ಗುರುವಾರ , ನವೆಂಬರ್ 21, 2019
20 °C
ಹಳೆ ಕಟ್ಟಡಗಳ ವಿಷಯ ಇನ್ನಷ್ಟೇ ಹೈಕೋರ್ಟ್‌ನಲ್ಲಿ ಇತ್ಯರ್ಥವಾಗಬೇಕಿದೆ

ಹೊಸಪೇಟೆ: ಹಂಪಿಯಲ್ಲಿ ಸದ್ದಿಲ್ಲದೆ ತಲೆ ಎತ್ತುತ್ತಿವೆ ಶೆಡ್

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ಹಂಪಿ ಜನತಾ ಕಾಲೊನಿಯಲ್ಲಿ ಮತ್ತೆ ಸದ್ದಿಲ್ಲದೆ ಹೊಸ ಶೆಡ್‌ಗಳು ತಲೆ ಎತ್ತುತ್ತಿವೆ.

ರಥಬೀದಿಗೆ ಹೊಂದಿಕೊಂಡಂತೆ ಜನತಾ ಕಾಲೊನಿಯಿದ್ದು, ಅಧಿಕಾರಿಗಳು, ಸಿಬ್ಬಂದಿ ನಿತ್ಯ ಇದೇ ಮಾರ್ಗವಾಗಿ ಓಡಾಡುತ್ತಾರೆ. ಕಾಲೊನಿಯಲ್ಲಿ ಏನೇ ಹೊಸ ಬೆಳವಣಿಗೆಗಳು ನಡೆದರೆ ಕಣ್ಣಿಗೆ ರಾಚುತ್ತದೆ. ಆದರೆ, ಈ ವಿಷಯ ಗೊತ್ತಿದ್ದರೂ ಸಹ ಮೌನ ವಹಿಸಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ.

ಜನತಾ ಕಾಲೊನಿಯಲ್ಲಿ ಒಟ್ಟು 128 ಮನೆಗಳಿವೆ. ಪ್ರತಿ ಕುಟುಂಬದವರು ಮನೆಗಳಲ್ಲೇ ಹೋಟೆಲ್‌, ಹೋಂ ಸ್ಟೇ, ಕರಕುಶಲ ವಸ್ತುಗಳು, ಪುಸ್ತಕ ಮಳಿಗೆ, ಬಟ್ಟೆ ಮಳಿಗೆ, ರೆಸಾರ್ಟ್‌ಗಳನ್ನು ನಡೆಸುತ್ತಿದ್ದಾರೆ. ಹಂಪಿಗೆ ಬರುವ ಬಹುತೇಕ ಪ್ರವಾಸಿಗರು ಇವುಗಳನ್ನೇ ನೆಚ್ಚಿಕೊಂಡಿದ್ದಾರೆ.

ಹಂಪಿಯ ಮಧ್ಯಭಾಗದಲ್ಲಿ ಇರುವುದರಿಂದ ಪ್ರವಾಸಿಗರು ಇಲ್ಲಿನ ಹೋಟೆಲ್‌ಗಳಲ್ಲಿಯೇ ತಂಗುತ್ತಾರೆ. ಊಟ– ಉಪಾಹಾರಕ್ಕೂ ಅವುಗಳನ್ನೇ ಆಶ್ರಯಿಸಿದ್ದಾರೆ. ಇತ್ತೀಚೆಗೆ ನೆರೆ ಬಂದು ವಿರೂಪಾಪುರ ಗಡ್ಡಿಯಲ್ಲಿ ಹೋಟೆಲ್‌ಗಳನ್ನು ಮುಚ್ಚಿಸಿರುವುದರಿಂದ ಇವುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಇದೇ ಸಂದರ್ಭವೆಂದು ತಿಳಿದು ಕೆಲವರು ರಾತ್ರೋರಾತ್ರಿ ಶೆಡ್‌ಗಳನ್ನು ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜನತಾ ಕಾಲೊನಿಯಲ್ಲಿರುವ ಹೋಟೆಲ್‌, ಮನೆಗಳನ್ನು ತೆರವುಗೊಳಿಸಲು ಈ ಹಿಂದೆ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮುಂದಾಗಿತ್ತು. ಆದರೆ, ಮಾಲೀಕರು ಧಾರವಾಡ ಹೈಕೋರ್ಟ್‌ ಸಂಚಾರಿ ಪೀಠದ ಮೊರೆ ಹೋಗಿರುವುದರಿಂದ ಅದು ನನೆಗುದಿಗೆ ಬಿದ್ದಿದೆ. ಹಳೆಯ ವಿಷಯವೇ ಇದುವರೆಗೆ ಇತ್ಯರ್ಥಗೊಂಡಿಲ್ಲ. ಹೀಗಿರುವಾಗ ಹೊಸ ಶೆಡ್‌ಗಳು ನಿರ್ಮಾಣಗೊಳ್ಳುತ್ತಿರುವುದು ಸ್ಮಾರಕಪ್ರಿಯರನ್ನು ಕಳವಳಕ್ಕೀಡು ಮಾಡಿದೆ.

‘ವಿಶ್ವ ಪಾರಂಪರಿಕ ತಾಣದ ಕೋರ್‌ ಜೋನ್‌ನಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಲು ಪ್ರಾಧಿಕಾರ ಪ್ರಯತ್ನ ನಡೆಸುತ್ತಿದೆ. ಹೀಗಿರುವಾಗ ರಾಜಾರೋಷವಾಗಿ ಹೊಸ ಶೆಡ್‌ ನಿರ್ಮಿಸುತ್ತಿರುವುದು ಕಳವಳದ ಸಂಗತಿ. ಹೀಗೆಯೇ ಬಿಟ್ಟರೆ ಬರುವ ದಿನಗಳಲ್ಲಿ ಅಡಿಪಾಯ ಹಾಕಿ ಕಟ್ಟಡ ನಿರ್ಮಿಸಬಹುದು. ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಅದನ್ನು ತೆರವುಗೊಳಿಸಬೇಕು’ ಎಂದು ರಾಕೇಶ್‌, ರೋಹಿತ್‌ ಆಗ್ರಹಿಸಿದ್ದಾರೆ.

‘ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ, ರಥಬೀದಿಯಲ್ಲೇ ಪೊಲೀಸ್‌ ಠಾಣೆ ಇದೆ. ಇಷ್ಟೆಲ್ಲ ಇಲಾಖೆಗಳಿದ್ದರೂ ಹೊಸದಾಗಿ, ಅಕ್ರಮವಾಗಿ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದರೂ ತಡೆಯದೇ ಇರುವುದು ದುರದೃಷ್ಟಕರ’ ಎಂದಿದ್ದಾರೆ.

*
ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಅದನ್ನು ಪರಿಶೀಲಿಸಿದ ಬಳಿಕ ಅದರ ತೆರವಿಗೆ ಕ್ರಮ ತೆಗೆದುಕೊಳ್ಳಲಾಗುವುದು.
–ಮೋತಿಲಾಲ್‌ ಲಮಾಣಿ, ಆಯುಕ್ತರು, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ

ಪ್ರತಿಕ್ರಿಯಿಸಿ (+)