ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ–ಪ್ರಾಣಿ ಸಂಘರ್ಷ: ಚಿರತೆ ಚಲನವಲನ ಅರಿಯಲು ವೈಜ್ಞಾನಿಕ ಅಧ್ಯಯನ ಕೈಗೊಂಡಿಲ್ಲ

ಅರಣ್ಯ ಇಲಾಖೆಯಿಂದ ನಡೆಯದ ವೈಜ್ಞಾನಿಕ ಅಧ್ಯಯನ; ತಜ್ಞರ ಸಲಹೆಗೂ ಹಿಂದೇಟು
Last Updated 25 ಡಿಸೆಂಬರ್ 2018, 19:56 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕು ಹಾಗೂ ಕಂಪ್ಲಿ ಸುತ್ತಮುತ್ತ ಅನೇಕ ವರ್ಷಗಳಿಂದ ನಿರಂತರವಾಗಿ ಚಿರತೆಗಳು ದಾಳಿ ನಡೆಸಿ, ಮನುಷ್ಯರ ಜೀವ ತೆಗೆಯುತ್ತಿವೆ. ಆದರೆ, ಚಿರತೆಗಳ ಚಲನವಲನಕ್ಕೆ ಸಂಬಂಧಿಸಿ ಇದುವರೆಗೆ ಅರಣ್ಯ ಇಲಾಖೆ ವೈಜ್ಞಾನಿಕ ಅಧ್ಯಯನ ಕೈಗೊಂಡಿಲ್ಲ.

ಇಡೀ ಪ್ರದೇಶದಲ್ಲಿ ಚಿರತೆಗಳ ಸಂತತಿ ಹೆಚ್ಚಾಗಿದೆಯೋ ಅಥವಾ ಕಡಿಮೆಯಾಗಿದೆಯೋ, ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿರುವ ಚಿರತೆಗಳು ನರಭಕ್ಷಕವಾಗಿ ಬದಲಾಗಲು ಕಾರಣಗಳೇನು ಎಂಬುದಕ್ಕೆ ಯಾವುದೆ ಮಾಹಿತಿ ಅರಣ್ಯ ಇಲಾಖೆಯ ಬಳಿ ಇರದೇ ಇರುವುದು ಅದಕ್ಕೆ ಪ್ರಮುಖ ಸಾಕ್ಷಿ.

ಚಿರತೆಗಳು ಜನರ ಮೇಲೆ ದಾಳಿ ನಡೆಸಿ ಜೀವ ತೆಗೆದಾಗ ₹ 5ರಿಂದ ₹ 10 ಲಕ್ಷ ಪರಿಹಾರ ಕೊಡುವ ಅರಣ್ಯ ಇಲಾಖೆ, ಅವುಗಳ ಚಲನವಲನಕ್ಕೆ ಸಂಬಂಧಿಸಿದಂತೆ ತಜ್ಞರಿಂದ ಅಧ್ಯಯನ ಕೈಗೊಳ್ಳಲು ಹಣ ವ್ಯಯಿಸಲು ಹಿಂಜರಿಯುತ್ತದೆ. ಈ ವಿಷಯಕ್ಕೆ ವನ್ಯಜೀವಿ ತಜ್ಞರು ಸಹ ಸಹಮತ ವ್ಯಕ್ತಪಡಿಸುತ್ತಾರೆ.

‘ಹೊಸಪೇಟೆ, ಕಂಪ್ಲಿ ತಾಲ್ಲೂಕಿನ ಸುತ್ತಮುತ್ತ ಎಷ್ಟು ಚಿರತೆಗಳು ಇವೆ ಎನ್ನುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಬಳಿ ಯಾವುದೇ ಮಾಹಿತಿಯಿಲ್ಲ. 1994–95ರ ನಂತರದಿಂದ ನಿರಂತರವಾಗಿ ಮನುಷ್ಯರ ಮೇಲೆ ದಾಳಿಗಳು ನಡೆಯುತ್ತಿವೆ. ಆದರೆ, ಈ ಸುದೀರ್ಘ ಅವಧಿಯಲ್ಲಿ ಚಿರತೆಗಳ ಸರ್ವೇಗೆ ಕ್ರಮ ಕೈಗೊಂಡಿಲ್ಲ’ ಎನ್ನುತ್ತಾರೆ ವನ್ಯಜೀವಿ ತಜ್ಞ ಸಮದ್‌ ಕೊಟ್ಟೂರು.

‘ಚಿರತೆಗಳ ಅಧ್ಯಯನಕ್ಕೆಂದೇ ಪ್ರತ್ಯೇಕ ಸಮಿತಿ ರಚಿಸಬೇಕು. ವನ್ಯಜೀವಿ ತಜ್ಞರು ಅದರಲ್ಲಿ ಇರಬೇಕು. ಅವರ ಸಲಹೆ ಮೇರೆಗೆ ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಕೈಗೊಳ್ಳಬೇಕು. ಅದಕ್ಕೆ ಅಗತ್ಯ ಸಿಬ್ಬಂದಿ, ತಾಂತ್ರಿಕ ನೆರವು ಒದಗಿಸಬೇಕು’ ಎಂದರು.

‘ಸೋಮಲಾಪುರದಲ್ಲಿ ಇತ್ತೀಚೆಗೆ ಸೆರೆಹಿಡಿದ ಚಿರತೆ ನರಭಕ್ಷಕ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಅದನ್ನು ಯಾವ ಮಾನದಂಡದ ಮೇಲೆ ಹೇಳಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಈಗ ದೇವಲಾಪುರದಲ್ಲಿ ದಾಳಿ ನಡೆದಿದೆ. ಹಾಗಿದ್ದರೆ ಇದು ಬೇರೆ ಚಿರತೆಯೇ ಅಥವಾ ಈ ಹಿಂದೆ ದಾಳಿ ನಡೆಸಿದ ಚಿರತೆಯೇ ಎಂದು ಕೇಳಿದರೆ ಅವರ ಬಳಿ ಯಾವುದೇ ಉತ್ತರವಿಲ್ಲ. ಸ್ಪಷ್ಟತೆ ಇರದೇ ಇದ್ದಾಗ ಈ ರೀತಿಯ ಗೊಂದಲಗಳು ಸೃಷ್ಟಿಯಾಗುತ್ತವೆ’ ಎಂದು ಹೇಳಿದರು.

‘ಯಾವುದು ನರಭಕ್ಷಕ ಚಿರತೆ ಎನ್ನುವುದನ್ನು ಮೊದಲು ಗುರುತಿಸುವ ಕೆಲಸ ಮಾಡಬೇಕು. ದಾಳಿಗಳು ಹೆಚ್ಚಾಗಿವೆ ಎಂದರೆ ಅವುಗಳ ಸಂತತಿ ಕೂಡ ಹೆಚ್ಚಾಗುತ್ತಿದೆ ಎಂದರ್ಥ. ಕಾಡಿನಲ್ಲಿ ಅವುಗಳಿಗೆ ಆಹಾರ ಸಿಗದ ಕಾರಣ ನಾಡಿಗೆ ಬಂದು ದಾಳಿ ನಡೆಸುತ್ತಿವೆ. ಸೆರೆಹಿಡಿದ ಚಿರತೆಗಳನ್ನು ಸಂರಕ್ಷಣಾ ಕೇಂದ್ರ ತೆರೆದು ಅದರಲ್ಲಿ ಇಡುವ ವ್ಯವಸ್ಥೆ ಮಾಡಬೇಕು. ಅಲ್ಲದೇ ಅರಣ್ಯ ಇಲಾಖೆಗೆ ಹೆಚ್ಚಿನ ಸಿಬ್ಬಂದಿ ನೇಮಿಸಿಕೊಂಡು, ಕಾಡಿನಂಚಿನ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ’ ಎಂದು ಪರಿಸರ ಹೋರಾಟಗಾರ ಶಿವಕುಮಾರ ಮಾಳಗಿ ಸಲಹೆ ಮಾಡಿದರು.

‘ಸೋಮಲಾಪುರ ಮತ್ತು ದೇವಲಾಪುರಕ್ಕೂ ನಾಲ್ಕರಿಂದ ಐದು ಕಿ.ಮೀ. ದೂರದ ಅಂತರವಿದೆ. ಸೋಮಲಾಪುರದಲ್ಲಿ ದಾಳಿ ನಡೆಸಿದ ಚಿರತೆ ಅಷ್ಟು ದೂರ ಕ್ರಮಿಸುವ ಸಾಧ್ಯತೆ ಬಹಳ ಕ್ಷೀಣ. ಏನೇ ಇದ್ದರೂ ಅವುಗಳ ಚಲನವಲನದ ಮೇಲೆ ವಿಶೇಷ ನಿಗಾ ಇರಿಸಲಾಗುವುದು. ಗ್ರಾಮಸ್ಥರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ’ ಎಂದು ಡಿ.ಎಫ್‌.ಒ. ರಮೇಶ ಕುಮಾರ ತಿಳಿಸಿದರು.

ಇನ್ನಷ್ಟು ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT