ಪ್ರತ್ಯೇಕ ರಾಜ್ಯ ಬೇಡಿಕೆ ಖಂಡನೀಯ: ಎಸ್‌ಯುಸಿಐಸಿ

7
ಹೊಸ ರಾಜ್ಯಗಳ ಜನರ ಬದುಕು ಹಸನಾಗಿದೆಯೇ? ಎಂಬ ಪ್ರಶ್ನೆ ಎತ್ತಿದ ಸಂಘಟನೆ

ಪ್ರತ್ಯೇಕ ರಾಜ್ಯ ಬೇಡಿಕೆ ಖಂಡನೀಯ: ಎಸ್‌ಯುಸಿಐಸಿ

Published:
Updated:

ಬಳ್ಳಾರಿ: ‘ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಘೋಷಿಸುವ ಬೇಡಿಕೆ ಖಂಡನೀಯ’ ಎಂದು ಎಸ್‌ಯುಸಿಐಸಿ ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಸೋಮಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.

‘ಚುನಾವಣಾ ರಾಜಕೀಯದ ಗೀಳು ಹತ್ತಿಸಿಕೊಂಡವರು ಬೇಳೆ ಬೇಯಿಸಿಕೊಳ್ಳಲು ಆಗಾಗ ಈ ವಿಷಯವನ್ನು ಕೆದಕಿ ರಾಜ್ಯದ ಜನರ ಮನಸ್ಸನ್ನು ಒಡೆಯುವ ಪ್ರವೃತ್ತಿಯನ್ನು ತೋರುತ್ತಿದ್ದಾರೆ. ಅಂಥವರನ್ನು ರಾಜ್ಯದ ಉತ್ತರ ಜಿಲ್ಲೆಗಳ ಜನ ಯಾವ ಕಾರಣಕ್ಕೂ ಬೆಂಬಲಿಸಬಾರದು’ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

‘ರಾಜ್ಯದ ಉತ್ತರ ಭಾಗದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಿವೆ. ಇಲ್ಲಿನ ಸಮಸ್ಯೆಗಳೇ ಭಿನ್ನವಾಗಿವೆ. ಮುಂಬಯಿ ಕರ್ನಾಟಕದ ಜಿಲ್ಲೆಗಳ ಸಮಸ್ಯೆಗಳು ಮತ್ತೊಂದು ಬಗೆಯದ್ದಾಗಿವೆ. ಹೋಲಿಕೆಯಲ್ಲಿ ರಾಜ್ಯದ ಉತ್ತರ ಭಾಗದ ಕೆಲವು ಜಿಲ್ಲೆಗಳು ಹಿಂದುಳಿದಿರುವುದಕ್ಕೆ ವೈಜ್ಞಾನಿಕ ಕಾರಣ ಮತ್ತು ಪರಿಹಾರವನ್ನು ಹುಡುಕಬೇಕು. ಅದನ್ನು ಬಿಟ್ಟು ರಾಜಕೀಯ ಕಾರಣಗಳಿಗಾಗಿ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಿದರೆ ಹೈದ್ರಾಬಾದ್ ಕರ್ನಾಟಕವನ್ನು ಪ್ರತ್ಯೇಕಗೊಳಿಸಬೇಕು ಎಂಬ ಬೇಡಿಕೆಯೂ ಹುಟ್ಟಿಕೊಳ್ಳುತ್ತದೆ’ ಎಂದು ಪ್ರತಿಪಾದಿಸಿದ್ದಾರೆ.

‘ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರವಾರು ಅಭಿವೃದ್ಧಿ ಅನುದಾನ ಉತ್ತರ–ದಕ್ಷಿಣದ ಭೇದವಿಲ್ಲದೆ ಬಿಡುಗಡೆಯಾಗುತ್ತಿದೆ. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ರಚಿಸಿ ನೀಡಿದ ಅನುದಾನ, ನಂಜುಂಡಪ್ಪ ವರದಿ ಆಧರಿಸಿ ಬಿಡುಗಡೆ ಮಾಡಿದ ಅನುದಾನ ಹಾಗೂ ಮುಂಬಯಿ ಕರ್ನಾಟಕಕ್ಕೆ ನೀಡಿದ ವಿಶೇಷ ಅನುದಾನದ ಹಣ ಎಲ್ಲಿ ಹೋಯಿತು’ ಎಂದು ಪ್ರಶ್ನಿಸಿದ್ದಾರೆ.

‘ಪ್ರತ್ಯೇಕ ರಾಜ್ಯಗಳಾದ ಬಳಿಕ ಜಾರ್ಖಂಡ್, ಛತ್ತೀಸ್‌ಘಡ, ಉತ್ತರಖಾಂಡ ಹಾಗೂ ತೆಲಂಗಾಣ ರಾಜ್ಯದ ಜನರ ಪರಿಸ್ಥಿತಿಯೇನಾದರೂ ಬದಲಾಗಿದೆಯೇ? ಖಂಡಿತಾ ಇಲ್ಲ. ಬದಲಾಗಿ ಕೆಲವೇ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಉನ್ನತಸ್ತರಕ್ಕೆ ಸೇರಿದ ಕೈಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಅಧಿಕಾರವಂತರಾದರು’ ಎಂದು ದೂರಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !