ಬುಧವಾರ, ಡಿಸೆಂಬರ್ 11, 2019
27 °C
‘ಅಂಬೇಡ್ಕರ್‌ ಮತ್ತು ಅಹಿಂಸೆ’ ಕುರಿತು ಉಪನ್ಯಾಸ

ಜಾತಿ ಕಾರಣಕ್ಕಾಗಿ ಕೀಳಾಗಿ ಕಾಣುವುದು ಸಲ್ಲ: ಸಾಹಿತಿ ಜಗದೀಶ ಕೊಪ್ಪ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ‘ಜಾತಿಯ ಕಾರಣಕ್ಕಾಗಿ ಒಬ್ಬ ಮನುಷ್ಯನನ್ನು ಕೀಳಾಗಿ ಕಾಣುವುದು ಮತ್ತು ಸಮಾಜದಿಂದ ಬಹಿಷ್ಕರಿಸುವುದು ಇವುಗಳೆರಡೂ ಹಿಂಸೆಯ ಪ್ರತಿರೂಪ ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಪ್ರತಿಪಾದಿಸಿದ್ದರು’ ಎಂದು ಸಾಹಿತಿ ಜಗದೀಶ ಕೊಪ್ಪ ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ದಲಿತ ಅಧ್ಯಯನ ಪೀಠದಿಂದ ಗುರುವಾರ ವಿ.ವಿ.ಯಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ‘ಅಂಬೇಡ್ಕರ್‌ ಮತ್ತು ಅಹಿಂಸೆ’ ಕುರಿತು ಉಪನ್ಯಾಸ ನೀಡಿದರು.

‘ಬುದ್ಧನ ಅಹಿಂಸಾ ತತ್ವಗಳನ್ನು ವ್ಯಕ್ತಿಗತ ನೆಲೆಯಲ್ಲಿ ಅಂಬೇಡ್ಕರ್ ಅವರು ಜಾರಿಗೆ ತಂದಿದ್ದರು. ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಅಳವಡಿಸಿಕೊಂಡಿದ್ದರು. ಪಶ್ಚಿಮ ಬಂಗಾಳದಲ್ಲಿ ನಡೆದಿದ್ದ ಭೀಕರ ನರಹತ್ಯೆಗೆ ಸಾಕ್ಷಿಯಾಗಿದ್ದ ಅಂಬೇಡ್ಕರ್‌ ಅವರ ಮೇಲೆ ಬೌದ್ಧ ಧರ್ಮದ ದಟ್ಟ ಪ್ರಭಾವ ಬೀರಿತ್ತು. ಹಿಂದೂ ಧರ್ಮದಲ್ಲಿದ್ದ ಅಸ್ಪೃಶ್ಯತೆ, ತಾರತಮ್ಯದಿಂದ ಬೇಸತ್ತಿದ್ದ ಅವರು ಆ ಧರ್ಮ ತ್ಯಜಿಸಿ, ಬೌದ್ಧ ಧರ್ಮ ಸ್ವೀಕರಿಸಿದರು. ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ. ಆದರೆ, ಯಾವುದೇ ಕಾರಣಕ್ಕೂ ಹಿಂದೂ ಧರ್ಮದಲ್ಲಿ ಸಾಯಲಾರೆ ಎಂದು ಹೇಳಿದ್ದರು’ ಎಂದು ಅಂಬೇಡ್ಕರ್‌ ಅವರ ಬದುಕಿನಲ್ಲಾದ ತಿರುವುಗಳನ್ನು ನೆನಪಿಸಿದರು.

‘ಅಂಬೇಡ್ಕರ್ ಅವರು ಒಂದು ಸಲ ಬುದ್ಧನನ್ನು ಕಾರ್ಲ್ ಮಾರ್ಕ್ಸ್‌ನೊಂದಿಗೆ ಹೋಲಿಸಿ ಮಾತನಾಡುತ್ತ, ದಲಿತರು ಒಳ್ಳೆಯ ಬದುಕು ಬದುಕಲು ಆಗಲಿಲ್ಲ. ನಾನು ಬದುಕಿರುವಾಗ ಬುದ್ಧ ಮತ್ತು ಧಮ್ಮ ಪುಸ್ತಕ ಪ್ರಕಟವಾಗಲಿಲ್ಲ ಎಂದು ಕಣ್ಣೀರು ಸುರಿಸಿದ್ದರು. ಜಾತಿ ತಾರತಮ್ಯದ ಅವಮಾನಗಳಿಂದ ನೋವುಂಡಿದ್ದ ಅಂಬೇಡ್ಕರ್‌ ಬೌದ್ಧ ಧರ್ಮ ಸ್ವೀಕರಿಸಿ ಹೊಸ ಜೀವನ ಪ್ರಾರಂಭಿಸಿದರು. ಅವರ ಜತೆಗೆ ಅವರ ಅನೇಕ ಬೆಂಬಲಿಗರು, ಅಭಿಮಾನಿಗಳು ಬೌದ್ಧ ಧರ್ಮ ಸ್ವೀಕರಿಸಿದರು. ಆದರೂ ಬಹುದೊಡ್ಡ ವರ್ಗವೊಂದು ಅಸ್ಪೃಶ್ಯತೆಯಲ್ಲಿಯೇ ತೊಳಲಾಟ ನಡೆಸುತ್ತಿರುವುದನ್ನು ಕಂಡು ಮರಗುತ್ತಿದ್ದರು’ ಎಂದು ಅಂದಿನ ಸನ್ನಿವೇಶದ ಮೇಲೆ ಬೆಳಕು ಚೆಲ್ಲಿದರು.

‘ನಾವು ಬದುಕುತ್ತಿರುವ ವರ್ತಮಾನ ನಮ್ಮದಲ್ಲ. ನಮ್ಮ ಇಡೀ ಬದುಕನ್ನು ನಿಯಂತ್ರಿಸುವ ಅಗೋಚರ ಶಕ್ತಿಯೊಂದು ಕೆಲಸ ಮಾಡುತ್ತಿದೆ. ನಮ್ಮ ಗ್ರಹಿಕೆ, ನೋಟ ಬದಲಾಗಬೇಕಾಗಿದೆ. ಚರಿತ್ರೆ ಮುರಿದು ಹೊಸದಾಗಿ ಕಟ್ಟುವ ಅಗತ್ಯವಿದೆ’ ಎಂದು ಹೇಳಿದರು.

ಬೆಂಗಳೂರಿನ ಬೌದ್ಧ ಭಿಕ್ಕು ಭಂತೆ ಮಾತಾ ಮೈತ್ರೇಯಾ ಮಾತನಾಡಿ, ‘ಬುದ್ಧ ಎಂದರೆ ಪ್ರಜ್ಞೆ. ಆ ಪ್ರಜ್ಞೆಗೆ ನಾವು ಶರಣು ಹೋಗಬೇಕು. ಪ್ರಬುದ್ಧ ಭಾರತ ಎಂದರೆ ಪ್ರಜ್ಞಾಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮಾನವೀಯ ಪ್ರಜೆಗಳಾಗಬೇಕು. ಎಲ್ಲ ಧರ್ಮಗಳಲ್ಲೂ ಪ್ರೀತಿಸುವ ತತ್ವ ಇದೆ. ಸೋಲಿಲ್ಲದ ಏಕೈಕ ಮಾರ್ಗವೆಂದರೆ ಧ್ಯಾನಮಾರ್ಗ’ ಎಂದು ಹೇಳಿದರು.

ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಮಾತನಾಡಿ, ‘ನಮ್ಮ ನಡುವಿರುವ ಮತೀಯ ಶಕ್ತಿಗಳು ಯುವಜನಾಂಗವನ್ನು ಚರಿತ್ರೆಯಿಂದ ದೂರ ಕೊಂಡೊಯ್ಯುತ್ತಿವೆ. ಬುದ್ಧ, ಅಂಬೇಡ್ಕರ್‌ ಅವರನ್ನು ಮತ್ತೆ ಕರೆ ತಂದು ಅವರನ್ನು ಎಚ್ಚರಿಸಬೇಕಿದೆ’ ಎಂದು ತಿಳಿಸಿದರು.

ಕುಲಸಚಿವ ಮಂಜುನಾಥ ಬೇವಿನಕಟ್ಟಿ, ಪೀಠದ ಸಂಚಾಲಕ ವೆಂಕಟಗಿರಿ ದಳವಾಯಿ, ಸಂಶೋಧನಾ ವಿದ್ಯಾರ್ಥಿಗಳಾದ ಸಾವಿತ್ರಿ ಹಿರೇಮಠ, ಶಿವು ಎಸ್‌. ಮುದಿಯಜ್ಜನವರ ಇದ್ದರು. ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿಗಳು ಬುದ್ಧಂ, ಶರಣಂ, ಗಚ್ಛಾಮಿ ಹಾಡು ಪ್ರಸ್ತುತಪಡಿಸಿದರು. ಇದಕ್ಕೂ ಮುನ್ನ ಎರಡು ನಿಮಿಷ ಮೌನ ಆಚರಿಸಿ, ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು