ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ಮಾಡದಿದ್ದರೂ ಆನಂದ್‌ ಸಿಂಗ್‌ಗೆ ಅನರ್ಹತೆ ಶಿಕ್ಷೆ

ಜಿಂದಾಲ್‌ ಭೂ ಪರಭಾರೆ, ವಿಜಯನಗರ ಜಿಲ್ಲೆ ಪರ ಧ್ವನಿ ಎತ್ತಿ ರಾಜೀನಾಮೆ ಕೊಟ್ಟಿದ್ದ ಆನಂದ್‌ ಸಿಂಗ್‌
Last Updated 28 ಜುಲೈ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಿದ್ದರೂ ಸ್ಪೀಕರ್‌, ಅವರನ್ನು ಅನರ್ಹತೆಗೊಳಿಸಿರುವುದು ಕ್ಷೇತ್ರದಲ್ಲಿ ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಜಿಂದಾಲ್‌ಗೆ ಭೂ ಪರಭಾರೆ ಮಾಡಬಾರದು, ವಿಜಯನಗರ ಜಿಲ್ಲೆ ರಚನೆಯ ಬೇಡಿಕೆ ಈಡೇರಿಸಬೇಕೆಂದು ಆನಂದ್‌ ಸಿಂಗ್‌ ಜುಲೈ 1ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಜುಲೈ 7ರಂದು 14 ಜನ ಶಾಸಕರು ಅವರ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರೆಸಾರ್ಟ್‌ ಸೇರಿಕೊಂಡಿದ್ದರು.

ಆದರೆ, ಯಾವ ಅತೃಪ್ತ ಶಾಸಕರ ಜತೆ ಸಿಂಗ್‌ ಗುರುತಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲ, ಆ ಶಾಸಕರೆಲ್ಲ ರೆಸಾರ್ಟ್‌ ಸೇರಿದರೂ ಸಿಂಗ್‌ ಮಾತ್ರ ಕ್ಷೇತ್ರದಲ್ಲಿಯೇ ಉಳಿದುಕೊಂಡಿದ್ದರು. ಅವರ ತಂದೆಯ ಅನಾರೋಗ್ಯದ ನಿಮಿತ್ತ ಕೆಲವು ದಿನ ಬೆಂಗಳೂರಿಗೆ ಹೋಗಿದ್ದರು. ಈ ವೇಳೆ ಅವರು ಕಾಣೆಯಾಗಿದ್ದಾರೆ ಎಂದು ಕಾಂಗ್ರೆಸ್ಸಿಗರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಮರುದಿನವೇ ಸಿಂಗ್‌ ಅವರು ಠಾಣೆಗೆ ಬಂದು, ‘ನಾನೆಲ್ಲಿಯೂ ಹೋಗಿಲ್ಲ. ಬೆಂಗಳೂರಿನಲ್ಲಿದ್ದೆ’ ಎಂದು ಲಿಖಿತ ರೂಪದಲ್ಲಿ ಬರೆದು ಕೊಟ್ಟಿದ್ದರು. ತಂದೆಯ ಆಸ್ಪತ್ರೆ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರು.

ಸ್ಥಳೀಯ ಕಾಂಗ್ರೆಸ್‌ ಪಕ್ಷದ ಮುಖಂಡರು ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರೂ ಅವರು ತಲೆ ಕೆಡಿಸಿಕೊಂಡಿರಲಿಲ್ಲ. ಅದಕ್ಕೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಿರಲಿಲ್ಲ. ಆದರೆ, ಕಾಂಗ್ರೆಸ್‌ ಪಕ್ಷದ ಎಲ್ಲ ಚಟುವಟಿಕೆಗಳಿಂದ ಸಿಂಗ್‌ ಹಾಗೂ ಅವರ ಬೆಂಬಲಿಗರು ಅಂತರ ಕಾಯ್ದುಕೊಂಡಿದ್ದರು. ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಿಷ್ಟೂ ಹೊರತುಪಡಿಸಿದರೆ ಬಹಿರಂಗವಾಗಿ ಅವರು ಪ್ರತಿನಿಧಿಸುತ್ತಿದ್ದ ಪಕ್ಷದ ವಿರುದ್ಧ ಮಾತಾಡಿರಲಿಲ್ಲ.

‘ನಾನು ಮುಂದಿಟ್ಟಿರುವ ಎರಡು ಬೇಡಿಕೆಗಳನ್ನು ಈಡೇರಿಸುವವರೆಗೆ ರಾಜೀನಾಮೆ ಹಿಂಪಡೆಯುವುದಿಲ್ಲ. ಸದನಕ್ಕೂ ಹಾಜರಾಗುವುದಿಲ್ಲ’ ಎಂದು ಹಿಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಿದಾಗ ಸದನದಿಂದ ದೂರ ಉಳಿದಿದ್ದರು. ಆದರೆ, ಅದೊಂದೆ ಕಾರಣಕ್ಕೆ ಅವರನ್ನು ಅನರ್ಹಗೊಳಿಸಿರುವುದು ಸರಿಯಲ್ಲ ಎನ್ನುತ್ತಾರೆ ಹಿರಿಯ ವಕೀಲರು ಹಾಗೂ ಸಾರ್ವಜನಿಕರು.

‘ಕ್ಷೇತ್ರದಿಂದ ದೂರ ಉಳಿದು, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಅಂತಹ ಶಾಸಕರನ್ನು ಅನರ್ಹಗೊಳಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಆದರೆ, ಅದ್ಯಾವುದನ್ನೂ ಮಾಡದ ಆನಂದ್‌ ಸಿಂಗ್‌ ಅವರನ್ನು ಸ್ಪೀಕರ್‌ ರಮೇಶಕುಮಾರ್‌ ಅನರ್ಹಗೊಳಿಸಿರುವುದು ಕಾಯ್ದೆಗೆ ವಿರುದ್ಧವಾದುದು. ಸ್ಪೀಕರ್‌ ಒಂದು ಪಕ್ಷದ ಪರ ನಿಂತು ನಿರ್ಧಾರ ತೆಗೆದುಕೊಂಡಿದಂತಿದೆ’ ಎಂದು ಹಿರಿಯ ವಕೀಲ ಎಚ್‌. ಉಮೇಶ್‌ ತಿಳಿಸಿದರು.

‘ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ ಎಂಬುದಕ್ಕೆ ಒಂದಾದರೂ ಸಾಕ್ಷ್ಯ ಬೇಕು. ಆದರೆ, ಸಿಂಗ್‌ ಅವರ ಪ್ರಕರಣದಲ್ಲಿ ಅದು ಇಲ್ಲ. ಎಲ್ಲರಿಗೂ ಗೊತ್ತಿರುವಂತೆ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಅವರು ರಾಜೀನಾಮೆ ಕೊಟ್ಟಿದ್ದರು. ಅತೃಪ್ತ ಶಾಸಕರಂತೆ ಅವರು ವರ್ತಿಸಲಿಲ್ಲ. ಆದರೆ, ಅವರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಿರುವುದು ಸರಿಯಲ್ಲ’ ಎಂದು ಹೇಳಿದರು.

‘ಸ್ಪೀಕರ್‌ ಅವರು ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಬೇಕಿತ್ತು. ಆದರೆ, ಪಕ್ಷದ ಒತ್ತಡಕ್ಕೆ ಒಳಗಾಗಿ ತೀರ್ಮಾನ ಕೈಗೊಂಡಿದ್ದಾರೆ. ಇದು ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಎಸಗಿರುವ ಅಪಚಾರ’ ಎಂದು ಸ್ಥಳೀಯ ನಿವಾಸಿ ಸೋಮಶೇಖರ ಶಿವನಪ್ಪನವರ ಮಾಗಳ ಪ್ರತಿಕ್ರಿಯಿಸಿದ್ದಾರೆ.

‘ಸಿಂಗ್‌ ಶಾಸಕರಾಗಿ ಮೂರನೇ ಸಲ ಆಯ್ಕೆಯಾದ ಬಳಿಕ ಒಂದು ಸಲವೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಜನರಿಂದ ದೂರ ಉಳಿದಿದ್ದರು. ಎಂದೂ ಜಿಂದಾಲ್‌ ವಿರುದ್ಧ ಧ್ವನಿ ಎತ್ತದ ಅವರು, ಏಕಾಏಕಿ ಅದರ ವಿರುದ್ಧ ಹೋರಾಟ ಶುರು ಮಾಡಿದರು. ವಿಜಯನಗರ ಜಿಲ್ಲೆ ಆಗಬೇಕೆಂದು ಪಟ್ಟು ಹಿಡಿದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲಿಲ್ಲ. ನಂತರ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದರು. ಈ ಕುರಿತು ಕಾಂಗ್ರೆಸ್ಸಿನವರು ಸ್ಪೀಕರ್‌ಗೆ ಕೊಟ್ಟ ದೂರಿನಲ್ಲಿ ಪ್ರಸ್ತಾಪಿಸಿದ್ದರೆ ಖಂಡಿತವಾಗಿ ಕ್ರಮ ಜರುಗಿಸಲು ಅವಕಾಶವಿದೆ’ ಎನ್ನುತ್ತಾರೆ ವಕೀಲ ಬಸವರಾಜ.

ಈ ಕುರಿತು ಆನಂದ್‌ ಸಿಂಗ್ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT