ಬುಧವಾರ, ನವೆಂಬರ್ 13, 2019
21 °C

ಪರೀಕ್ಷೆ ಬರೆದು ರೈಲ್ವೆಯಲ್ಲಿ ಉದ್ಯೋಗ ಗಿಟ್ಟಿಸಿ: ಸಚಿವ ಸುರೇಶ ಅಂಗಡಿ ಕಿವಿಮಾತು

Published:
Updated:
Prajavani

ಹೊಸಪೇಟೆ: ‘ನೇರವಾಗಿ ಉದ್ಯೋಗ ದೊರಕಿಸಿಕೊಡುವ ವ್ಯವಸ್ಥೆ ರೈಲ್ವೆ ಇಲಾಖೆ ಸೇರಿದಂತೆ ದೇಶದ ಯಾವುದೇ ಕ್ಷೇತ್ರದಲ್ಲಿ ಈಗಿಲ್ಲ. ಹಾಗಾಗಿ ಯುವಕರು ಪರೀಕ್ಷೆ ಬರೆದು ಉದ್ಯೋಗ ಗಿಟ್ಟಿಸಿಕೊಳ್ಳಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸಲಹೆ ಮಾಡಿದರು.

ಗುರುವಾರ ನಗರದ ರೈಲು ನಿಲ್ದಾಣದಲ್ಲಿ ಹೊಸಪೇಟೆ–ಕೊಟ್ಟೂರು–ಹರಿಹರ ಪ್ರಯಾಣಿಕರ ರೈಲಿಗೆ ಹಸಿರು ನಿಶಾನೆ ತೋರಿದ ಬಳಿಕ ಮಾತನಾಡಿದ ಅವರು, ‘ಅನೇಕ ಯುವಕರು ನನ್ನ ಬಳಿ ಬಂದು ಉದ್ಯೋಗ ಕೊಡಿಸುವಂತೆ ಕೇಳುತ್ತಾರೆ. ಆದರೆ, ಈಗ ಹಾಗೆ ಮಾಡಲು ಬರುವುದಿಲ್ಲ. ಉದ್ಯೋಗ ಪಡೆಯಬೇಕಾದರೆ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಬೇಕು’ ಎಂದರು.

‘ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರದವರು ಹೆಚ್ಚಿನ ಸಂಖ್ಯೆಯಲ್ಲಿ ರೈಲ್ವೆ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ, ರಾಜ್ಯದ ಯುವಕರ ಸಂಖ್ಯೆ ಬಹಳ ಕಡಿಮೆ ಇದೆ. ರಾಜ್ಯದ ಯುವಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆಯಬೇಕು. ರೈಲ್ವೆಯಲ್ಲಿ ಸಾವಿರಾರು ಉದ್ಯೋಗಗಳಿಗೆ ಪರೀಕ್ಷೆ ನಡೆಸಲಾಗುತ್ತದೆ’ ಎಂದು ತಿಳಿಸಿದರು.

‘ಮೋದಿಯವರು ಯೋಗದಿಂದ ದೇಶವನ್ನು ಜಗತ್ತಿನೊಂದಿಗೆ ಜೋಡಿಸಿದರು. ಅಮಿತ್‌ ಶಾ 370ನೇ ವಿಧಿ ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಿದರು. ಅದೇ ರೀತಿ 13 ಲಕ್ಷ ರೈಲ್ವೆ ಕಾರ್ಮಿಕರು ಇಡೀ ಭಾರತವನ್ನ ಜೋಡಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.

‘ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದರು. ಮೋದಿಯವರ ಕಾಲದಲ್ಲಿ ರೈಲ್ವೆ ಜಾಲ ವಿಸ್ತರಿಸಿ ದೊಡ್ಡ ನಗರಗಳೊಂದಿಗೆ ಸಣ್ಣ ನಗರಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ₹50 ಲಕ್ಷ ಕೋಟಿ ಹೂಡಿಕೆ ರೈಲ್ವೆ ಮಾಡಲಾಗಿದೆ. ಕ್ಯಾಮೆರಾ, ವೈ ಫೈ ಸೇರಿದಂತೆ ಅನೇಕ ಸೌಕರ್ಯಗಳನ್ನು ರೈಲು ನಿಲ್ದಾಣದಲ್ಲಿ ಕಲ್ಪಿಸಲಾಗಿದೆ. ಹವಾನಿಯಂತ್ರಿತ ಬೋಗಿಗಳಂತೆ ಸಾಮಾನ್ಯ ದರ್ಜೆಯ ಬೋಗಿಗಳ ನಿರ್ವಹಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ’ ಎಂದು ತಿಳಿಸಿದರು.

ರೈಲ್ವೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ಸಿಂಗ್‌, ಶಾಸಕ ಜಿ. ಸೋಮಶೇಖರ್‌ ರೆಡ್ಡಿ, ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಸ್ವಾಮಿ, ಕೊಟ್ಟೂರಿನ ಚಾನುಕೋಟಿ ಸಿದ್ದಲಿಂಗ ಸ್ವಾಮಿ, ನೈರುತ್ಯ ರೈಲ್ವೆ ವಲಯ ಸಲಹಾ ಸಮಿತಿ ಸದಸ್ಯ ಬಾಬುಬಾಲ್‌ ಜೈನ್‌, ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್‌ ಇದ್ದರು.

ಜಿಲ್ಲಾ ಉಸ್ತುವಾರಿ ಸಚಿವರು ಗೈರು
ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಸಚಿವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಜನ ಹಾಗೂ ಸಂಘ ಸಂಸ್ಥೆಗಳ ಮುಖಂಡರು ಬಂದಿದ್ದರು. ಸಚಿವರು ಬರದ ಕಾರಣ ಅವರು ಸಪ್ಪೆ ಮೊರೆ ಮಾಡಿಕೊಂಡು ವಾಪಸ್‌ ಹೋದರು.

‘ಅಂಗಡಿ ಸಂಪುಟ ದರ್ಜೆ ಸಚಿವರಾಗಲಿ’
ಸುರೇಶ ಅಂಗಡಿ ಅವರ ಕಾರ್ಯವೈಖರಿಯನ್ನು ಹಾಡಿಹೊಗಳಿದ ಸಂಸದರಾದ ವೈ. ದೇವೇಂದ್ರಪ್ಪ ಹಾಗೂ ಜಿ.ಎಂ. ಸಿದ್ದೇಶ್ವರ ಅವರು, ‘ಅಂಗಡಿ ಅವರು ರಾಜ್ಯ ಖಾತೆ ಸಚಿವರಿಂದ ಸಂಪುಟ ದರ್ಜೆ ಸಚಿವರಾಗಿ ಬಡ್ತಿ ಹೊಂದಬೇಕು. ಅವರಲ್ಲಿ ಅದನ್ನು ನಿಭಾಯಿಸುವ ಸಾಮರ್ಥ್ಯ ಇದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಜಾಫರ್‌ ಷರೀಫ್‌ ನಂತರ ಹೆಚ್ಚು ಕೆಲಸ ಅಂಗಡಿಯವರು ಮಾಡಬೇಕು. ಅವರೊಬ್ಬ ಕ್ರಿಯಾಶೀಲ ವ್ಯಕ್ತಿಯಾಗಿರುವುದರಿಂದ ಮಾಡುತ್ತಾರೆ ಎಂಬ ಭರವಸೆ ಇದೆ. ಅವರನ್ನು ಕೇಂದ್ರ ಸರ್ಕಾರ ಬರುವ ದಿನಗಳಲ್ಲಿ ಕ್ಯಾಬಿನೆಟ್‌ ದರ್ಜೆ ಮಂತ್ರಿ ಮಾಡಬೇಕು’ ಎಂದು ಸಿದ್ದೇಶ್ವರ ಹೇಳಿದರು. ಇದೇ ಮಾತನ್ನು ದೇವೇಂದ್ರಪ್ಪ ಅವರು ಅವರ ಭಾಷಣದಲ್ಲಿ ಪುನರುಚ್ಚರಿಸಿದರು.

‘ಫ್ಲಾಟ್‍ಫಾರಂ ನಿರ್ಮಾಣ ಶೀಘ್ರ’
ಹಗರಿಬೊಮ್ಮನಹಳ್ಳಿ ವರದಿ:
‘ಪಟ್ಟಣದ ರೈಲು ನಿಲ್ದಾಣದಲ್ಲಿ ಫ್ಲಾಟ್‍ಫಾರಂ ಸಹಿತ ಹಲವು ಕಾಮಗಾರಿಗಳನ್ನು ಶೀಘ್ರದಲ್ಲೆ ಆರಂಭಿಸಲಾಗುವುದು’ ಎಂದು ಸುರೇಸ ಅಂಗಡಿ ಭರವಸೆ ನೀಡಿದರು.

ಇಲ್ಲಿ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಇಲ್ಲಿನ ರೈಲು ನಿಲ್ದಾಣದಲ್ಲಿ ವಯೋವೃದ್ಧರು ರೈಲು ಹತ್ತಲು ಮತ್ತು ಇಳಿಯುವುದಕ್ಕೆ ಅನುಕೂಲವಾಗುವಂತೆ ಪ್ಲಾಟ್‍ಫಾರಂ ನಿರ್ಮಿಸಲಾಗುವುದು’ ಎಂದರು.

ಪ್ರತಿದಿನ ಬೆಳಿಗ್ಗೆ 7ಗಂಟೆಗೆ ಹೊಸಪೇಟೆಯಿಂದ ನಿರ್ಗಮಿಸುವಂತೆ ರೈಲಿನ ಸಮಯ ನಿಗದಿಗೊಳಿಸಲು ಹೋರಾಟ ಸಮಿತಿಯ ಮುಖಂಡರು ಮನವಿ ಮಾಡಿದರು.

ಶಿಳ್ಳೆ, ಚಪ್ಪಾಳೆಯೊಂದಿಗೆ ಸ್ವಾಗತ
ಕೊಟ್ಟೂರು ವರದಿ:
ಪ್ರಯಾಣಿಕರ ರೈಲು ಗುರುವಾರ ಮಧ್ಯಾಹ್ನ ಪಟ್ಟಣದ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಸ್ಥಳೀಯರು ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು.

ನಂತರ ವಿಶೇಷ ರೈಲಿನಲ್ಲಿ ಸಚಿವ ಸುರೇಶ ಅಂಗಡಿ ಬಂದರು. ಅವರಿಗೆ ರೈಲ್ವೆ ಹೋರಾಟ ಸಮಿತಿ ಮುಖಂಡರು ಸ್ವಾಗತಿಸಿ ಬರಮಾಡಿಕೊಂಡರು. ಸಚಿವರು ನೇರವಾಗಿ ಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದು ತೆರಳಿದರು.

ಇದಕ್ಕೂ ಮುನ್ನ ಮಾತನಾಡಿದ ಅವರು, ‘ಈ ಭಾಗದ ಜನತೆಯ ಅಶಯದಂತೆ ರೈಲು ಸಂಚಾರ ಆರಂಭಿಸಲಾಗಿದೆ, ಮುಂದಿನ ದಿನಗಳಲ್ಲಿ ಹೊಸ ರೈಲುಗಳ ಸಂಚಾರ ಸೇರಿದಂತೆ ಇತರೆ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು’ ಎಂದು ಭರವಸೆ ನೀಡಿದರು.

ರೈಲು ನೋಡಲು ದೂರದಿಂದ ಬಂದರು
ಪ್ರಯಾಣಿಕರ ರೈಲು ಸಂಚಾರದ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲು ಜಿಲ್ಲೆಯ ವಿವಿಧ ಭಾಗಗಳಿಂದ ಜನ ನಗರದ ನಿಲ್ದಾಣಕ್ಕೆ ಬಂದಿದ್ದರು.

ಒಂದನೇ ಪ್ಲಾಟ್‌ಫಾರಂನಲ್ಲಿ ಹೂ, ಬಲೂನ್‌ಗಳಿಂದ ಸಿಂಗಾರಗೊಂಡು ನಿಂತಿದ್ದ ರೈಲಿನ ಎದುರು ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡು ಸಂಭ್ರಮಿಸಿದರು. ಕೆಲವರು ಮೊದಲ ಪಯಣಕ್ಕೆ ಸಾಕ್ಷಿಯಾದರು.

ಪ್ರತಿಕ್ರಿಯಿಸಿ (+)