ಬೀದಿ ನಾಯಿಗಳ ಉಪಟಳಕ್ಕಿಲ್ಲ ನಿಯಂತ್ರಣ

ಮಂಗಳವಾರ, ಜೂಲೈ 16, 2019
25 °C
ಹೊಸಪೇಟೆ ನಗರದಲ್ಲಿ ಎಂಟು ಸಾವಿರಕ್ಕೂ ಅಧಿಕ ಬೀದಿ ಶ್ವಾನಗಳು; ಬಿಡಾಡಿ ದನಗಳಿಂದ ಸಂಚಾರ ಸಮಸ್ಯೆ

ಬೀದಿ ನಾಯಿಗಳ ಉಪಟಳಕ್ಕಿಲ್ಲ ನಿಯಂತ್ರಣ

Published:
Updated:
Prajavani

ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿಯ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ನಗರದಲ್ಲಿ ಬೀದಿ ನಾಯಿಗಳ ಉಪಟಳ ಮೇರೆ ಮಿರಿದೆ.

ಕೆಲವೇ ವರ್ಷಗಳ ಹಿಂದೆ ಬಡಾವಣೆಗೆ ಒಂದೋ ಎರಡೋ ಬೀದಿ ನಾಯಿಗಳು ಇದ್ದವು. ಈಗ ಅವುಗಳ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟು ಬೆಳೆದಿದೆ. ಸ್ವಯಂ ಸೇವಾ ಸಂಸ್ಥೆಯೊಂದು ನಡೆಸಿದ ಸರ್ವೇ ಪ್ರಕಾರ, ನಗರದಲ್ಲಿ ಸದ್ಯ ಎಂಟು ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿವೆ.

ಇನ್ನೂ ನಾಯಿಗಳ ಸಂತತಿ ಗಣನೀಯವಾಗಿ ಬೆಳೆಯುತ್ತಲೇ ಇದೆ. ಈ ಹಿಂದೆ ಮಾಂಸದ ಅಂಗಡಿಗಳ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಹೋಟೆಲ್‌ಗಳು, ಗಲೀಜು ಇರುವ ಪ್ರದೇಶದಲ್ಲಿ ನಾಯಿಗಳು ಹೆಚ್ಚಾಗಿ ಕಂಡು ಬರುತ್ತಿದ್ದವು. ಈಗ ಇಂತಹುದೇ ನಿರ್ದಿಷ್ಟ ಪ್ರದೇಶವಿಲ್ಲ. ಎಲ್ಲ ಕಡೆಗಳಲ್ಲಿಯೂ ನಾಯಿಗಳ ದಂಡು ಕಂಡು ಬರುತ್ತಿದೆ. ರಾಜಾರೋಷವಾಗಿ ಎಲ್ಲೆಡೆ ಓಡಾಡಿಕೊಂಡು ಇರುತ್ತಿವೆ.

ನಗರದ ಸ್ಟೇಷನ್‌ ರಸ್ತೆ, ಮೇನ್‌ ಬಜಾರ್‌, ಚಿತ್ತವಾಡ್ಗಿ, ಟಿ.ಬಿ. ಡ್ಯಾಂ ರಸ್ತೆ, ಹಂಪಿ ಮುಖ್ಯ ರಸ್ತೆ ಸೇರಿದಂತೆ ಎಲ್ಲೆಡೆ ಅವುಗಳ ಹಾವಳಿ ಹೆಚ್ಚಾಗಿದೆ. ವಾಹನಗಳ ಸದ್ದಿಗೂ ಅವುಗಳು ಹೆದರುತ್ತಿಲ್ಲ. ರಸ್ತೆಯ ಮಧ್ಯದಲ್ಲಿಯೇ ಠಿಕಾಣಿ ಹೂಡುತ್ತಿವೆ. ವಾಹನ ಚಾಲಕರೇ ಮಾರ್ಗ ಬದಲಿಸಿಕೊಂಡು ಹೋಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ನಾಯಿಗಳಿಗೆ ಹಗಲು–ರಾತ್ರಿಯ ವ್ಯತ್ಯಾಸವಿಲ್ಲದಂತಾಗಿದೆ. ಈ ಹಿಂದೆ ರಾತ್ರಿ ವೇಳೆ ಗುಂಪು ಗುಂಪಾಗಿ ಓಡಾಡುತ್ತಿದ್ದವು. ಈಗ ಎಲ್ಲ ಗಳಿಗೆಯಲ್ಲೂ ಓಡಾಡುತ್ತಿರುತ್ತವೆ. ರಾತ್ರಿ ಅವುಗಳ ಹಿಂಡು ಸ್ವಲ್ಪ ಜಾಸ್ತಿಯಾಗುತ್ತದೆ.

ನಸುಕಿನ ಜಾವ, ರಾತ್ರಿ ವೇಳೆಯಲ್ಲಿ ಯಾರಾದರೂ ಸಾಮಾನು ಸರಂಜಾಮುಗಳೊಂದಿಗೆ ಹೋಗುತ್ತಿದ್ದರೆ ನಾಯಿಗಳ ಹಿಂಡು ದಾಳಿ ನಡೆಸುತ್ತಿವೆ. ನಾಯಿಗಳು ಬೆನ್ನಟ್ಟುತ್ತಿರುವುದರಿಂದ ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಮಕ್ಕಳಿಗಂತೂ ಮನೆಯಿಂದ ಹೊರಗೆ ಬಿಡದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಕೆಲ ತಿಂಗಳ ಹಿಂದೆ ಚಪ್ಪರದಹಳ್ಳಿಯಲ್ಲಿ ಮನೆ ಎದುರು ಆಟವಾಡುತ್ತಿದ್ದ ಕಂದಮ್ಮನ ಮೇಲೆ ನಾಯಿಗಳು ಎರಗಿದ್ದವು. ಇದರಿಂದ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಳು. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಆದರೆ, ಅವುಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ. ಈ ಕುರಿತು ನಗರಸಭೆ ಅಧಿಕಾರಿಗಳನ್ನು ಕೇಳಿದರೆ, ಏನೇನೋ ಸಬೂಬು ಹೇಳಿ ಜಾರಿಕೊಳ್ಳುತ್ತಾರೆ.

ಬಿಡಾಡಿ ದನಗಳಿಂದಲೂ ತೊಂದರೆ:

ನಗರದಲ್ಲಿ ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸುತ್ತಿದ್ದರೆ, ಬಿಡಾಡಿ ದನಗಳು ನಡುರಸ್ತೆಯಲ್ಲಿಯೇ ಠಿಕಾಣಿ ಹೂಡಿ, ಸಂಚಾರ ಅಸ್ತವ್ಯಸ್ತಗೊಳ್ಳಲು ಕಾರಣವಾಗುತ್ತಿದೆ.

ನಗರದ ಕಾಲೇಜು ರಸ್ತೆ, ಮೇನ್‌ ಬಜಾರ್‌, ಟಿ.ಬಿ. ಡ್ಯಾಂ ರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿಯಿಂದ ಅನೇಕ ಅಪಘಾತಗಳು ಸಂಭವಿಸಿವೆ. ನಿತ್ಯ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದರೆ, ಅವುಗಳನ್ನು ನಿಯಂತ್ರಿಸುವ ಕೆಲಸವಾಗುತ್ತಿಲ್ಲ.

ದನಗಳನ್ನು ರಸ್ತೆ ಮೇಲೆ ಬಿಡದಂತೆ ಅವುಗಳ ಮಾಲೀಕರಿಗೆ ನಗರಸಭೆ ಎಚ್ಚರಿಕೆ ಕೊಟ್ಟಿತ್ತು. ಕೆಲವು ದಿನ ಮಾಲೀಕರು ಅದನ್ನು ಚಾಚೂ ತಪ್ಪದೇ ಪಾಲಿಸಿದ್ದರು. ಈಗ ಮತ್ತೆ ಹಳೆಯ ಚಾಳಿ ಮುಂದುವರೆಸಿದ್ದಾರೆ.

’ಪ್ರವಾಸಿ ತಾಣ ಹಂಪಿ ಸನಿಹದಲ್ಲೇ ಇರುವುದರಿಂದ ನಿತ್ಯ ದೇಶ–ವಿದೇಶಗಳಿಂದ ನೂರಾರು ಜನ ನಗರಕ್ಕೆ ಬರುತ್ತಾರೆ. ನಗರದಲ್ಲಿ ಸ್ವಚ್ಛತೆಯ ಜತೆಗೆ ಬೀದಿ ನಾಯಿಗಳು, ಬಿಡಾಡಿ ದನಗಳು ಓಡಾಡದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ನಗರದ ಜತೆಗೆ ದೇಶಕ್ಕೆ ಕೆಟ್ಟ ಹೆಸರು ಬರುತ್ತದೆ‘ ಎಂದು ಹೋರಾಟಗಾರ ಸಂತೋಷ್‌ ಕುಮಾರ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !