ಸಮುದ್ರ ಪಾಲಾಗುವ ನೀರಿಗಿಲ್ಲ ಯೋಜನೆ

7
ಜಲಾಶಯದಿಂದ ವ್ಯರ್ಥ ಹರಿದು ಹೋದ 160 ಟಿ.ಎಂ.ಸಿ. ಅಡಿ ನೀರು

ಸಮುದ್ರ ಪಾಲಾಗುವ ನೀರಿಗಿಲ್ಲ ಯೋಜನೆ

Published:
Updated:
Deccan Herald

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಿಂದ ನದಿಗೆ ಹರಿದು ಹೋಗುವ ನೀರಿನ ಸದ್ಬಳಕೆಗೆ ಸಂಬಂಧಿಸಿದಂತೆ ಸೂಕ್ತ ಯೋಜನೆಗಳನ್ನು ಸರ್ಕಾರ ಜಾರಿಗೆ ತರದ ಕಾರಣ ಅಪಾರ ಪ್ರಮಾಣದ ನೀರು ಸಮುದ್ರ ಪಾಲಾಗುತ್ತಿದೆ.

133 ಟಿ.ಎಂ.ಸಿ. ಅಡಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಅದರ ಶೇಖರಣೆ ಸಾಮರ್ಥ್ಯ 100 ಟಿ.ಎಂ.ಸಿ. ಅಡಿಗೆ ತಗ್ಗಿದೆ. ಅಣೆಕಟ್ಟೆಯಿಂದ ಹೂಳು ತೆಗೆಸುವುದು ಕಷ್ಟ ಸಾಧ್ಯ ಎಂದು ಈಗಾಗಲೇ ತಜ್ಞರು ವರದಿ ನೀಡಿದ್ದಾರೆ.

‘ಜಲಾಶಯದಿಂದ ನದಿಗೆ ಹರಿದು ಹೋಗುವ ನೀರನ್ನು ಸಂಗ್ರಹಿಸಲು ಸಮನಾಂತರ ಜಲಾಶಯ ನಿರ್ಮಿಸಲಾಗುವುದು. ಜತೆಗೆ ಮೂರು ಜಿಲ್ಲೆಗಳ ಕೆರೆ, ಕಟ್ಟೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗುವುದು’ ಎಂದು ಸರ್ಕಾರ ಹೇಳಿದೆ. ಆದರೆ, ಅದು ಹೇಳಿಕೆಯಾಗಿಯೇ ಉಳಿದಿದೆ. ಈ ವಿಷಯವನ್ನು ಅದು ಗಂಭಿರವಾಗಿ ತೆಗೆದುಕೊಂಡು, ಯೋಜನೆ ಜಾರಿಗೆ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎನ್ನುವುದು ರೈತ ಮುಖಂಡರ ಆರೋಪ.

‘ನಾಲ್ಕು ವರ್ಷಗಳ ನಂತರ ಜಲಾಶಯ ಭರ್ತಿಯಾಗಿದೆ. ಈ ಸಲ ಕುಡಿಯುವ ನೀರು, ಕೃಷಿ ಚಟುವಟಿಕೆಗೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಈ ಹಿಂದಿನ ವರ್ಷಗಳಂತೆ ಮುಂದಿನ ವರ್ಷಗಳಲ್ಲಿ ಅಣೆಕಟ್ಟೆ ತುಂಬದಿದ್ದರೆ ಮತ್ತೆ ಸಮಸ್ಯೆ ತಲೆದೋರುತ್ತದೆ. ಸಮಸ್ಯೆ ಸೃಷ್ಟಿಯಾಗುವುದಕ್ಕೂ ಮುನ್ನವೇ ಸರ್ಕಾರ ಸಮುದ್ರ ಪಾಲಾಗುವ ನೀರಿನ ಸಂಗ್ರಹಣೆಗೆ ಒತ್ತು ಕೊಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌ ಆಗ್ರಹಿಸಿದರು.

‘ಸರ್ಕಾರ ಜನಪ್ರಿಯ ಯೋಜನೆಗಳ ಬದಲು ಶಾಶ್ವತವಾದ ನೀರಾವರಿ ಯೋಜನೆಗೆ ಒತ್ತು ಕೊಟ್ಟಿದ್ದರೆ ಅಪಾರ ಪ್ರಮಾಣದ ನೀರು ವ್ಯರ್ಥ ಹರಿದು ಹೋಗುತ್ತಿರಲಿಲ್ಲ. ಜನ ಕಟ್ಟುವ ತೆರಿಗೆ ಹಣವನ್ನು ಜನರ ಕಲ್ಯಾಣಕ್ಕೆ ಉಪಯೋಗಿಸಬೇಕು. ಈಗಾಗಲೇ ಬಹಳ ತಡವಾಗಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.

‘ಹರಿದು ಹೋಗುವ ನೀರು ತಡೆ ಹಿಡಿಯಲು ಸಾಕಷ್ಟು ಯೋಜನೆಗಳನ್ನು ರೂಪಿಸಬಹುದು. ಆದರೆ, ಇಚ್ಛಾಶಕ್ತಿಯ ಕೊರತೆ ಇದೆ. ಒಂದುವೇಳೆ ಮೂರು ಜಿಲ್ಲೆಗಳ ಕೆರೆ, ಕಟ್ಟೆಗಳನ್ನು ತುಂಬಿಸಿದರೆ ಲಕ್ಷಾಂತರ ಹೆಕ್ಟೇರ್‌ ಭೂಮಿ ಹಸಿರಾಗುತ್ತದೆ. ಅಂತರ್ಜಲ ಮಟ್ಟ ವೃದ್ಧಿಸುತ್ತದೆ’ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು.

‘ಕಾಲುವೆಗಳ ಮೂಲಕವೂ ಕೆರೆ, ಕಟ್ಟೆಗಳನ್ನು ತುಂಬಿಸುವ ಪ್ರಸ್ತಾವ ಇತ್ತು. ಆದರೆ, ಅದು ಮೂಲೆ ಸೇರಿದೆ. ಒತ್ತುವರಿಯಾಗಿರುವ ಜಲಾಶಯದ ಜಾಗ ಕೂಡ ಸ್ವಾಧೀನಕ್ಕೆ ಪಡೆಯಲು ಹಿಂದೇಟು ಹಾಕಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !