ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಸೌಲಭ್ಯ; ದಾರಿ ದೂರ

ಉತ್ಸಾಹವಿದ್ದರೂ ಇಲ್ಲ ಸುಸಜ್ಜಿತ ಕ್ರೀಡಾಂಗಣ, ಕ್ರೀಡಾ ಪರಿಕರಗಳು
Last Updated 29 ಆಗಸ್ಟ್ 2021, 6:51 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಈಗಷ್ಟೇ ಕಣ್ಣು ತೆರೆದ ಕೂಸಿನಂತಿರುವ ವಿಜಯನಗರ ಜಿಲ್ಲೆಯಲ್ಲಿ ಇನ್ನಷ್ಟೇ ಕ್ರೀಡಾ ಸೌಲಭ್ಯಗಳು ಸಿಗಬೇಕಿದೆ.

ಸ್ಥಳೀಯ ಬಾಲಕ/ಬಾಲಕಿಯರು, ಯುವಕ/ಯುವತಿಯರಿಗೆ ಕ್ರೀಡೆಯ ಬಗ್ಗೆ ಎಲ್ಲಿಲ್ಲದ ಉತ್ಸಾಹ ಇದೆ. ಅವರಿಗೆ ಆಸಕ್ತಿಯಿರುವ ಕ್ರೀಡೆಯಲ್ಲಿ ಮುಂದುವರೆದು, ಊರಿಗೆ, ದೇಶಕ್ಕೆ ಕೀರ್ತಿ ತರಬೇಕೆಂಬ ಉಮೇದು ಇದೆ. ಆದರೆ, ಅವರ ಆಕಾಂಕ್ಷೆಗೆ ಅನುಗುಣವಾದ ಸೌಲಭ್ಯಗಳೇ ಇಲ್ಲ.

ನಗರದ ಹೃದಯ ಭಾಗದಲ್ಲಿ ಮುನ್ಸಿಪಲ್‌ ಮೈದಾನ, ತಾಲ್ಲೂಕು ಕ್ರೀಡಾಂಗಣ ಎಂದು ಎರಡು ಭಾಗದಲ್ಲಿ ಹಂಚಿ ಹೋಗಿದೆ. ಅದರ ಬದಿಯಲ್ಲಿ ಒಳಾಂಗಣ ಕ್ರೀಡಾಂಗಣವಿದೆ. ಅಲ್ಲಿ ಸುಸಜ್ಜಿತವಾದ ಈಜುಕೊಳ, ಜಿಮ್‌, ಬ್ಯಾಡ್ಮಿಂಟನ್‌ ಕೋಟ್‌ ಇದೆ. ಆದರೆ, ಮುನ್ಸಿಪಲ್‌ ಮೈದಾನ, ತಾಲ್ಲೂಕು ಕ್ರೀಡಾಂಗಣದ ಸುತ್ತ ಕಾಂಪೌಂಡ್‌ ಇಲ್ಲ. ಇಡೀ ಮೈದಾನ ತೆರೆದ ಸ್ಥಿತಿಯಲ್ಲಿದೆ.

ಯಾವುದೇ ಭದ್ರತಾ ವ್ಯವಸ್ಥೆ ಇಲ್ಲದರಿಂದ ಬೀದಿ ನಾಯಿಗಳು, ಬಿಡಾಡಿ ದನಗಳು, ಹಂದಿಗಳು ಕ್ರೀಡಾಂಗಣದಲ್ಲಿ ಸದಾ ಬೀಡು ಬಿಟ್ಟಿರುತ್ತವೆ. ಕ್ರೀಡಾಂಗಣದ ಒಂದು ಬದಿಯಲ್ಲಿ ಸುಸಜ್ಜಿತವಾದ ಶೌಚಾಲಯ ಕಟ್ಟಡವಿದ್ದರೂ ಅದು ಬಳಕೆಯಲ್ಲಿಲ್ಲ. ಹೀಗಾಗಿ ಜನ ಕ್ರೀಡಾಂಗಣದ ಅಂಚಿನಲ್ಲಿ ಮಲ, ಮೂತ್ರ ವಿಸರ್ಜಿಸಿ ಹೋಗುತ್ತಾರೆ. ಸಮೀಪದ ಮನೆಗಳವರು ಕಸ ಎಸೆದು ಹೋಗುತ್ತಾರೆ.

ಎರಡೂ ಮೈದಾನಗಳು ಕ್ರೀಡಾ ಚಟುವಟಿಕೆಗಳಿಗಿಂತ ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳಿಗೆ ಸೀಮಿತವಾಗಿದೆ. ಗಣ್ಯ, ಅತಿ ಗಣ್ಯ ವ್ಯಕ್ತಿಗಳು ಹೆಲಿಕ್ಯಾಪ್ಟರ್‌ನಲ್ಲಿ ಬಂದಿಳಿಯಲು ಜಾಗ ಹೆಚ್ಚಾಗಿ ಬಳಕೆಯಾಗುತ್ತಿದೆ.

ಕ್ರೀಡಾಂಗಣದ ಮಧ್ಯಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಕ್ರೀಡಾ ತರಬೇತುದಾರರಿಗೆ ಒಂದು ಪುಟ್ಟ ಕೊಠಡಿ ಮೀಸಲಿಡಲಾಗಿದೆ. ಆದರೆ, ಅಲ್ಲೂ ಅಗತ್ಯ ಮೂಲಸೌಕರ್ಯ ಇಲ್ಲ. ಕ್ರೀಡಾಪಟುಗಳಿಗೆ ಶೌಚಾಲಯ, ಬಟ್ಟೆ ಬದಲಿಸಿಕೊಳ್ಳಲು ವ್ಯವಸ್ಥೆ ಇಲ್ಲ.

ಕ್ರೀಡಾಂಗಣದಲ್ಲಿರುವ ಟ್ರ್ಯಾಕ್‌ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದ ಕಾರಣ ಅದು ಹಾಳಾಗಿದೆ. ಹಲವು ಕಡೆಗಳಲ್ಲಿ ಗುಂಡಿಗಳು ಬಿದ್ದಿವೆ. ಜಂಪ್‌ ಪಿಟ್‌, ಸ್ಯಾಂಡ್‌ ಪಿಟ್‌, ಬಾಸ್ಕೆಟ್‌ಬಾಲ್‌, ವಾಲಿಬಾಲ್‌, ಮೆಡಿಸಿನ್‌ ಬಾಲ್‌ ಸೇರಿದಂತೆ ಯಾವುದೂ ಇಲ್ಲ. ಸಿಬ್ಬಂದಿ, ಮಾರ್ಕರ್‌ ಕೂಡ ಇಲ್ಲ.

ಹೊತ್ತಾಗುತ್ತಿದ್ದಂತೆ ಪಡ್ಡೆ ಹುಡುಗರ ಅಡ್ಡೆಯಾಗಿ ಬದಲಾಗುತ್ತದೆ. ಜನ್ಮದಿನ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಚರಿಸಿ, ಕೇಕ್‌ ಕತ್ತರಿಸಿ, ಮದ್ಯ ಕುಡಿದು ಬೇಕಾಬಿಟ್ಟಿ ಬಾಟಲಿಗಳನ್ನು ಎಸೆದು ಹೋಗುತ್ತಾರೆ. ಅವರನ್ನು ತಡೆಯುವವರು ಯಾರೂ ಇಲ್ಲದಂತಾಗಿದೆ ಎನ್ನುವುದು ಸ್ಥಳೀಯರ ಆರೋಪ.

ಮೇಲ್ದರ್ಜೆಗೆ:

ಮುನ್ಸಿಪಲ್‌ ಮೈದಾನ ಮತ್ತು ತಾಲ್ಲೂಕು ಕ್ರೀಡಾಂಗಣ ಹೊಂದಿಕೊಂಡಂತೆ ಇರುವುದರಿಂದ ಎರಡನ್ನೂ ಸೇರಿಸಿ ಬೃಹತ್‌ ಜಿಲ್ಲಾ ಕ್ರೀಡಾಂಗಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಸಚಿವ ಆನಂದ್‌ ಸಿಂಗ್‌ ಅವರು ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ ರೂಪುರೇಷೆ ತಯಾರಿಸಲು ಸೂಚಿಸಿದ್ದಾರೆ.

ಹೊಸಪೇಟೆ ಈಗ ಜಿಲ್ಲಾ ಕೇಂದ್ರವಾಗಿ ಬದಲಾಗಿರುವುದರಿಂದ ವಿಶಾಲವಾದ, ಸುಸಜ್ಜಿತವಾದ ಕ್ರೀಡಾಂಗಣದ ಅಗತ್ಯವಿದೆ ಎಂದು ಮನಗಂಡು ಯೋಜನೆ ರೂಪಿಸಲಾಗುತ್ತಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ 150 ಅಡಿ ಬೃಹತ್‌ ಧ್ವಜ ಸ್ತಂಭ ಸ್ಥಾಪನೆ, ಎಲ್ಲ ವಿಧದ ಕ್ರೀಡಾಪಟುಗಳಿಗೆ ಕ್ರೀಡಾಂಗಣದಲ್ಲಿ ಉತ್ತಮವಾದ ಸೌಲಭ್ಯಗಳು ಕಲ್ಪಿಸಲು ಯೋಜಿಸಲಾಗಿದೆ. ಅದರ ಬಳಿಕವೇ ಸಿಬ್ಬಂದಿ ನೇಮಕಾತಿ ಸೇರಿದಂತೆ ಇತರೆ ಪ್ರಕ್ರಿಯೆಗಳು ನಡೆಯಲಿವೆ. ಅಲ್ಲಿಯವರೆಗೆ ಕ್ರೀಡಾಪಟುಗಳು ಕಾಯುವುದು ಬಿಟ್ಟರೆ ಬೇರೆ ಆಯ್ಕೆಗಳು ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT