ಪತ್ರಕರ್ತರಲ್ಲ, ಇಡೀ ಸಮಾಜ ಭ್ರಷ್ಟ

7
ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ಮಟ್ಟು ಹೇಳಿಕೆ

ಪತ್ರಕರ್ತರಲ್ಲ, ಇಡೀ ಸಮಾಜ ಭ್ರಷ್ಟ

Published:
Updated:
ಹೊಸಪೇಟೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ಮಟ್ಟು ಮಾತನಾಡಿದರು–ಪ್ರಜಾವಾಣಿ ಚಿತ್ರಗಳು

ಹೊಸಪೇಟೆ: ‘ಪತ್ರಕರ್ತರಷ್ಟೇ ಅಲ್ಲ ಇಡೀ ಸಮಾಜ ಭ್ರಷ್ಟವಾಗಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಸೇರಿದಂತೆ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶುದ್ಧೀಕರಣ ಆಗಬೇಕಾದರೆ ಇಡೀ ವ್ಯವಸ್ಥೆಯ ಶುದ್ಧೀಕರಣ ಆಗಬೇಕು’ ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ಮಟ್ಟು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಘಟಕದಿಂದ ಭಾನುವಾರ ನಗರ ಹೊರವಲಯದ ಗುಂಡಾ ಸಸ್ಯೋದ್ಯಾನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ, ‘ಪತ್ರಕರ್ತರ ಸ್ಥಿತಿಗತಿ ಹಾಗೂ ಸವಾಲುಗಳು’ ಕುರಿತು ಉಪನ್ಯಾಸ ನೀಡಿದರು.

‘ಪತ್ರಕರ್ತರು ಹಾಗೂ ಮಾಧ್ಯಮಗಳಿಗೆ ಸಾಮಾಜಿಕ ಜವಾಬ್ದಾರಿ, ಬದ್ಧತೆ ಇರಬೇಕೆಂದು ಜನ ಬಯಸುತ್ತಾರೆ. ಆದರೆ, ಅವರು ತೊಡಗಿಸಿಕೊಂಡಿರುವ ವೃತ್ತಿ ಇತರೆ ಕ್ಷೇತ್ರಗಳಲ್ಲಿ ಇದನ್ನು ಬಯಸುವುದಿಲ್ಲ. ಎಲ್ಲರೂ ಬದ್ಧತೆಯಿಂದ ಕೆಲಸ ನಿರ್ವಹಿಸಿದರಷ್ಟೇ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯ’ ಎಂದು ತಿಳಿಸಿದರು.

‘ಮಾಧ್ಯಮ ಜಗತ್ತು ವೃತ್ತಿ ಬದಲಾಗಿ ಉದ್ಯಮದ ಸ್ವರೂಪ ಪಡೆದುಕೊಳ್ಳುತ್ತಿದೆ. ಸುಳ್ಳು ಸುದ್ದಿಗಳು ವಿಜೃಂಭಸುತ್ತಿವೆ. ಅದು ಬದಲಾಗಬೇಕಾದರೆ ಮಾಧ್ಯಮ ಮೊದಲಿನಂತೆ ವೃತ್ತಿಯಾಗಿ ಮಾರ್ಪಾಡು ಹೊಂದಬೇಕು. ಇತ್ತೀಚಿನ ಕೆಲವು ವರ್ಷಗಳಿಂದ ಮಾಧ್ಯಮವನ್ನು ಬಂಡವಾಳಷಾಹಿಗಳು, ಪ್ರಭುತ್ವ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಪತ್ರಕರ್ತರು, ಮಾಧ್ಯಮಗಳ ಮಾಲೀಕರು ರಾಜಿಯಿಂದ ಮುನ್ನಡೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಇದು ಅಪಾಯಕಾರಿ ಬೆಳವಣಿಗೆ’ ಎಂದರು.

‘ಪತ್ರಕರ್ತ, ಮಾಲೀಕ, ಓದುಗ ಪತ್ರಿಕೋದ್ಯಮದ ಆಧಾರ ಸ್ತಂಭಗಳು. ಈ ಮೂರು ವರ್ಗಗಳಲ್ಲಿ ಬದಲಾವಣೆ ಆಗಿದೆ. ಹಾಗೆಯೇ ಪತ್ರಿಕೋದ್ಯಮದಲ್ಲಿ ಸಹಜವಾಗಿ ಬದಲಾವಣೆ ಉಂಟಾಗಿದೆ. ತಂತ್ರಜ್ಞಾನ ಪ್ರವೇಶಿಸಿದ ನಂತರ ಅದರ ಸ್ವರೂಪ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಹೊಂದಿದೆ’ ಎಂದು ಹೇಳಿದರು.

‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಅವಕಾಶಗಳು ಕಡಿಮೆಯಾಗಿಲ್ಲ. ಆದರೆ, ಪತ್ರಕರ್ತರು ಸುಖಿ, ಸಂತೃಪ್ತರು ಆಗಬೇಕಿತ್ತು. ಆದರೆ, ಅದು ಆಗಿಲ್ಲ. ಪತ್ರಿಕಾ ದಿನ ಆತ್ಮಾವಲೋಕನದ ಸಭೆ ಆಗಬೇಕು’ ಎಂದು ನುಡಿದರು. ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ, ‘ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪತ್ರಕರ್ತರನ್ನು ಹೊರತುಪಡಿಸಿದರೆ ಮಿಕ್ಕುಳಿದ ಪತ್ರಕರ್ತರು ಅತಿ ಕಡಿಮೆ ಸಂಬಳದಲ್ಲಿ ಜೀವನ ನಡೆಸುತ್ತಿದ್ದಾರೆ. ಅವರ ಕುಟುಂಬದವರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅನೇಕ ಪತ್ರಕರ್ತರಿಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಎಲ್ಲ ಪತ್ರಕರ್ತರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಬೇಕು’ ಎಂದು ಆಗ್ರಹಿಸಿದರು.

ಪ್ರಾದೇಶಿಕ ವಲಯ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ. ಮೋಹನ್‌, ವಲಯ ಅರಣ್ಯ ಸಂರಕ್ಷಣಾಧಿಕಾರಿ ಎಂ. ನಾಗರಾಜ್‌, ನಗರಸಭೆ ಅಧ್ಯಕ್ಷೆ ನಾಗಲಕ್ಷ್ಮಮ್ಮ, ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಬಿ. ಕುಮಾರಸ್ವಾಮಿ ಇದ್ದರು. ಪತ್ರಿಕಾ ದಿನದ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !