾಟ ಇಲ್ಲದ ಕಾರಣ ಪ್ರವಾಸಿಗರು ಈ ಪ್ರದೇಶದಲ್ಲಿ ಆಹಾರ ಸೇವಿಸಿ, ಹಂಪಿಯ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಲು ಪಯಣ ಬೆಳೆಸುತ್ತಾರೆ. ಹೀಗಾಗಿ ಹಂಪಿಗೆ ಬರುವ ಹೆಚ್ಚಿನವರು ಇಲ್ಲಿ ಕೆಲಕಾಲ ಕಳೆದು ಹೋಗುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !