ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ: ಬೋಧಕ ಹುದ್ದೆ ನೇಮಕಾತಿಗೆ ಅಪಸ್ವರ

Last Updated 13 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು ಬೋಧಕ ಹುದ್ದೆಗಳ ನೇಮಕಾತಿಗೆ ಹೊರಡಿಸಿದ ಅಧಿಸೂಚನೆ ವಿರುದ್ಧ ಅಪಸ್ವರ ಕೇಳಿ ಬಂದಿದೆ.

ರೋಸ್ಟರ್‌ ನಿಯಮ ಗಾಳಿಗೆ ತೂರಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರನ್ನು ಕಡೆಗಣಿಸಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಪರಿಶಿಷ್ಟರ ಪರವಾದ ಸಂಘಟನೆಗಳು ಆರೋಪಿಸಿವೆ. ದಲಿತ ಹಕ್ಕುಗಳ ಸಮಿತಿ–ಕರ್ನಾಟಕ, ವಿಜಯನಗರ ಬುದ್ಧ–ಬಸವ– ಅಂಬೇಡ್ಕರ್‌ ಟ್ರಸ್ಟ್‌, ತಾಲ್ಲೂಕು ಪ್ರಗತಿಪರ ಸಂಘಟನೆಗಳು ನೇಮಕಾತಿಗೆ ಅಪಸ್ವರ ಎತ್ತಿವೆ. ಈ ಸಂಬಂಧ ಕುಲಪತಿ ಪ್ರೊ. ಸ.ಚಿ.ರಮೇಶ ಅವರಿಗೆ ಮನವಿ ಪತ್ರ ಸಲ್ಲಿಸಿವೆ. ಅಧಿಸೂಚನೆ ರದ್ದುಪಡಿಸಿ, ಹೊಸದಾಗಿ ಹೊರಡಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

ಇದರ ನಡುವೆ ವಿಶ್ವವಿದ್ಯಾಲಯವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದ್ದ ಅಕ್ಟೋಬರ್‌ 8 ಕೊನೆಯ ದಿನಾಂಕವನ್ನು ಅ.21ರ ವರೆಗೆ ವಿಸ್ತರಿಸಿದೆ. ಆದರೆ, ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸರ್ಕಾರದ ನಿಯಮದಂತೆಯೇ ಮಿಸ್ಸಿಂಗ್‌ ರೋಸ್ಟರ್‌ ಅಡಿ ಹುದ್ದೆಗಳನ್ನು ತುಂಬಲಾಗುತ್ತಿದೆ. ತನ್ನ ನಿಲುವಿನಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ.

ಶಿಕ್ಷಣ ತಜ್ಞರು ಏನೆನ್ನುತ್ತಾರೆ?

ಕನ್ನಡ ವಿಶ್ವವಿದ್ಯಾಲಯದವರು ರೋಸ್ಟರ್‌ ನಿಯಮದಡಿ ಬೋಧಕ ಹುದ್ದೆಗಳನ್ನು ತುಂಬುತ್ತಿದ್ದು, ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಿಕ್ಷಣ ತಜ್ಞರೊಬ್ಬರು ಹೇಳಿದರೆ, ಇನ್ನೊಬ್ಬರು, ರೋಸ್ಟರ್‌ ನಿಯಮದಲ್ಲೇ ಅನೇಕ ಗೊಂದಲಗಳಿವೆ ಎಂದಿದ್ದಾರೆ.

‘ಕನ್ನಡ ವಿಶ್ವವಿದ್ಯಾಲಯವರು ರೋಸ್ಟರ್‌ ನಿಯಮದ ಪ್ರಕಾರ, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371(ಜೆ) ಅಡಿಯಲ್ಲೇ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ನಿಯಮಗಳನ್ನು ಅನುಸರಿಸುತ್ತಿದ್ದಾರೆ’ ಎನ್ನುತ್ತಾರೆ ಹೋರಾಟಗಾರ, ಶಿಕ್ಷಣ ತಜ್ಞ ರಜಾಕ್‌ ಉಸ್ತಾದ್‌.

‘ರೋಸ್ಟರ್‌ ಅನ್ನು ಆಯಾ ರಾಜ್ಯಗಳು ಬೇರೆ ರೀತಿಯಲ್ಲಿ ನಿರ್ಧರಿಸುತ್ತಿವೆ. ನ್ಯಾಯಾಲಯ ಇದರ ಬಗ್ಗೆ ಸ್ಪಷ್ಟತೆ ಕೊಡಬೇಕು. ರೋಸ್ಟರ್‌ ಬಿಂದು ನಿರ್ದಿಷ್ಟವಾಗಿ ನಿಗದಿಪಡಿಸಬೇಕು. ಇಲ್ಲವಾದಲ್ಲಿ ವಿಶ್ವವಿದ್ಯಾಲಯದ ವಿಭಾಗವಾರು ನೇಮಕ ಮಾಡಬೇಕು’ ಎಂದು ಶಿಕ್ಷಣ ತಜ್ಞ ಶ್ರೀಪಾದ ಭಟ್‌ ಹೇಳಿದರು.

ಗೊಂದಲದಲ್ಲಿ ಅಭ್ಯರ್ಥಿಗಳು

ಹುದ್ದೆಗಳಿಗೆ ಅನೇಕ ಅಭ್ಯರ್ಥಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈಗ ಉಂಟಾಗಿರುವ ಗೊಂದಲದಿಂದ ಅವರೂ ಗೊಂದಲಕ್ಕೆ ಒಳಗಾಗಿದ್ದಾರೆ. ಮುಂದೇನಾಗುತ್ತೋ ಎಂಬ ಆತಂಕದಲ್ಲಿ ಇದ್ದಾರೆ. ಮತ್ತೆ ಕೆಲವರು ಅರ್ಜಿ ಸಲ್ಲಿಸಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿ ಮುಳುಗಿದ್ದಾರೆ.

ಮಿಸ್ಸಿಂಗ್‌ ರೋಸ್ಟರ್‌ ಪ್ರಕಾರ ನೇಮಕಾತಿ

ರೋಸ್ಟರ್‌ 1ರಿಂದ 100 ಬಿಂದುವರೆಗೆ ಆಯಾ ವರ್ಗವಾರು ಮೀಸಲಾತಿ ಪ್ರಕಾರ ಬೋಧಕ ಹುದ್ದೆಗಳ ನೇಮಕಾತಿ ಮಾಡಲಾಗುತ್ತದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 1ರಿಂದ 89 ಬಿಂದುವರೆಗೆ ಈಗಾಗಲೇ ನೇಮಕ ಪ್ರಕ್ರಿಯೆ ಮುಗಿದಿದೆ. ಈಗ 90 ಬಿಂದು ಪ್ರಕಾರ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರ ಪ್ರಕಾರ, ಈ ಹಿಂದೆ ಭರ್ತಿಯಾಗದ ಹುದ್ದೆಗಳನ್ನು ಇದರಡಿ ನೇಮಕ ಮಾಡಲಾಗುತ್ತಿದೆ.

1992ರಲ್ಲಿ ಆರಂಭಗೊಂಡ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಇದುವರೆಗೆ ಒಟ್ಟು 90 ಕಾಯಂ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ರೋಸ್ಟರ್‌ ಪ್ರಕಾರ, ಪರಿಶಿಷ್ಟ ಜಾತಿಯ 14, ಪರಿಶಿಷ್ಟ ಪಂಗಡ 3, ಸಾಮಾನ್ಯ ವರ್ಗಕ್ಕೆ 45 ಹುದ್ದೆಗಳು ಬರುತ್ತವೆ. ಆದರೆ, ಪರಿಶಿಷ್ಟ ಜಾತಿಯ 20 (6 ಹೆಚ್ಚುವರಿ), ಪರಿಶಿಷ್ಟ ಪಂಗಡದ 8 (5 ಹೆಚ್ಚುವರಿ), ಸಾಮಾನ್ಯ ವರ್ಗದ 27 (18 ಕಡಿಮೆ) ಹುದ್ದೆಗಳು ಭರ್ತಿಯಾಗಿವೆ. ಮಿಸ್ಸಿಂಗ್‌ ರೋಸ್ಟರ್‌ನಲ್ಲಿ ಸಾಮಾನ್ಯ ವರ್ಗದ ಹುದ್ದೆಗಳನ್ನು ಭರ್ತಿ ಮಾಡಬೇಕಿರುವುದರಿಂದ ಈಗ ಅದರ ಆಧಾರದ ಮೇಲೆ ಹುದ್ದೆಗಳನ್ನು ತುಂಬಲಾಗುತ್ತಿದೆ ಎನ್ನುವುದು ವಿಶ್ವವಿದ್ಯಾಲಯದ ವಾದ.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ–1, ಸಹ ಪ್ರಾಧ್ಯಾಪಕ–7, ಸಹಾಯಕ ಪ್ರಾಧ್ಯಾಪಕರ–9 ಹುದ್ದೆಗಳ ಪ್ರವರ್ಗವಾರು ಮೀಸಲಾತಿ ವಿವರ ಇಂತಿದೆ
ವಿಭಾಗ;ಮೀಸಲು ವರ್ಗ;ಅಭ್ಯರ್ಥಿ ಸಿಗದಿದ್ದಲ್ಲಿ ಬದಲಿ ಮೀಸಲಾತಿ
ಕನ್ನಡ ಸಾಹಿತ್ಯ ಅಧ್ಯಯನ;ಸಾಮಾನ್ಯ;ಸಾಮಾನ್ಯ
ಕನ್ನಡ ‌ಸಾಹಿತ್ಯ/ಮಹಿಳಾ ಅಧ್ಯಯನ;ಸಾಮಾನ್ಯ;ಸಾಮಾನ್ಯ
ವರ್ಗ–1;ವರ್ಗ–1
ಜಾನಪದ ಅಧ್ಯಯನ;ಸಾಮಾನ್ಯ; ಸಾಮಾನ್ಯ
ಭಾಷಾಂತರ ಅಧ್ಯಯನ (ಆಂಗ್ಲ);ಸಾಮಾನ್ಯ; ಸಾಮಾನ್ಯ
ಅಭಿವೃದ್ಧಿ ಅಧ್ಯಯನ (ಗ್ರಾಮೀಣಾಭಿವೃದ್ಧಿ);ಸಾಮಾನ್ಯ ಗ್ರಾಮೀಣ; ಸಾಮಾನ್ಯ ಗ್ರಾಮೀಣ
ಅಭಿವೃದ್ಧಿ ಅಧ್ಯಯನ (ಅರ್ಥಶಾಸ್ತ್ರ):ಸಾಮಾನ್ಯ ಮಹಿಳೆ;ಸಾಮಾನ್ಯ
ಪ್ರಾಚೀನ ಇತಿಹಾಸ/ಪುರಾತತ್ವ ಅಧ್ಯಯನ;ಸಾಮಾನ್ಯ; ಸಾಮಾನ್ಯ
ಕನ್ನಡ ಸಾಹಿತ್ಯ/ಮಹಿಳಾ ಅಧ್ಯಯನ; ಸಾಮಾನ್ಯ (ಕನ್ನಡ ಮಾಧ್ಯಮ); ಸಾಮಾನ್ಯ
ಸಾಮಾನ್ಯ; ಸಾಮಾನ್ಯ
ಕನ್ನಡ ಸಾಹಿತ್ಯ (ನಾಟಕ); ಸಾಮಾನ್ಯ;ಸಾಮಾನ್ಯ
ಭಾಷಾಂತರ ಅಧ್ಯಯನ (ಆಂಗ್ಲ);ಪರಿಶಿಷ್ಟ ಜಾತಿ (ಅಂಗವಿಕಲ); ಪರಿಶಿಷ್ಟ ಜಾತಿ
ಶಾಸನಶಾಸ್ತ್ರ;ಸಾಮಾನ್ಯ (ಮಾಜಿ ಸೈನಿಕ); ಸಾಮಾನ್ಯ
ಪ್ರಾಚೀನ ಇತಿಹಾಸ/ಪುರಾತತ್ವ ಅಧ್ಯಯನ;ಸಾಮಾನ್ಯ;ಸಾಮಾನ್ಯ
ಅಭಿವೃದ್ಧಿ ಅಧ್ಯಯನ (ಸಮಾಜಶಾಸ್ತ್ರ);ಸಾಮಾನ್ಯ;ಸಾಮಾನ್ಯ
ಸಂಗೀತ ಮತ್ತು ನೃತ್ಯ;ಪ್ರವರ್ಗ–2ಎ (ಅಂಗವಿಕಲ); 2ಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT