ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆ ಕಟ್ಟಿ ತೊಟ್ಟಿಲು ಕಟ್ಟಿ

Last Updated 11 ಮೇ 2018, 19:30 IST
ಅಕ್ಷರ ಗಾತ್ರ

ಒಮ್ಮೆ ನಮ್ಮ ಚಿಕಿತ್ಸಾಲಯಕ್ಕೆ ಒಬ್ಬ ಅಜ್ಜಿ ತನ್ನ ಮೊಮ್ಮಗಳನ್ನು ಕರೆದುಕೊಂಡು ಬಂದಿದ್ದಳು. ಅವರನ್ನು ‘ಏನು ತೊಂದರೆ?’ ಎಂದೆ. ಅದಕ್ಕೆ ಆಕೆ ‘ನನ್ನ ಮಗು ಹಾಲು ಕುಡಿದ ಕೂಡಲೇ ಕಕ್ಕುತ್ತಿದೆ, ಅದಕ್ಕೆ ಔಷಧ ಕೇಳಲು ಬಂದೆ’ ಎಂದಳು. ಅದಕ್ಕೆ ಅಜ್ಜಿ ‘ನಾನು ಹೇಳ್ತಾನೇ ಇರ್ತೀನಿ ಡಾಕ್ಟ್ರೇ, ಮೊದಲು ಹೊಟ್ಟೆ ಕಟ್ಟಿ ಆಮೇಲೆ ತೊಟ್ಟಿಲು ಕಟ್ಟು ಅಂತಾ. ಅದ್ರೆ ಇವ್ಳು ಕೇಳಲ್ಲ. ಒಳ್ಳೇದು, ಒಳ್ಳೇದು ಅಂತಾ ಸಿಕ್ಕಿದ್ದೆಲ್ಲಾ ತಿಂತಾಳೇ. ಆ ಮಗೂಗೆ ಜೀರ್ಣ ಆಗೋದು ಬೇಡ್ವಾ ಡಾಕ್ಟ್ರೇ?....’ - ಹೀಗೆ ಒಂದೇ ಸಮನೆ ಅಜ್ಜಿ ಮಾತಾಡ್ತಾ ಇತ್ತು.

ಅಷ್ಟರಲ್ಲಿ ಒಂದು ಪೋನ್ ಬಂತು, ‘ಮೇಡಂ, ನನ್ನ ಮಗು ಹೊಟ್ಟೆ ಉಬ್ಬರ ಬಂದು ಒಂದೇ ಸಮನೆ ಅಳ್ತಾ ಇದೆ, ಈಗ ಬಂದ್ರೆ ನೀವು ಸಿಕ್ತೀರಾ? ಬರ್ಲಾ?’ ಅಂತ. ಯಾಕೆ ಏನಾಯ್ತೂಂತ ವಿಚಾರಿಸಿದರೆ ಹಿಂದಿನ ದಿನ ಅಮ್ಮ ಯಾವುದೋ ಪಾರ್ಟಿಗೆ ಹೋಗಿ, ಪಾವ್‌ಬಾಜಿ, ಐಸ್‌ಕ್ರೀಂ, ಸಲಾಡ್ – ಇತ್ಯಾದಿ ಇನ್ನೂ ಅನೇಕ ಆಹಾರಗಳನ್ನು ರಾತ್ರಿ 10ರಿಂದ 10.30ರ ನಡುವೆ ತಿಂದಿದ್ದಳಂತೆ. ರಾತ್ರಿ ಮಲಗುವಾಗ ಸುಮಾರು 1ಗಂಟೆ ಆಗಿತ್ತು.

ಈ ಎಲ್ಲ ಸಂದರ್ಭಗಳಲ್ಲಿಯೂ ತಾಯಿಯ ಆಹಾರ, ನಿದ್ರೆ – ಇವುಗಳಲ್ಲಿನ ವ್ಯತ್ಯಾಸ ತಾಯಿಯ ಆರೋಗ್ಯದಲ್ಲಿ ಹೆಚ್ಚು ಬದಲಾವಣೆ ತರದಿದ್ದರೂ, ಅಂತಹ ಆಹಾರಸೇವನೆಯಿಂದ ಉತ್ಪನ್ನವಾದ ಹಾಲನ್ನು ಸೇವಿಸಿದ ಮಗು ಅನಾರೋಗ್ಯಕ್ಕೆ ತುತ್ತಾಗಿತ್ತು. ಇಲ್ಲೆಲ್ಲಾ ಸಾಮಾನ್ಯವಾಗಿ ಯಾರೂ ತಾಯಿಯ ಆಹಾರ ಮತ್ತು ದಿನಚರಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ. ಮಗುವಿಗೆ ಮಾತ್ರ ಔಷಧವನ್ನು ಕೊಡಲು ಪ್ರಯತ್ನಿಸುತ್ತಾರೆ. ಆದರೆ ಮಗುವಿನ ಜೊತೆಗೆ ತಾಯಿಯ ಆರೋಗ್ಯದ ಕಡೆಗೂ ಗಮನ ಕೊಡುವುದು ಅನಿವಾರ್ಯ. ತಾಯಿಯ ಹಾಲನ್ನು ಶುದ್ಧಿಯಾಗುವಂತೆ ಚಿಕಿತ್ಸೆ ಮಾಡುವುದೂ ಅನಿವಾರ್ಯ.

ಆ ಅಜ್ಜಿ ಹೇಳಿದಂತೆ, ‘ಮೊದಲು ಹೊಟ್ಟೆ ಕಟ್ಟಿ ಆಮೇಲೆ ತೊಟ್ಟಿಲು ಕಟ್ಟಬೇಕು’ ಎನ್ನುವ ಗಾದೆ ಎಷ್ಟು ವಾಸ್ತವಿಕ ಎನಿಸುತ್ತಿತ್ತು. ಅಂದರೆ ಒಂದು ಆರೋಗ್ಯವಂತ ಮಗುವನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಡಬೇಕಾದರೆ ತಾಯಿಯ ಜವಾಬ್ದಾರಿ ಎಷ್ಟಿರುತ್ತದೆ ಎಂಬುದನ್ನು ಈ ಗಾದೆ ಸೂಚಿಸುತ್ತದೆ. ತಾಯಿಯ ಎದೆಹಾಲು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಎಂತಹ ಹಾಲು ಎಂಬುದರ ಬಗ್ಗೆ ಮಾತ್ರ ಯಾರೂ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಆಯುರ್ವೇದದಲ್ಲಿ ತಾಯಿಯ ಹಾಲನ್ನು ಪರೀಕ್ಷೆ ಮಾಡುವ ಅತಿ ಸುಲಭವಾದ ವಿಧಾನಗಳನ್ನು ತಿಳಿಸಿದೆ. ಶುದ್ಧವಾದ ಗಾಜಿನ ಲೋಟದಲ್ಲಿ ಶುದ್ಧವಾದ ನೀರನ್ನು ಅಲುಗಾಡಿಸದಂತೆ ಇಟ್ಟು ಅದಕ್ಕೆ ಒಂದು ಚಮಚದಷ್ಟು ತಾಯಿಯ ಹಾಲನ್ನು ಸೇರಿಸಿದರೆ ಅದು ಮುಳುಗಿ ತಳ ಸೇರಿದರೆ ತಾಯಿಯ ಹಾಲಿನಲ್ಲಿ ಕಫ ಹೆಚ್ಚಾಗಿದೆ ಎಂದೂ, ಮೇಲೆಯೇ ತೇಲುತ್ತಿದ್ದರೆ ವಾಯುವು ಹೆಚ್ಚಿದೆ ಎಂದೂ, ಮೇಲೂ ಇರದೆ ಕೆಳಗೂ ಹೋಗದೆ ಮಧ್ಯದಲ್ಲಿ ಇದ್ದರೆ ಪಿತ್ತ ಹೆಚ್ಚಾಗಿರುವುದೆಂದೂ, ಸರಿಯಾಗಿ ಮಿಶ್ರವಾಗಿ ನೀರಿನೊಂದಿಗೆ ಸಮ್ಮಿಲನವಾದರೆ ಅದು ಶುದ್ದವಾದ ಹಾಲು ಎಂದು ಪರಿಗಣಿಸಬೇಕು. ದೋಷಪೂರಿತ ಹಾಲುಗಳು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬದಲು ಕುಗ್ಗಿಸುತ್ತದೆ. ಆದ್ದರಿಂದ ಆರೋಗ್ಯಕರ ಮಗುವಿನ ಬೆಳವಣಿಗೆಗೆ ತಾಯಿಯು ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.

‘ಮಗು ಹುಟ್ಟಿದ ಮೇಲೆ ಮಗುವಿಗೆ ಎಲ್ಲ ರೀತಿಯ ಚುಚ್ಚುಮದ್ದನ್ನು ಹಾಕಿಸಿದೀನಿ ಡಾಕ್ಟ್ರೆ, ಆದರೂ ಮಗು ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತದೆ; ಒಳ್ಳೆ ಆಹಾರವನ್ನೇ ಮಗುವಿಗೆ ಕೊಡುತ್ತೇನೆ. ಆದರೂ ನನ್ನ ಮಗುವಿಗೆ ಯಾವಾಗಲೂ ಏನಾದರೂ ತೊಂದರೆ ಇರುತ್ತದೆ. ಮಗುವಿಗೆ ವಿಪರೀತ ಸಿಟ್ಟು, ಅಥವಾ ಭಯ; ಮಗು ವಿಪರೀತ ಹಟ ಮಾಡುತ್ತೆ; ಹೇಳಿದ ಯಾವ ಮಾತನ್ನೂ ಕೇಳೋದಿಲ್ಲ’ – ಇತ್ಯಾದಿ ಆರೋಪಗಳು, ದೂರುಗಳು ಎಲ್ಲಾ ತಾಯಂದಿರದ್ದೂ ಇರುತ್ತದೆ! ತಾಯಂದಿರೇ ನಿಮ್ಮ ಮಗುವನ್ನು ಬೈಯ್ಯುವ ಮೊದಲು ನೀವು ಗರ್ಭಿಣಿ ಬಾಣಂತಿಯರಿದ್ದಾಗ ಹೇಗಿದ್ದಿರಿ ಎಂಬುದನ್ನು ಗಮನಿಸಿ. ನಿಮ್ಮ ಆಹಾರ, ದಿನಚರ್ಯೆ ಸರಿಯಾಗಿದ್ದರೆ ಮಗುವಿನ ಆರೋಗ್ಯವೂ ನಡುವಳಿಕೆಯೂ ಚೆನ್ನಾಗಿರುತ್ತವೆ.

‘ಸುಶ್ರುತಸಂಹಿತೆ’ಯಲ್ಲಿ ಸ್ಪಷ್ಟವಾಗಿ ಗರ್ಭಿಣಿಯರ ದಿನಚರ್ಯೆ ಹೇಗಿರಬೇಕೆಂಬ ವಿವರಣೆ ಇದೆ. ಗರ್ಭಿಣಿ ಸದಾ ಶಾಂತವಾಗಿ, ಒಳ್ಳೆಯ ಚಿಂತನೆಗಳನ್ನು ಮಾಡುತ್ತಾ, ಒಳ್ಳೆಯ ವಿಷಯಗಳನ್ನು ಕೇಳುತ್ತಾ ಆನಂದವಾಗಿರಬೇಕು, ಬೀಭತ್ಸವಾದ ಪರಿಸರ–ದೃಶ್ಯಗಳನ್ನು ನೋಡುವುದು, ಕೇಳುವುದು, ಚಿಂತನೆ ಮಾಡುವುದು – ಮಕ್ಕಳಲ್ಲಿ ವಿಕೃತ ಮನೋಭಾವವನ್ನು ಉತ್ಪತ್ತಿ ಮಾಡುತ್ತದೆ. ಉದ್ವೇಜಕವಾದ ವಾತಾವರಣ ಅಂತಹ ಕಥಾಶ್ರವಣವೂ ಒಳ್ಳೆಯದಲ್ಲ ಎನ್ನುತ್ತದೆ. ಅಂದರೆ ಕ್ರೈಮ್ ಸ್ಟೋರಿ, ಪೊಲೀಸ್‌ ಡೈರಿ, ಹಾರರ್ ಶೋಗಳನ್ನು ಗರ್ಭಿಣಿ ವೀಕ್ಷಿಸುವುದರಿಂದ, ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಯ ಮೇಲೆ ವಿಕೃತ ಪರಿಣಾಮವನ್ನು ಬೀರುತ್ತದೆ. ದುಷ್ಟಬುದ್ಧಿಯನ್ನು ಪ್ರಚೋದಿಸುವ ಸೀರಿಯಲ್‌ಗಳು ಕೂಡ ಇದಕ್ಕೆ ಹೊರತೇನಲ್ಲ. ಮನೆಯ ವಾತಾವರಣವೂ ಶಾಂತವಾಗಿರುವಂತೆ ನೋಡಿಕೊಳ್ಳುವುದು ಅತ್ಯಂತ ಅವಶ್ಯಕ. ಆಕೆಯ ಆಹಾರವೂ ಶುದ್ಧ, ಸಾತ್ವಿಕ, ಮನಸ್ಸಿಗೆ ಹಿತವಾಗಿರುವಂತೆಯೂ, ಶರೀರದ ದೋಷಗಳನ್ನು ಏರುಪೇರು ಮಾಡದಿರುವಂತೆಯೂ ಇರಬೇಕು. ಅತಿ ತಂಪಾದ ಆಹಾರ, ಹಿಂದಿನ ದಿನದ ಆಹಾರ, ಎರಡು–ಮೂರು ದಿನ ಫಿಜ್ಡ್‌ನಲ್ಲಿಟ್ಟು ಮತ್ತೆ ತಯಾರಿಸಿದ ದೋಸೆ, ಇಡ್ಲಿ ಇತ್ಯಾದಿ ಆಹಾರಪದಾರ್ಥಗಳು, ಅಶುದ್ದವಾದ ಎಣ್ಣೆಯನ್ನು ಬಳಸಿ ತಯಾರಿಸಿದ ಪದಾರ್ಥಗಳು, ಪದೇ ಪದೇ ಆಹಾರವನ್ನು ಸೇವಿಸುತ್ತಿರುವುದು, ಬಸುರಿಯ ಬಯಕೆ ಎಂದು ಅನಾರೋಗ್ಯಕರವಾದ ಜೀರ್ಣಿಸಲು ಕಷ್ಟವಾಗುವಾಗುವ ಆಹಾರಗಳನ್ನು ಸೇವಿಸುವುದು, ವಿಪರೀತ ಮಾನಸಿಕ ಹಾಗೂ ಶಾರೀರಿಕ ಶ್ರಮ, ಅತಿಯಾದ ವ್ಯಾಯಾಮ, ವಿಪರೀತ ಪ್ರಯಾಣ, ರಾತ್ರಿ ನಿದ್ದೆ ಕೆಡುವುದು – ಇವೆಲ್ಲವೂ ಮಗುವಿನ ಆರೋಗ್ಯದ ಮೇಲೆ ವಿಪರೀತ ಪರಿಣಾಮವನ್ನು ಬೀರಿ, ಮಗುವಿನ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತವೆ.

ಆಹಾರ–ವಿಹಾರಗಳಲ್ಲಿ ಕೆಲವು ನಿಯಮಗಳನ್ನು ಹೆರಿಗೆಯ ನಂತರವೂ ಮಗುವಿಗೆ ಹಾಲು ಕುಡಿಸುವವರೆಗೂ ಪಾಲಿಸಬೇಕು. ಈ ವಿಧಿ–ವಿಧಾನಗಳು ಶುದ್ಧಹಾಲಿನ ಉತ್ಪತ್ತಿಗೆ ಕಾರಣವಾಗುತ್ತವೆ. ಬಾಣಂತಿಯು ಹೇಗಿರಬಾರದು, ಹೇಗಿರಬೇಕು ಎಂದು ಕೆಲವು ನಿಯಮಗಳನ್ನು ಚರಕಾಚಾರ್ಯರು ಹೇಳುತ್ತಾರೆ. ಅಜೀರ್ಣ, ಅಸಾತ್ಮ್ಯ, ವಿರುದ್ಧ, ವಿಷಮ ಆಹಾರ, ಪ್ರಮಾಣದಲ್ಲಿ ಹೆಚ್ಚಾದ ಆಹಾರವನ್ನು ಸೇವಿಸುವುದು – ಇವು ತಾಯಿಯ ಹಾಲಿನಲ್ಲಿ ದೋಷವನ್ನು ಉತ್ಪತ್ತಿ ಮಾಡಿ ಹಾಲಿನ ರುಚಿಯನ್ನೇ ಬದಲಾಯಿಸುತ್ತವೆ. ಅತಿಯಾಗಿ ಉಪ್ಪು, ಹುಳಿ, ಖಾರ, ಕ್ಷಾರಯುಕ್ತ ಆಹಾರಗಳ ಸೇವನೆ ಬಾಣಂತಿಗೆ ಮೂಲವ್ಯಾಧಿ, ಅತಿ ರಕ್ತಸ್ರಾವ, ನಿಃಶಕ್ತಿ – ಮೊದಲಾದ ಉಪದ್ರವಗಳನ್ನು ಉಂಟು ಮಾಡಿದರೆ, ಮಗುವಿಗೆ ಅಜೀರ್ಣ, ಹೊಟ್ಟೆ ಉಬ್ಬರ, ಪದೇ ಪದೇ ಸ್ವಲ್ಪ ಸ್ವಲ್ಪ ಮಲಪ್ರವೃತ್ತಿ, ಮಲ–ಮೂತ್ರಪ್ರವೃತ್ತಿ ಮಾಡುವಾಗ ಅಳುವುದು, ಸರಿಯಾಗಿ ಹಾಲು ಕುಡಿಯದಿರುವದು, ನಿದ್ದೆ ಸರಿಯಾಗಿ ಮಾಡದಿರುವುದು – ಮುಂತಾದ ತೊಂದರೆಗಳಿಗೆ ಕಾರಣವಾಗುತ್ತದೆ. ಬಾಣಂತಿಗೆ ಮಾನಸಿಕವಾಗಿ, ಶಾರೀರಿಕವಾಗಿ ಅತಿಯಾದ ಶ್ರಮ, ಚಿಂತೆಯಿಂದ ರಾತ್ರಿ ನಿದ್ದೆ ಮಾಡದಿರುವುದು, ಮಲಮೂತ್ರ ಇತ್ಯಾದಿ ಪ್ರವೃತ್ತಿಗಳನ್ನು ತಡೆಯುವುದು, ಇಲ್ಲವೇ ಮುಂದೆ ತೊಂದರೆ ಆಗದಿರಲೆಂದು ಪ್ರವೃತ್ತಿಯ ಸಂದೇಶ ಬಾರದಿದ್ದರೂ ಬಲವಂತವಾಗಿ ಪ್ರವರ್ತಿಸುವುದು – ಇವೆಲ್ಲವೂ ಬಾಣಂತಿಯ ಮತ್ತು ಮಗುವಿನ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಅನೇಕ ದುಷ್ಪರಿಣಾಮಗಳನ್ನು ಉಂಟುಮಾಡುತ್ತವೆ.

ಆದ್ದರಿಂದಲೇ ‘ಮೊದಲು ಹೊಟ್ಟೆ ಕಟ್ಟಿ ನಂತರ ತೊಟ್ಟಿಲು ಕಟ್ಟು’ ಎನ್ನುವುದು. ಮಕ್ಕಳೇ ನೀವು ಆರೋಗ್ಯವಾಗಿ, ಸದೃಢವಾಗಿ, ಸಮರ್ಥರಾಗಿ ಬೆಳೆದಿದ್ದೀರಿ ಎಂದರೆ ನಿಮ್ಮ ತಾಯಿಯ ತ್ಯಾಗ ಹಾಗೂ ಕೊಡುಗೆಗಳು ನಿಮಗೆ ನೆನಪಿರಲಿ. ಆಕೆಯ ಬಸುರಿ–ಬಾಣಂತಿಯ ಪ್ರವೃತ್ತಿ–ಆಚಾರಗಳು ಇಂದು ನಿಮ್ಮನ್ನು ನೀವಿರುವ ಸ್ಥಿತಿಗೆ ತಂದಿರುತ್ತವೆ. ತಂದೆ–ತಾಯಿಯನ್ನು ಗೌರವಿಸಿ, ಆಧರಿಸಿ, ಅಸಡ್ಡೆ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT