ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂಕೋರ್ಟ್‌ ಆದೇಶಕ್ಕಿಲ್ಲ ಕಿಮ್ಮತ್ತು

ನಡು ರಸ್ತೆಯಲ್ಲೇ ಬೇಕಾಬಿಟ್ಟಿ ಪಟಾಕಿ ಸುಡುತ್ತಿರುವ ಜನ
Last Updated 10 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಹೊಸಪೇಟೆ: ಪಟಾಕಿಗಳನ್ನು ಸಿಡಿಸಲು ಸುಪ್ರೀಂಕೋರ್ಟ್‌ ಸಮಯದ ನಿರ್ಬಂಧ ಹೇರಿದೆ. ಆದರೆ, ಅದು ಅನುಷ್ಠಾನಕ್ಕೆ ಬಂದಿಲ್ಲ. ಜನ ಸ್ವೇಚ್ಛಾಚಾರದಿಂದ ವರ್ತಿಸುತ್ತಿದ್ದು, ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ.

‘ರಾತ್ರಿ ಎಂಟರಿಂದ ಹತ್ತು ಗಂಟೆಯ ವರೆಗೆ ಪಟಾಕಿಗಳನ್ನು ಸುಡಬೇಕು. ಸಮಯ ಮೀರಿ ಪಟಾಕಿ ಸುಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸುಪ್ರೀಂಕೋರ್ಟ್‌ ಬಹಳ ಸ್ಪಷ್ಟವಾದ ಶಬ್ದಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಆದರೆ, ಬೆಳಕಿನ ಹಬ್ಬ ದೀಪಾವಳಿಯಿಂದ ಇದುವರೆಗೆ ಎಲ್ಲೆಡೆ ಪಟಾಕಿಗಳನ್ನು ಮನಬಂದಂತೆ ಸುಡಲಾಗುತ್ತಿದೆ. ಯಾರು ಸಮಯ ಪಾಲಿಸುತ್ತಿಲ್ಲ. ಯಾರೊಬ್ಬರೂ ಅದನ್ನು ತಡೆಯುವ ಗೋಜಿಗೆ ಹೋಗಿಲ್ಲ.

ಸಾರ್ವಜನಿಕರಿಗೆ ಕಿರಿಕಿರಿಯಾಗದಂತೆ ಪಟಾಕಿ ಹೊಡೆಯಬೇಕು. ಅದನ್ನು ಕೂಡ ಯಾರೂ ಮಾಡುತ್ತಿಲ್ಲ. ಮುಖ್ಯರಸ್ತೆ, ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯಭಾಗದಲ್ಲಿಯೇ ಪಟಾಕಿಗಳನ್ನು ಜನ ಹೊಡೆಯುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳು ಪಟಾಕಿಗಳ ಸದ್ದಿನ ಆರ್ಭಟಕ್ಕೆ ಹೆದರಿಕೊಂಡು, ಆತಂಕದಲ್ಲಿ ಓಡಾಡುತ್ತಿದ್ದಾರೆ.

ಎಷ್ಟೋ ಕಡೆಗಳಲ್ಲಿ ವಾಹನಗಳನ್ನು ನಡು ರಸ್ತೆಯಲ್ಲೇ ತಡೆದು ಪಟಾಕಿಗಳನ್ನು ಸುಡುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಹೀಗಿದ್ದರೂ ಸಂಬಂಧಿಸಿದವರು ಅವರನ್ನು ತಡೆಯಲು ಮುಂದಾಗುತ್ತಿಲ್ಲ.

ಕೆಟ್ಟು ಹೋದ ಪರಿಸರ:ನರಕ ಚತುದರ್ಶಿಯಿಂದ ಸತತವಾಗಿ ನಗರದ ಎಲ್ಲ ಬಡಾವಣೆಗಳಲ್ಲಿ ಅಪಾರ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸುತ್ತಿರುವ ಕಾರಣ ನಗರದ ಪರಿಸರ ಸಂಪೂರ್ಣ ಹಾಳಾಗಿದೆ. ಎಲ್ಲಿ ನೋಡಿದರಲ್ಲಿ ದಟ್ಟ ಕಪ್ಪು ಹೊಗೆ ಕಾಣಿಸಿಕೊಳ್ಳುತ್ತಿದೆ. ಎಲ್ಲೂ ಶುದ್ಧ ಗಾಳಿ ಸಿಗುತ್ತಿಲ್ಲ. ಈ ಕಾರಣಕ್ಕಾಗಿಯೇ ಅನೇಕ ಜನ ಬೆಳಿಗ್ಗೆ ಹಾಗೂ ಸಂಜೆ ವಾಯು ವಿಹಾರಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ.

‘ನಗರದಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್‌ಗಾಗಿ ಬಹುತೇಕ ರಸ್ತೆಗಳನ್ನು ಅಗೆಯಲಾಗಿದೆ. ದೂಳಿನಿಂದ ಈಗಾಗಲೇ ಜನರ ನೆಮ್ಮದಿ ಹಾಳಾಗಿದೆ. ಈಗ ಪಟಾಕಿಗಳಿಂದ ಪರಿಸರ ಸಂಪೂರ್ಣ ಕಲುಷಿತಗೊಂಡಿದೆ. ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ’ ಎನ್ನುತ್ತಾರೆ ವಕೀಲ ಯೂಸುಫ್‌ ಪಟೇಲ್‌.

‘ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಬಾರದು ಎಂದು ಸುಪ್ರೀಂಕೋರ್ಟ್‌ ಪಟಾಕಿ ಹೊಡೆಯುವುದಕ್ಕೆ ಸಮಯದ ಕಟ್ಟಳೆ ಹೇರಿದೆ. ಹೀಗಿದ್ದರೂ ಯಾರೊಬ್ಬರು ಅದನ್ನು ಪಾಲಿಸುತ್ತಿಲ್ಲ. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ದೂರಿದರು.
ಈ ಸಂಬಂಧ ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಅವರನ್ನು ಸಂಪರ್ಕಿಸಿದಾಗ ಅವರು ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT