ಶುಕ್ರವಾರ, ಸೆಪ್ಟೆಂಬರ್ 25, 2020
28 °C
ನಡೆಯದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ; ಬಿಕೋ ಎನ್ನುತ್ತಿವೆ ಭತ್ತದ ಗದ್ದೆಗಳು

ಕಾಲುವೆಗಿಲ್ಲ ನೀರು; ರೈತರು ಅತಂತ್ರ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಜುಲೈ ಮುಗಿದು ಆಗಸ್ಟ್‌ ತಿಂಗಳು ಆರಂಭವಾದರೂ ಇದುವರೆಗೆ ತುಂಗಭದ್ರಾ ಜಲಾಶಯದ ಬಲದಂಡೆ ಮೇಲ್ಮಟ್ಟದ ಕಾಲುವೆ (ಎಚ್‌.ಎಲ್‌.ಸಿ.) ಹಾಗೂ ಕೆಳಮಟ್ಟದ ಕಾಲುವೆಗೆ (ಎಲ್‌.ಎಲ್‌.ಸಿ.) ನೀರು ಹರಿಸದ ಕಾರಣ ರೈತರು ಚಿಂತಕ್ರಾಂತರಾಗಿದ್ದಾರೆ.

ಸಾಮಾನ್ಯವಾಗಿ ಪ್ರತಿ ವರ್ಷ ಜಿಲ್ಲೆಯಾದ್ಯಂತ ಜುಲೈ ಆರಂಭದಲ್ಲಿ ರೈತರು ಭತ್ತ ನಾಟಿ ಮಾಡುತ್ತಾರೆ. ಆದರೆ, ಇದುವರೆಗೆ ನೀರು ಹರಿಸದ ಕಾರಣ ಯಾವ ರೈತರು ಭತ್ತ ನಾಟಿ ಮಾಡಲು ಮುಂದಾಗಿಲ್ಲ. ಇದರಿಂದಾಗಿ ಗದ್ದೆಗಳು ಬಯಲಿನಂತೆ ಗೋಚರಿಸುತ್ತಿವೆ.

ಜಿಲ್ಲೆಯಲ್ಲಿ ಎರಡು ಲಕ್ಷ ಎಕರೆಗೂ ಅಧಿಕ ಪ್ರದೇಶದಲ್ಲಿ ರೈತರು ಪ್ರಮುಖ ಬೆಳೆಯಾಗಿ ಭತ್ತ ಬೆಳೆಯುತ್ತಾರೆ. ಅದರ ನಂತರ ಅಲ್ಲಲ್ಲಿ ಕಬ್ಬು, ಬಾಳೆ, ಮೆಣಸಿನಕಾಯಿ ಬೆಳೆಯುತ್ತಾರೆ. ನೀರಾವರಿ ಸೌಲಭ್ಯ ಹೊಂದಿದವರು ಈ ಬೆಳೆಗಳಿಗೆ ಮೊರೆ ಹೋದರೆ, ಕಾಲುವೆ ನೀರನ್ನೇ ಅವಲಂಬಿಸಿದ ರೈತರು ಭತ್ತಕ್ಕಷ್ಟೇ ಸೀಮಿತರಾಗಿದ್ದಾರೆ.

ಜಿಲ್ಲೆಯಾದ್ಯಂತ ಇದುವರೆಗೆ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಆಗಾಗ ತುಂತುರು ಮಳೆಯಷ್ಟೇ ಸುರಿಯುತ್ತಿದೆ. ಆದರೆ, ಭತ್ತಕ್ಕೆ ಯಥೇಚ್ಛ ಪ್ರಮಾಣದಲ್ಲಿ ನೀರು ಬೇಕು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಸಲ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಹೇಳಿಕೊಳ್ಳುವಂತಿಲ್ಲ. ಒಳಹರಿವಿನ ಪ್ರಮಾಣ ಒಂದೇ ಸಮನಾಗಿಲ್ಲ. ಈಗಿನ ಸದ್ಯದ ಪರಿಸ್ಥಿತಿ ನೋಡಿದರೆ ಕಾಲುವೆಗಳಿಗೆ ನೀರು ಹರಿಸುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ಕಾಲುವೆಗಳಿಗೂ ನೀರು ಹರಿಸುವುದಕ್ಕೂ ಮೊದಲು ತುಂಗಭದ್ರಾ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ.) ಸಭೆ ಕರೆದು, ನೀರಿನ ಹಂಚಿಕೆ ಮಾಡಲಾಗುತ್ತದೆ. ಸುಮಾರು 50 ಟಿ.ಎಂ.ಸಿ. ಅಡಿಯಷ್ಟಾದರೂ ನೀರು ಅಣೆಕಟ್ಟೆಯಲ್ಲಿ ಸಂಗ್ರಹವಾದರೆ, ಸಭೆ ಕರೆಯಲಾಗುತ್ತದೆ. ಸದ್ಯ 28 ಟಿ.ಎಂ.ಸಿ. ಅಡಿಯಷ್ಟು ನೀರಿನ ಸಂಗ್ರಹವಿದೆ. ಈಗಿನ ಸನ್ನಿವೇಶದಲ್ಲಿ ಸಭೆ ಕರೆಯುವುದು ಅನುಮಾನ ಎಂದು ತಿಳಿದು ಬಂದಿದೆ. ಇದೇ ವಿಷಯ ರೈತರನ್ನು ಚಿಂತೆಗೀಡು ಮಾಡಿದೆ.

’ಸಮಯ ಮೀರಿದರೆ ಬೆಳೆ ಬೆಳೆಯಲು ಆಗುವುದಿಲ್ಲ. ಕಳೆದ ಕೆಲವು ದಿನಗಳಿಂದ ಜಲಾಶಯಕ್ಕೆ ನಿತ್ಯ ಒಂದರಿಂದ ಒಂದುವರೆ ಟಿ.ಎಂ.ಸಿ. ಅಡಿಯಷ್ಟು ನೀರು ಬರುತ್ತಿದೆ. ಹಾಗಾಗಿ ಭತ್ತ ನಾಟಿಗೆ ಅನುಕೂಲವಾಗುವಂತೆ ಕಾಲುವೆಗಳಿಗೆ ತಕ್ಷಣ ನೀರು ಹರಿಸಬೇಕು. ಇಲ್ಲವಾದಲ್ಲಿ ರೈತರಿಗೆ ಬಹಳ ಸಮಸ್ಯೆಯಾಗುತ್ತದೆ‘ ಎಂದು ಹೊಸೂರಿನ ರೈತ ಹುಲುಗಪ್ಪ ಹೇಳಿದರು.

’ಒಂದೇ ನಿಯಮಕ್ಕೆ ತುಂಗಭದ್ರಾ ಮಂಡಳಿ ಅಂಟಿಕೊಳ್ಳಬಾರದು. ಪರಿಸ್ತಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಬೇಕು. ಆದಷ್ಟು ಶೀಘ್ರ ಸಲಹಾ ಸಮಿತಿ ಸಭೆ ಕರೆದು, ರೈತರ ಸ್ಥಿತಿಗತಿ ತಿಳಿದುಕೊಂಡು ತೀರ್ಮಾನ ಕೈಗೊಳ್ಳಬೇಕು. ಕುಡಿಯುವುದಕ್ಕೆ ಅಗತ್ಯವಾದಷ್ಟು ನೀರನ್ನು ಬಿಟ್ಟು ಉಳಿದ ನೀರು ಕೃಷಿಗೆ ಹರಿಸಲು ಚಿಂತಿಸಬೇಕು. ಇಂತಹ ಸನ್ನಿವೇಶದಲ್ಲಿ ಕಾರ್ಖಾನೆಗಳಿಗೆ ಸದ್ಯದ ಮಟ್ಟಿಗೆ ನೀರು ಹರಿಸಬಾರದು. ರೈತರು ಮೊದಲ ಆದ್ಯತೆಯಾಗಬೇಕು‘ ಎಂದು ನಾಗೇನಹಳ್ಳಿ ರವಿಶಂಕರ್‌ ತಿಳಿಸಿದರು.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.