ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಿ ಬದುಕಿಗೆ ‘ಅನುಗ್ರಹ’ದ ವರ!

ಸ್ವಾವಲಂಬಿ ಬದುಕು ಕಟ್ಟಿಕೊಂಡ ಯಶೋಗಾಥೆ
Last Updated 8 ಮಾರ್ಚ್ 2018, 4:54 IST
ಅಕ್ಷರ ಗಾತ್ರ

ವಿಜಯಪುರ: ಬದುಕಿನ ಸಂದಿಗ್ಧ ಸಮಯ. ‘ಅನುಗ್ರಹ’ದ ವರದಿಂದ ನೆಮ್ಮದಿಯ ಜೀವನ. ಎರಡೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ. ಎಂಟು ಅಸಹಾಯಕ ಮಹಿಳೆಯರ ಕುಟುಂಬಗಳಿಗೆ ದಾರಿ ದೀಪ...

ಅನಾರೋಗ್ಯಕ್ಕೀಡಾದ ಪತಿಯನ್ನು ಕಳೆದುಕೊಂಡ ಬಳಿಕ ಹೋಟೆಲ್‌ ಉದ್ಯಮದ ಮೂಲಕ ಸ್ವಾವಲಬಿ ಬದುಕು ಕಟ್ಟಿಕೊಂಡ ಭಾರತಿ ಮ್ಯಾಗೇರಿ ಅವರ ಜೀವನದ ಯಶೋಗಾಥೆಯಿದು.

ನಗರದ ಮೀನಾಕ್ಷಿ ಚೌಕ್‌ನಲ್ಲಿ ಬದುಕಿಗಾಗಿ ತಳ್ಳು ಗಾಡಿಯಲ್ಲಿ ‘ಅನುಗ್ರಹ’ ಹೋಟೆಲ್ ಆರಂಭಿಸಿದ ಭಾರತಿ ಇದೀಗ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ದುಡಿಯುವ ವರ್ಗದ ಮಹಿಳೆಯರ ಪಾಲಿಗೆ ಆದರ್ಶವಾಗಿದ್ದಾರೆ. ಭರವಸೆಯ ಹೊಂಗಿರಣವಾಗಿ ಹೊರಹೊಮ್ಮಿದ್ದಾರೆ.

‘ಮದ್ಯ ವ್ಯಸನಿಯಾಗಿದ್ದ ಪತಿ ಅನಾರೋಗ್ಯಕ್ಕೀಡಾದ ಸಂದರ್ಭ ಚಿಕಿತ್ಸೆಗಾಗಿ ₹ 70 ಸಾವಿರ ಸಾಲ ಮಾಡಿದ್ದೆ. ಆದರೂ ಉಳಿಯಲಿಲ್ಲ. ಒಂದೆಡೆ ಸಾಲದ ಭಾರ. ಇನ್ನೊಂದೆಡೆ ಬದುಕಿನ ದೋಣಿ ಮುಳುತ್ತಿರುವ ಆತಂಕ. ಅತಂತ್ರ ಸ್ಥಿತಿಯಲ್ಲಿ ಹೆಣ್ಣು ಮಕ್ಕಳನ್ನು ಸಾಕುವುದು ಹೇಗೆ ಎಂದು ಚಿಂತಿತಳಾಗಿದ್ದೆ. ಸಂಬಂಧಿಕರು, ಆಪ್ತರು ಸೇರಿದಂತೆ ಯಾರೊಬ್ಬರೂ ಕೈ ಹಿಡಿಯಲಿಲ್ಲ.

ಇಂಥಹ ಸಂಕಷ್ಟದ ಕಾಲದಲ್ಲಿ ಹಮೀದಣ್ಣ ನೆರವಿಗೆ ನಿಂತರು. ಮೀನಾಕ್ಷಿ ಚೌಕ್‌ನ ಬೀದಿ ಬದಿ ಹೋಟೆಲ್‌ ನಡೆಸಲು ಸಹಕಾರ ನೀಡಿದರು. ಅವರ ಉಪಕಾರದಿಂದಲೇ ನನ್ನ ಬದುಕು ಸ್ವಾವಲಂಬಿಯಾಯ್ತು. ಇದೀಗ ನನ್ನಿಬ್ಬರು ಹೆಣ್ಣು ಮಕ್ಕಳು ಎಷ್ಟೇ ವಿದ್ಯಾಭ್ಯಾಸ ಪಡೆದರೂ, ಕೊಡಿಸಲು ನಾ ಸಿದ್ಧಳಾಗಿದ್ದೇನೆ. ಜತೆಗೆ ಎಂಟು ಮಂದಿಯ ಬದುಕಿಗೆ ಆಸರೆಯ ನೆರಳಾಗಿರುವುದು ನನ್ನ ಮನಸ್ಸಿನ ನೆಮ್ಮದಿಗೆ ಕಾರಣವಾಗಿದೆ’ ಎಂದು ಭಾರತಿ ತಮ್ಮ ಯಶೋಗಾಥೆಯ ಚಿತ್ರಣವನ್ನು ‘ಪ್ರಜಾವಾಣಿ’ ಬಳಿ ಎಳೆ ಎಳೆಯಾಗಿ ಬಿಚ್ಚಿಟ್ಟರು.

ಅಬಲೆಯರಿಗೆ ನೆರವಿನ ಹಸ್ತ..!: ‘ನನ್ನ ಜತೆ ಎಂಟು ಮಹಿಳೆಯರು ಅಹೋರಾತ್ರಿ ದುಡಿಯುತ್ತಿದ್ದಾರೆ. ಇವರಲ್ಲಿ ನಾಲ್ವರು ನನ್ನಂತೆಯೇ ವಿಧವೆಯರಿದ್ದಾರೆ. ತಲಾ ಮೂವರು ಮಕ್ಕಳ ಜವಾಬ್ದಾರಿ ಅವರ ಹೆಗಲಿಗಿದೆ. ಇಂಥಹ ಬಡಪಾಯಿಗಳು ನನ್ನ ಜತೆ ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವುದನ್ನು ನೆನೆಸಿಕೊಂಡರೇ ಕರುಳು ಕಿತ್ತು ಬಂದಂತಾಗುತ್ತದೆ’ ಎಂದು ಮ್ಯಾಗೇರಿ ಗದ್ಗದಿತರಾದರು.

‘ಬಡತನ ಎಷ್ಟು ಘೋರ ಎಂಬುದು ನನಗೆ ಚೆನ್ನಾಗಿ ಅರಿವಾಗಿದೆ. ಅದಕ್ಕಾಗಿಯೇ ₹ 30ಕ್ಕೆ ಎಲ್ಲರಿಗೂ ಹೊಟ್ಟೆ ತುಂಬಾ ಊಟ ಕೊಡುತ್ತೇನೆ. ಬೆಳಿಗ್ಗೆ ₹ 10ಕ್ಕೆ ಸಿಂಗಲ್‌ ದೋಸಾ, ₹ 15ಕ್ಕೆ ಡಬಲ್‌ ದೋಸಾ. ದೊಡ್ಡ ಅಧಿ ಕಾರಿಗಳು ಇಲ್ಲಿಗೆ ಊಟಕ್ಕೆ ಬರುತ್ತಾರೆ’ ಎಂದು ಭಾರತಿ ಹೇಳಿದರು.

**

ಪತಿಯ ನಿಧನದ ಬಳಿಕ ‘ಅನುಗ್ರಹ’ದ ಕೃಪೆಯಿಂದ ಇಬ್ಬರು ಮಕ್ಕಳ ಜತೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದು, ಎಂಟು ಮಹಿಳೆಯರಿಗೆ ಕೆಲಸ ನೀಡಿರುವೆ.

-ಭಾರತಿ ಮ್ಯಾಗೇರಿ, ಹೋಟೆಲ್‌ ಒಡತಿ

**

‘ಅನುಗ್ರಹ’ ನಮ್ಮ ಪಾಲಿಗೆ ಮನೆಯಿದ್ದಂತೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕಾರಿ. ಕೆಲವೊಮ್ಮೆ ಕಡಿಮೆ ಹಣವಿದ್ದರೂ ಪಡೆದು ಊಟ ಕೊಡ್ತಾರೆ.
-ಸಂದೀಪ ಬೂದಿಹಾಳ, ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT